ಚಿಕ್ಕೋಡಿ: ಕಳೆದ ಆರು ತಿಂಗಳಿಂದ ಕೋವಿಡ್ ಹೊಡೆತಕ್ಕೆ ನಷ್ಟ ಅನುಭವಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗವು ಈಗ ಹಂತ ಹಂತವಾಗಿ ಆದಾಯದಲ್ಲಿ ಚೇತರಿಸಿಕೊಳ್ಳುತ್ತಿದೆ. ಲಾಕ್‌ಡೌನ್ ತೆರವುಗೊಂಡಿರುವ ಪರಿಣಾಮ ದಿನದಿಂದ ದಿನಕ್ಕೆ ಪ್ರಯಾಣಿಕರು ಬಸ್ ಕಡೆ ವಾಲುತ್ತಿದ್ದಾರೆ.
ಕಳೆದ ಮಾರ್ಚ್ ಮೂರನೇ ವಾರದಿಂದ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಕೇಂದ್ರ ಮತ್ತು ರಾಜ್ಯ ಸರಕಾರ ಲಾಕ್‌ಡೌನ್ ಜಾರಿ ಮಾಡಿ ಬಸ್ ಸಂಚಾರ ನಿಷೇಧಿಸಿತ್ತು. ಹೀಗಾಗಿ ನಾಲ್ಕು ತಿಂಗಳು ಬಸ್ ಓಡಾಟ ನಡೆಸದೇ ನಿಲ್ದಾಣದಲ್ಲಿ ನಿಂತುಕೊಂಡಿದ್ದವು. ನಂತರ ಜೂನ್ ಆರಂಭದಲ್ಲಿ ಸರಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ ಅವಶ್ಯವಿದ್ದಲ್ಲಿ ಬಸ್ ಸಂಚಾರ ಆರಂಭ ಮಾಡಿತ್ತು. ಆದರೆ ಜನರಿಂದ ಅಷ್ಟೊಂದು ಪ್ರತಿಕ್ರಿಯೆ ಬರದಿರುವುದರಿಂದ ಸಾರಿಗೆ ಸಂಸ್ಥೆಯು ನಷ್ಟ ಉಂಟಾಗಿತ್ತು. ಸಮರ್ಪಕ ಬಸ್ ಓಡಾಟ ನಡೆಸಿದರೂ ಆದಾಯದಲ್ಲಿ ಅಷ್ಟೊಂದು ಏರಿಕೆ ಕಂಡು ಬರಲಿಲ್ಲ, ಈಗ ಲಾಕ್‌ಡೌನ ಸಂಪೂರ್ಣ ತೆರವುಗೊಳಿಸಿದ್ದರಿಂದ ಜನರು ಬಸ್ ಕಡೆ ವಾಲುತ್ತಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗ ವ್ಯಾಪ್ತಿಯ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಗೋಕಾಕ, ರಾಯಬಾಗ ಮತ್ತು ಅಥಣಿ ಘಟಕಗಳ ವ್ಯಾಪ್ತಿಯಲ್ಲಿ 630 ಮಾರ್ಗಗಳಲ್ಲಿ ಈಗ 410 ಮಾರ್ಗಗಳಲ್ಲಿ ಬಸ್ ಸಂಚಾರ ಮಾಡುತ್ತಿವೆ. ಕಳೆದ ಹದಿನೈದು ದಿನಗಳ ಹಿಂದೆ ಪ್ರತಿದಿನ 14 ರಿಂದ 15 ಲಕ್ಷ ಆದಾಯ ಬರುತ್ತಿತ್ತು. ಈಗ ಪ್ರತಿನಿತ್ಯ 20 ರಿಂದ 25 ಲಕ್ಷ ಆದಾಯ ಬರುವುದರಿಂದ ಸಂಸ್ಥೆಯು ಚೇರಿಕೆ ಕಾಣುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಮಹಾರಾಷ್ಟ್ರಕ್ಕೆ ಬಸ್ ಬಿಡಲು ಸಿದ್ಧತೆ: ಕೆಎಸ್‌ಆರ್‌ಟಿಸಿ ಚಿಕ್ಕೋಡಿ ವಿಭಾಗೀಯ ವ್ಯಾಪ್ತಿಯ ನಿಪ್ಪಾಣಿ, ಚಿಕ್ಕೋಡಿ, ಅಥಣಿ ಮತ್ತು ಗೋಕಾಕ ಘಟಕಗಳಿಂದ ಮಹಾರಾಷ್ಟ್ರಕ್ಕೆ ಬಸ್ ಸಂಚರಿಸಲು ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ ಜಿಲ್ಲೆಯ ಎಂಎಸ್‌ಆರ್‌ಟಿಸಿ ಅಧಿಕಾರಿಗಳು ಚಿಕ್ಕೋಡಿ ವಿಭಾಗೀಯ ಕಚೇರಿಗೆ ಭೇಟಿ ನೀಡಿ ಹೋಗಿದ್ದು, ಬರುವ ವಾರದಲ್ಲಿ ನಿರ್ಧಾರ ತಿಳಿಸುವುದಾಗಿ ಭರವಸೆ ನೀಡಿದ್ದಾರೆ. ಎರಡೂ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದ್ದಲ್ಲಿ ಅಂತಾರಾಜ್ಯಗಳಿಗೆ ಬಸ್ ಸಂಚಾರ ಆರಂಭ ಮಾಡಲಿವೆ.
ಪ್ರತಿ ಹಳ್ಳಿಗೆ ಬಸ್ ಆರಂಭ: ಕಳೆದೊಂದು ವಾರದಿಂದ ಪ್ರತಿ ಹಳ್ಳಿಗೂ ಬಸ್ ಬಿಡುವ ವ್ಯವಸ್ಥೆ ನಡೆಯುತ್ತಿದೆ. ಬಸ್ ಚಾಲಕ, ನಿರ್ವಾಹಕರ ಜತೆಗೆ ಬಸ್‌ಗಳಿಗೂ ಕೂಡ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಮಾಸ್ಕ್ ಇದ್ದರೆ ಮಾತ್ರ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡುತ್ತಿದ್ದಾರೆ.
ಬಸ್ ಕಡೆ ಜನ ವಾಲುತ್ತಿದ್ದಾರೆ. ಬಸ್‌ಗಳ ಸಂಚಾರ ಮಾರ್ಗದಲ್ಲಿ ಹೆಚ್ಚಳವಾಗುತ್ತಿದೆ. ಆರ್ಥಿಕವಾಗಿ ಸಂಸ್ಥೆಯು ಚೇತರಿಕೆ ಕಾಣುತ್ತಿದೆ. ಸರಕಾರ ಒಪ್ಪಿದ್ದಲ್ಲಿ ಅಂತಾರಾಜ್ಯಗಳಿಗೆ ಬಸ್ ಬಿಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
– ಶಶಿಧರ ಬಿ.ಎಂ., ವಿಭಾಗೀಯ ನಿಯಂತ್ರಣಾಧಿಕಾರಿ.
– ಮಹಾದೇವ ಪೂಜೇರಿ