ಕೆಲವೊಮ್ಮೆ ನಮಗೆ ಸಣ್ಣ ಸಣ್ಣ ವಿಚಾರಗಳು ಹೆಚ್ಚು ಖುಷಿಕೊಡುತ್ತವೆ, ನಮ್ಮನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಅಂತಹ ಕೆಲವು ಅಂಶಗಳನ್ನು ಒಟ್ಟಿಗೆ ಸೇರಿಸಿ ನಿಮ್ಮ ಮುಂದಿಟ್ಟರೆ ಹೇಗಿರಬಹುದು.. ಖಂಡಿತಾ ಅಲ್ಲೊಂದು ನಗೆಹಬ್ಬ ಆಗೋದು ಖಂಡಿತಾ. ನೀವು “ಗೋವಿಂದ ಗೋವಿಂದ’ ಸಿನಿಮಾ ನೋಡಿದಾಗ ಈ ಫೀಲ್ ಆಗೋದರಲ್ಲಿ ಅನುಮಾನವಿಲ್ಲ.
ಒಂದು ಮಜವಾದ ಕಥೆಯನ್ನು ನಿರ್ದೇಶಕರು ಅಷ್ಟೇ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಭರತನಾಟ್ಯ ಕಲಿಯುವ ಆಸೆಯ ಒಬ್ಟಾಕೆ, ಅಪ್ಪನ ವಿರೋಧ, ಕಿಡ್ನಾಪ್ ಪ್ರಹಸನ, ಸಿನಿಮಾ ನಿರ್ದೇಶಕನ ಕನಸು, ನಾಯಕಿಯ ಸೊಗಸು… ಈ ಮಧ್ಯೆ ಇಡೀ ಸಿನಿಮಾದಲ್ಲಿ ನಗು ನಗಿಸುವ ವೆಂಕಟೇಶ್, ಹರಿ, ಕೇಶವ್ ಪಾತ್ರಗಳು… ಹೀಗೆ ಮಜವಾದ ಸನ್ನಿವೇಶಗಳ ಮೂಲಕ ಇಡೀ ಸಿನಿಮಾವನ್ನು ಕಟ್ಟಿ ಕೊಡಲಾಗಿದೆ. ಜಾಲಿಯಾಗಿ ಸಾಗುವ ಸಿನಿಮಾದಲ್ಲಿ ಒಂದಷ್ಟು ಟ್ವಿಸ್ಟ್‌ಗಳು ಬಂದು ಪ್ರೇಕ್ಷಕರನ್ನು ಕುತೂಹಲಕ್ಕೆ ದೂಡುತ್ತದೆ. ಅದೇನೆಂಬುದನ್ನು ತೆರೆಮೇಲೆ ನೋಡಿದರೆ ಚೆಂದ.
ಇದನ್ನೂ ಓದಿ:‘ಸಖತ್’ ಚಿತ್ರ ವಿಮರ್ಶೆ: ಜಾಲಿ ರೈಡ್‌ನಲ್ಲಿ ಸಖತ್ ಥ್ರಿಲ್!
ಇಡೀ ಸಿನಿಮಾ ಕಾಮಿಡಿಯಾಗಿಯೇ ಸಾಗುತ್ತದೆ ಎಂದಲ್ಲ, ಸಿನಿಮಾದಲ್ಲಿ ಒಂದಷ್ಟು ಗಂಭೀರ ಸನ್ನಿವೇಶಗಳು ಇವೆ. ಜೊತೆ ಏಕಕಾಲದಲ್ಲಿ ಎರಡು ಟ್ರ್ಯಾಕ್‌ಗಳು ನಡೆಯುತ್ತಿರುತ್ತದೆ. ಒಂದು ನಿರ್ದೇಶಕನ ಕಥೆಯಾದರೆ, ಇನ್ನೊಂದು ಕಾಮಿಡಿ ಫ್ರೆಂಡ್ಸ್ ಕಥೆ. ನಿರ್ದೇಶಕರು ಈ ಎರಡೂ ಟ್ರ್ಯಾಕ್ ಅನ್ನು ನೀಟಾಗಿ ಬ್ಲೆಂಡ್ ಮಾಡಿದ್ದಾರೆ. ಇವತ್ತಿನ ಯಂಗ್ ಟ್ಯಾಲೆಂಟ್‌ಗಳಿಗೆ ಒಂದು ಸಂದೇಶವೂ ಈ ಚಿತ್ರದಲ್ಲಿದೆ.
ನಾಯಕ ಸುಮಂತ್ ಈ ಬಾರಿ ಕಾಮಿಡಿ ಜಾನರ್ ಪ್ರಯತ್ನಿಸಿದ್ದು, ಅದರಲ್ಲಿ ಯಶಸ್ವಿಯಾಗಿದ್ದಾರೆ ಕೂಡಾ. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ನಟನೆಯಲ್ಲೂ ಸುಮಂತ್ ಸಾಕಷ್ಟು ಪಳಗಿದ್ದಾರೆ. ಇವರಿಗೆ ಪವನ್ ಹಾಗೂ ವಿಜಯ್ ಚೆಂಡೂರ್ ಸಾಥ್ ನೀಡಿದ್ದಾರೆ. ಉಳಿದಂತೆ ರೂಪೇಶ್ ಶೆಟ್ಟಿ ಇಲ್ಲಿ ನಿರ್ದೇಶಕನ ಪಾತ್ರ ಮಾಡಿದರೆ, ಭಾವನಾ ಸಿನಿಮಾದೊಳಗೂ ನಾಯಕಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಟೆನ್ಶನ್ ಪಕ್ಕಕ್ಕಿಟ್ಟು ಚಿತ್ರಮಂದಿರದಲ್ಲಿ ಕೂಲ್ ಆಗಿ “ಗೋವಿಂದ’ ಸ್ಮರಣೆ ಮಾಡಬಹುದು
ಆರ್‌ಪಿ