ಹುಮನಾಬಾದ: ಕ್ರಿಯಾ ಯೋಜನೆ ಪ್ರಕಾರ ಸರ್ಕಾರಿ ಕಟ್ಟಡವನ್ನು ನಿರ್ಮಿಸದ ಕಾರಣ ಜೆಸಿಬಿ ಮೂಲಕ ತೆರವುಗೊಳಿ ಸುತ್ತಿರುವ ಘಟನೆ ಗುರುವಾರ ನಡೆದಿದೆ.
ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಆಡಿಟೋರಿಯಂ ಕಟ್ಟಡ ನಿರ್ಮಾಣ ಕಾಮಗಾರಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆ ಅಡಿಯಲ್ಲಿ ಸುಮಾರು 55 ಲಕ್ಷ ಮೊತ್ತದಲ್ಲಿ ನಡೆದಿದ್ದು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆ ವತಿಯಿಂದ ಕಾಮಗಾರಿ ಮಾಡಲಾಗುತ್ತಿದೆ.
ಕಳೆದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿರುವ ಕಟ್ಟಡ ಕಾಮಗಾರಿ ಕಳೆದ ಕೆಲ ತಿಂಗಳಿಂದ ಕಾಮಗಾರಿ ಆರಂಭಗೊಂಡಿದೆ. ಅಧಿಕಾರಿಗಳ ನೇತೃತ್ವದಲ್ಲಿಯೇ ಈಗಾಗಲೇ ಅರ್ಧ ಕಟ್ಟಡ ಕಾಮಗಾರಿ ಮಾಡಲಾಗಿದ್ದು, ಇದೀಗ ಲೋಪದೋಷ ಸರಿಪಡಿಸುವ ನಿಟ್ಟಿನಲ್ಲಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಈ ಕುರಿತು ತಾಪಂ ಮಾಜಿ ಅಧ್ಯಕ್ಷ ಸಂಜುರೆಡ್ಡಿ ನಿರ್ಣಾ ಕಾಮಗಾರಿ ಮಾಡುತ್ತಿರುವ ಇಲಾಖೆಯ ತಾಲೂಕು ಅಧಿಕಾರಿ ಹಾಗೂ ಮೇಲಧಿ ಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ, ನಿಯಮ ಅನುಸಾರ ಕಾಮಗಾರಿ ಮಾಡುವಂತೆ ಇಲ್ಲಿನ ಅಧಿಕಾರಿಗೆ ಸೂಚಿಸಿದ್ದಾರೆ. ಕಾರಣ ಇಲ್ಲಿ ನಡೆದ ಕಟ್ಟಡ ಕಾಮಗಾರಿ ತೆರವುಗೊಳಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಸಂಜುರೆಡ್ಡಿ ನಿರ್ಣಾ ತಿಳಿಸಿದ್ದಾರೆ. ಈ ಕುರಿತು ಕೆಆರ್‌ಐಡಿಎಲ್ ಇಲಾಖೆಯ ಸಹಾಯಕ ನಿರ್ದೇಶಕಿ ಮಹೇಶ್ವರಿ ಅವರನ್ನು ಸಂಪರ್ಕಿಸಿದ್ದು, ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಕಟ್ಟಡ ಕಾಮಗಾರಿ ಸರಿಪಡಿಸುವ ಕಾರ್ಯ ಮಾಡಲಾಗುತ್ತದೆ. ಕೆಲ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ತೆರವುಗೊಳಿಸಲಾಗುತ್ತಿದ್ದು, ದೋಷಗಳು ಸರಿಪಡಿಸಿ ಮತ್ತೆ ಕಟ್ಟಡ ಕಾಮಗಾರಿ ನಡೆಸುವುದಾಗಿ ಮಾಹಿತಿ ನೀಡಿದ್ದಾರೆ.