ಹೊಸದಿಲ್ಲಿ : ಭಾರತವನ್ನು ಪ್ರಬಲ ಆರ್ಥಿಕ ಶಕ್ತಿಕೇಂದ್ರವನ್ನಾಗಿ ಮಾಡಲು ನೂತನ ಸರಕಾರ ಉದ್ದೇಶಿಸಿದೆ ಎಂದು ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಹೇಳಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿಂದು 17ನೇ ಲೋಕಸಭೆಯ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಮಧ್ಯಮ ವರ್ಗದ ಜನರ ಹಿತಾಸಕ್ತಿಯನ್ನು ಕಾಪಿಡುವುದು ಮತ್ತು ಆಡಳಿತೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ನೂತನ ಸರಕಾರದ ಗುರಿಯಾಗಿದೆ ಎಂದು ಹೇಳಿದರು.
ಮುಂದಿನ ವರ್ಷದಲ್ಲಿ 25 ಲಕ್ಷ ಕೋಟಿ ರೂ.ಗಳ ಹೂಡಿಕೆ ಮಾಡಲಾಗುವುದು ಮತ್ತು 2022ರೊಳಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲಾಗುವುದು; ಸರಕಾರ ಈ ಗುರಿ ಸಾಧನೆಗೆ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೋವಿಂದ್ ಹೇಳಿದರು.
2024ರೊಳಗೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಸೀಟುಗಳನ್ನು ಶೇ.50ರಷ್ಟು ಹೆಚ್ಚಿಸುವ ದಿಶೆಯಲ್ಲಿ ಸರಕಾರ ಕೆಲಸ ಮಾಡುತ್ತಿದೆ ಮತ್ತು 2 ಕೋಟಿ ಹೆಚ್ಚವರಿ ಸೀಟುಗಳನ್ನು ಸೃಷ್ಟಿಸಲಿದೆ ಎಂದು ರಾಷ್ಟ್ರ ಪತಿ ಹೇಳಿದರು.
ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸುವ ದಿಶಯಲ್ಲಿ ತ್ರಿವಳಿ ತಲಾಕ್ ಮತ್ತು ನಿಕಾಹ್ ಹಲಾಲಾ ಪದ್ಧತಿಗಳನ್ನು ಕೊನೆಗೊಳಿಸಲು ಸರಕಾರ ಉದ್ದೇಶಿಸಿದೆ ಎಂದವರು ಹೇಳಿದರು.
ಆಯುಷ್ಮಾನ್ ಭಾರತ ಯೋಜನೆಯಡಿ 26 ಲಕ್ಷ ಬಡ ರೋಗಿಗಳಿಗೆ ಲಾಭವಾಗಿದೆ ಎಂದ ಅವರು 2022ರೊಳಗೆ 1.5 ಸ್ವಾಸ್ಥ್ಯ ಕೇಂದ್ರಗಳು ಕಾರ್ಯಾಚರಿಸಲಿವೆ ಎಂದು ಹೇಳಿದರು.