Advertisement

ಬಜೆಟ್ ನಲ್ಲಿ ಅನುಮೋದಿತ ಕಾರ್ಯಕ್ರಮಗಳ ತ್ವರಿತ ಅನುಷ್ಠಾನಕ್ಕೆ ಗೋವಿಂದ ಕಾರಜೋಳ ಸೂಚನೆ 

05:49 PM Apr 26, 2021 | Team Udayavani |

ಬೆಂಗಳೂರು : 2021- 22 ನೇ ಸಾಲಿನ ಬಜೆಟ್ ನಲ್ಲಿ ಅನುಮೋದಿಸಿದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಗತ್ಯವಾಗಿರುವ ಎಲ್ಲಾ ಸಿದ್ಧತೆಯನ್ನು ಕೈಗೊಂಡು, ಯಶಸ್ವಿಯಾಗಿ ಗುಣಮಟ್ಟದೊಂದಿಗೆ  ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ  ಲೋಕೋಪಯೋಗಿ ಇಲಾಖೆಯು ನಂ. 1 ಸ್ಥಾನದಲ್ಲಿರುವಂತೆ ಎಲ್ಲಾ ಅಭಿಯಂತರರು ಶ್ರಮಿಸಬೇಕು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

Advertisement

ಬೆಂಗಳೂರಿನಲ್ಲಿಂದು ವರ್ಚುವಲ್ ಸಭೆಯ  ಮೂಲಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ಡಿಸಿಎಂ, ಪ್ರಸಕ್ತ ಸಾಲಿನಲ್ಲಿ  ಒದಗಿಸಲಾದ ಅನುದಾನದಲ್ಲಿ ಶೇ. 50 ರಷ್ಟು ಅನ್ನು ಮುಂದುವರೆದ ಕಾಮಗಾರಿಗಳಿಗೆ ಹಾಗೂ ಶೇ. 50 ರಷ್ಟು ಹೊಸ ಕಾಮಗಾರಿಗಳಿಗೆ ಮೀಸಲಿರಿಸಿ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ತ್ವರಿತಗತಿಯಲ್ಲಿ ಅನುಷ್ಟಾನೊಳಿಸಲು ಸಕಲ ಸಿದ್ದತೆ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಕೋವಿಡ್ ನಿಯಂತ್ರಣಕ್ಕೆ ಪೂರಕವಾಗಿ ಕೈಗೊಳ್ಳುವ ಯಾವುದೇ ಕಟ್ಟಡ ನಿರ್ಮಾಣ, ಮೂಲಭೂತಸೌಕರ್ಯಗಳ ಅಭಿವೃದ್ಧಿಗೆ ಪೂರಕ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯು ಆದ್ಯತೆಯ ಮೇರೆಗೆ ಕಾರ್ಯನಿರ್ವಹಿಸಬೇಕು. ಇಂತಹ ಕಟ್ಟಡಗಳನ್ನು ಕೂಡಲೇ ಹಸ್ತಾಂತರಿಸಬೇಕು. ಖಾಲಿ ಇರುವ ಕಟ್ಟಡಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಸಹಕರಿಸಬೇಕು. ಇದಕ್ಕೆ ಪೂರಕವಾಗಿ ಯಾವುದೇ ಪ್ರಸ್ತಾವನೆಗಳು ಇದ್ದರೆ ಕೂಡಲೇ ಸರ್ಕಾರಕ್ಕೆ  ಸಲ್ಲಿಸಿ ಮಂಜೂರಾತಿ ನೀಡಲಾಗುವುದು ಎಂದು ಅವರು  ತಿಳಿಸಿದರು.

ಲೋಕೋಪಯೋಗಿ ಇಲಾಖೆಯು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕೋವಿಡ್ ನಿಯಮಾವಳಿಗಳು ಯಾವುದೇ ಅಡ್ಡಿಯಾಗುವುದಿಲ್ಲ. ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಅನುಮತಿ ನೀಡಿದೆ. ಈಗಾಗಲೇ ಅನುಷ್ಠಾನದಲ್ಲಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಕೈಗೊಳ್ಳುವ ಫೇಸ್ 4 ರ 2ನೇ  ಹಂತ  ಕಾಮಗಾರಿಗಳಿಗೆ 3 ತಿಂಗಳೊಳಗೆ ಟೆಂಟರ್ ಕರೆದು ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಬೇಕು. ಕಳೆದ ಸೆಪ್ಟಂಬರ್ ನಲ್ಲಿ ಮೇಲ್ದರ್ಜೆಗೇರಿಸಿದ ರಸ್ತೆಗಳ ನಿರ್ವಹಣೆ ಕಾರ್ಯಕ್ರಮವನ್ನು ಸಿದ್ದಪಡಿಸಿ ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ರಸ್ತೆ ನಿರ್ವಹಣಾ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು.  ಮುಂಗಾರು ಮಳೆ ಪ್ರಾರಂಭವಾಗುವುದಕ್ಕಿಂತ ಮುಂಚೆ ಗುಂಡಿ ಮುಚ್ಚುವ ಕಾಮಗಾರಿ ಹಾಗೂ    ರಸ್ತೆ ಬದಿಯಲ್ಲಿರುವ ಗಿಡ ಗಂಟಿಗಳನ್ನು ತೆರವುಗೊಳಿಸಬೇಕು ಎಂದು ಡಿಸಿಎಂ ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಡಾ. ಕೃಷ್ಣರೆಡ್ಡಿ, ಕೆಶಿಪ್ ಮುಖ್ಯಯೋಜನಾಧಿಕಾರಿ ಶ್ರೀ ವಿ. ಗುರುಪ್ರಸಾದ್,  ಇಲಾಖೆಯ  ಆರ್ಥಿಕ ಸಲಹೆಗಾರರಾದ ಡಾ. ಸೋಮನಾಥ್ ಎಲ್ಲಾ ವಿಭಾಗಗಳ  ಮುಖ್ಯಅಭಿಯಂತರರು, ಮುಖ್ಯಸ್ಥರು,  ಕಾರ್ಯನಿರ್ವಾಹಕ ಅಭಿಯಂತರರು ವರ್ಚುವಲ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next