ಬೆಂಗಳೂರು: ರಾಜ್ಯದಲ್ಲಿ ನಿರ್ಮಿಸುವ ಹೆದ್ದಾರಿ ರಸ್ತೆಗಳನ್ನು ಗುಣಮಟ್ಟದಿಂದ ನಿರ್ಮಿಸಬೇಕು. ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವ ಏಜೆನ್ಸಿಗಳಿಗೆ ಕಡಿವಾಣ ಹಾಕಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಸೂಚಿಸಿದರು.
ವಿಕಾಸಸೌಧದಲ್ಲಿಂದು ನಡೆದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷ ತೆವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು. ಆಡಳಿತಾತ್ಮಕ ಅನುಮೋದನೆಯಂತೆಯೇ ಎಲ್ಲಾ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು ಎಂದರು.
ಕ್ಷೇತ್ರದಲ್ಲಿರುವ ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟವನ್ನು ನಿತಂತರವಾಗಿ ಪರಿಶೀಲಿಸುತ್ತಿರಬೇಕು. ಕೆಳಹಂತದ ಇಂಜಿನಿಯರ್ ಗಳನ್ನು ಹೊರಸಂಪನ್ಮೂಲದ ಮೂಲಕ ನೇಮಕ ಮಾಡುವುದನ್ನು ನಿಲ್ಲಿಸಿ, ನಿವೃತ್ತಿ ಹೊಂದಿದ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ವಿವಿಧ ರಸ್ತೆ ಕಾಮಗಾರಿಗಳ ಕುರಿತು ಚರ್ಚಿಸಿ, ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ಶ್ರೀ ಕಪಿಲ್ ಮೋಹನ್, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಜಾಫರ್, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಶ್ರೀ ಗುರು ಪ್ರಸಾದ್, ರಸ್ತೆ ನಿಗಮದ ಎಂಡಿ ಶ್ರೀ ಶಶಿಕುಮಾರ್, ಕೆಶಿಪ್ ಯೋಜನಾ ನಿರ್ದೇಶಕ ಶ್ರೀ ಕೆ.ಎಸ್.ಕೃಷ್ಣರೆಡ್ಡಿ, ಡಿಸಿಎಂ ಅವರ ಆಪ್ತಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ ಮತ್ತಿತರರು ಹಾಜರಿದ್ದರು.