ನವದೆಹಲಿ: ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆಗಳ ಎರಡೂ ಡೋಸ್ ಪಡೆದಿರುವ 18 ವರ್ಷ ಮೇಲ್ಪಟ್ಟವರಿಗೆ “ಬಯೋಲಾಜಿಕಲ್ ಇ’ ಸಂಸ್ಥೆ ತಯಾರಿಸಿರುವ ಕಾರ್ಬಿವ್ಯಾಕ್ಸ್ ಲಸಿಕೆಯನ್ನು ಮುನ್ನೆಚ್ಚರಿಕಾ ಡೋಸ್ ರೂಪದಲ್ಲಿ ನೀಡುವುದಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ.
ಇದೇ ಮೊದಲನೇ ಬಾರಿಗೆ ಬೇರೆ ಕಂಪನಿಯ ಲಸಿಕೆಯನ್ನು ಮೊದಲ ಮತ್ತು ಎರಡನೇ ಡೋಸ್ ಆಗಿ ಪಡೆದವರಿಗೆ ಮತ್ತೊಂದು ಕಂಪನಿಯ ಲಸಿಕೆಯನ್ನು ಮೂರನೇ ಡೋಸ್ ಆಗಿ ನೀಡುವುದಕ್ಕೆ ಅನುಮತಿ ನೀಡಲಾಗಿದೆ.
ಕಾರ್ಬಿವ್ಯಾಕ್ಸ್ ಲಸಿಕೆಯನ್ನು ಈಗಾಗಲೇ 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತಿದೆ.
ಈ ಲಸಿಕೆಯ ಮೂರನೇ ಹಂತದ ಪರೀಕ್ಷೆಯ ವರದಿಯನ್ನು ಕೊರೊನಾ ಕಾರ್ಯಕಾರಿ ಸಮಿತಿಯು (ಸಿಡಬ್ಲ್ಯೂಜಿ) ಜು. 20ರ ಸಭೆಯಲ್ಲಿ ಪರಿಶೀಲಿಸಿದೆ. ಈ ಲಸಿಕೆಯು ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ ಎನ್ನುವುದನ್ನು ಸಭೆಯಲ್ಲಿ ಗಮನಿಸಲಾಗಿದೆ.
ಆ ಹಿನ್ನೆಲೆ ಈ ಲಸಿಕೆಯನ್ನು ಮುನ್ನೆಚ್ಚರಿಕಾ ಡೋಸ್ ಆಗಿ ಬಳಸುವುದಕ್ಕೆ ಭಾರತೀಯ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ)ಯು ಜೂ. 4ರಂದೇ ಅನುಮತಿ ಕೊಟ್ಟಿದೆ.