Advertisement

ಗೋವಿಂದ ಭಟ್ಟರು ಪರಿಪೂರ್ಣ ಕಲಾವಿದ: ಡಾ|ಹೆಗ್ಗಡೆ

01:20 PM May 23, 2017 | Harsha Rao |

ಬೆಳ್ತಂಗಡಿ: ಯಾವುದೇ ಪಾತ್ರ ಕೊಟ್ಟರೂ ನಿಭಾಯಿಸಬಲ್ಲ ಸಾಮರ್ಥ್ಯ ಕಲಾವಿದನಿಗಿರಬೇಕು. ಅಂತಹ ಕಲಾಪ್ರೌಢಿಮೆ ಹೊಂದಿರುವ ಧರ್ಮಸ್ಥಳ ಮೇಳದ ಕಲಾವಿದ ಸೂರಿಕುಮೇರಿ ಕೆ. ಗೋವಿಂದ ಭಟ್ಟರು ಪರಿಪೂರ್ಣ ಕಲಾವಿದ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಸೋಮವಾರ ಸಂಜೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಕೆ. ಗೋವಿಂದ ಭಟ್ಟರು 66 ವರ್ಷಗಳ ಯಕ್ಷಗಾನ ತಿರುಗಾಟ, 50 ವರ್ಷಗಳ ಕಾಲ ಧರ್ಮಸ್ಥಳ ಮೇಳವೊಂದರಲ್ಲೇ ತಿರುಗಾಟ ನಡೆಸಿದ ಪ್ರಯುಕ್ತ ಹಮ್ಮಿಕೊಂಡ ಗೋವಿಂದ ಕಲಾಭಾವಾರ್ಪಣಂ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ಲೋಪವಾಗದಂತೆ ಕಾಲಮಿತಿ

ಧರ್ಮಸ್ಥಳ ಮೇಳವನ್ನು ವಿದ್ವಾಂಸರ ಜತೆ ಚರ್ಚಿಸಿ ಕಾಲಮಿತಿಗೆ ಒಳಪಡಿಸಲಾಗಿದೆ. ಆದರೆ ಯಕ್ಷಗಾನಕ್ಕೆ ಲೋಪವಾಗದಂತೆ ಜಾಗರೂಕವಾಗಿಸಲಾಗಿದೆ. ಜತೆಗೆ ಮರದ ಆಭರಣಗಳಂತಹ ಹಳೆಯ ಕ್ರಮಗಳನ್ನು ಉಳಿಸಲಾಗಿದೆ. ಕಾಲಮಿತಿಯಲ್ಲೂ ಪೂರ್ವರಂಗದಂತಹ ಸಂಪ್ರದಾಯಗಳನ್ನು ಇಟ್ಟುಕೊಳ್ಳಲಾಗಿದೆ. ಗೋವಿಂದ ಭಟ್ಟರು ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದ ಎಂಬುದರಲ್ಲಿ ಸಂಶಯವಿಲ್ಲ. ಅವರು ಶಕ್ತಿ ಇರುವಷ್ಟು ಸಮಯ ಧರ್ಮಸ್ಥಳ ಮೇಳದಲ್ಲಿ ಮುಂದುವರಿಯಲಿದ್ದಾರೆ ಎಂದು ಹೆಗ್ಗಡೆ ತಿಳಿಸಿದರು.

ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅವರು, ಗೋವಿಂದ ಭಟ್ಟರಿಗೆ ಪದ್ಮಶ್ರೀ ದೊರೆಯಲಿ ಎಂದರು. ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಮೇಳದ ಯಜಮಾನ, ಕಲಾಜೀವನಕ್ಕೆ ನೆರವಾದವರಿಗೆ ಗೌರವ ಸಲ್ಲಿಸುವ ಅಗ್ರಪೂಜೆ ಕಾಣುವ ಸುಯೋಗ ನಮ್ಮದಾಯಿತು ಎಂದರು.

ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಸಾವಿತ್ರಿ ಗೋವಿಂದ ಭಟ್‌ ಉಪಸ್ಥಿತರಿದ್ದರು.
ಹೆಗ್ಗಡೆ ದಂಪತಿಯನ್ನು ಗೋವಿಂದ ಭಟ್ಟ ದಂಪತಿ ಕಲಾಭಾವಾರ್ಪಣಂ ಮೂಲಕ ರಜತ ನಟರಾಜ ನೀಡಿ ಗೌರವಿಸಿದರು. ಗೋವಿಂದ ಭಟ್ಟರಿಗೆ ಚಿನ್ನದ ಕಡಗ, ಸಾವಿತ್ರಿ ಅವರಿಗೆ ಹವಳದ ಹಾರ ತೊಡಿಸಿ ಧರ್ಮಸ್ಥಳದ ವತಿಯಿಂದ ಸಮ್ಮಾನಿಸಲಾಯಿತು. 

Advertisement

ತೀರ್ಥಹಳ್ಳಿಯ ಪೂಜ್ಯಪಾದ ಕ್ಲಿನಿಕ್‌ನ ಡಾ| ಜೀವಂಧರ್‌ ಜೈನ್‌ ಹಾಗೂ ಹಾದಿಗಲ್ಲು ಅಭಯ ಲಕ್ಷ್ಮೀ ನರಸಿಂಹ ಕ್ಷೇತ್ರದ ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ಗೋವಿಂದ ಭಟ್ಟರು ಹಾಗೂ ಹೆಗ್ಗಡೆ ದಂಪತಿಯನ್ನು ಸಮ್ಮಾನಿಸಿದರು.
ಅಭಿನಂದನ ನುಡಿಯನ್ನು ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ನೆರವೇರಿಸಿದರು. ಉಜಿರೆ ಅಶೋಕ ಭಟ್‌ ಸ್ವಾಗತಿಸಿ, ಕೆ. ಗೋವಿಂದ ಭಟ್‌ ವಂದಿಸಿದರು. ಕಲಾವಿದ ವಾದಿರಾಜ ಕಲ್ಲೂರಾಯ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next