Advertisement

Gujarat: ವಂದೇ ಮೆಟ್ರೋ ಹೆಸರು ಬದಲಾಯಿಸಿದ ಸರ್ಕಾರ; ಇನ್ಮುಂದೆ…

12:47 PM Sep 16, 2024 | Team Udayavani |

ಹೊಸದಿಲ್ಲಿ: ಬಹು ನಿರೀಕ್ಷಿತ ವಂದೇ ಮೆಟ್ರೋವನ್ನು (Vande Metro) ಭಾರತೀಯ ರೈಲ್ವೇ ಅಧಿಕೃತವಾಗಿ “ನಮೋ ಭಾರತ್ ರಾಪಿಡ್ ರೈಲು” (Namo Bharat Rapid Rail) ಎಂದು ಮರುನಾಮಕರಣ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಜನ್ಮದಿನದ ಮುನ್ನಾ ದಿನವಾದ ಸೋಮವಾರ (ಸೆ.16) ಗುಜರಾತ್‌ ನಲ್ಲಿ ದೇಶದ ಮೊದಲ ನಮೋ ಭಾರತ್ ರಾಪಿಡ್ ರೈಲು ಸೇವೆಯನ್ನು ಉದ್ಘಾಟಿಸಲಿದ್ದಾರೆ.

Advertisement

ನಮೋ ಭಾರತ್ ರಾಪಿಡ್ ರೈಲು ಗುಜರಾತ್‌ ನ ಕಚ್ ಜಿಲ್ಲೆಯಲ್ಲಿರುವ ಭುಜ್ ಪ್ರದೇಶವನ್ನು ರಾಜ್ಯದ ಅತಿದೊಡ್ಡ ನಗರಗಳಲ್ಲಿ ಒಂದಾದ ಅಹಮದಾಬಾದ್‌ ನೊಂದಿಗೆ ಸಂಪರ್ಕಿಸುತ್ತದೆ. ಇದು ಕೇವಲ ಆರು ಗಂಟೆಗಳಲ್ಲಿ 360 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.

ಟಿಕೆಟ್‌ಗಳನ್ನು ಕಾಯ್ದಿರಿಸದೆ ಜನರಿಗೆ ಈ ರೈಲಿನಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅದು ವಾರದ 6 ದಿನಗಳಲ್ಲಿ “ನಮೋ ಭಾರತ್ ರಾಪಿಡ್ ರೈಲುʼ ಸಂಚರಿಸಲಿದೆ ಎಂದು ಪಶ್ಚಿಮ ರೈಲ್ವೇಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರದೀಪ್‌ ಶರ್ಮಾ ತಿಳಿಸಿದ್ದಾರೆ.

ಈ ರೈಲು ತನ್ನ ಮಾರ್ಗದಲ್ಲಿ 9 ನಿಲುಗಡೆಗಳನ್ನು ಹೊಂದಿದೆ. ಸದ್ಯ 12 ಬೋಗಿಗಳ ಮೆಟ್ರೋ ರೈಲಿಗೆ ಚಾಲನೆ ನೀಡಲು ಚಿಂತಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ 16 ಬೋಗಿಗಳ ರೈಲಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

Advertisement

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಮಾದರಿಯಲ್ಲಿಯೇ “ನಮೋ ಭಾರತ್ ರಾಪಿಡ್ ರೈಲುʼವನ್ನು ನಿರ್ಮಿಸಲಾಗಿದೆ. ಅದರಲ್ಲಿ ಸ್ವಯಂ ಚಾಲಿತ ಬಾಗಿಲುಗಳು ಇರಲಿವೆ. ಜತೆಗೆ ಕೋಚ್‌ನಲ್ಲಿ 4 ಸ್ವಯಂ ಚಾಲಿತ ಬಾಗಿಲುಗಳನ್ನು ಇರಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್‌ ಚಾರ್ಜ್‌ ಮಾಡುವ ವ್ಯವಸ್ಥೆಯನ್ನೂ ಭಾರತೀಯ ರೈಲ್ವೇ ಕಲ್ಪಿಸಿಕೊಡಲಿದೆ.

ಮೆಟ್ರೋ ವಿಶೇಷತೆಗಳು

ಎಲ್ಲ ಬೋಗಿಗಳು ಹವಾನಿಯಂತ್ರಕ ವ್ಯವಸ್ಥೆ ಹೊಂದಿರುತ್ತವೆ.

ಸ್ವಯಂಚಾಲಿತ ಬಾಗಿಲುಗಳು, ಪ್ರತಿ ವಂದೇ ಭಾರತ್‌ ಬೋಗಿಯಲ್ಲಿ ನಾಲ್ಕು ಸ್ವಯಂಚಾಲಿತ ಬಾಗಿಲುಗಳು ಹೊಂದಿವೆ.

ಪ್ರಯಾಣಿಕರ ಲಗೇಜ್‌ ಇಡಲು ವ್ಯವಸ್ಥೆ

ಮೊಬೈಲ್‌ ಚಾರ್ಜಿಂಗ್‌ ಸೌಲಭ್ಯ

“ಕವಚ್‌’ರೈಲು ಅಪಘಾತ ತಡೆ ಸೌಲಭ್ಯ

ನಮೋ ಭಾರತ್ ರಾಪಿಡ್ ರೈಲು 16 ಬೋಗಿಗಳಲ್ಲಿ 1,150 ಪ್ರಯಾಣಿಕರು ಕುಳಿತುಕೊಂಡು ಪ್ರಯಾಣಿಸಬಹುದು, ಹೆಚ್ಚುವರಿಯಾಗಿ 2,058 ಪ್ರಯಾಣಿಕರು ನಿಂತು ಪ್ರಯಾಣಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next