Advertisement
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಕೋವಿಡ್ ಹಾಗೂ ಪ್ರವಾಹ ಸ್ಥಿತಿ ನಿರ್ವಹಣೆ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪುನರ್ವಸತಿ ಕಾಯ್ದೆ ಪ್ರಕಾರ ಸಂತ್ರಸ್ತರಿಗೆ 40×60 ಅಳತೆಯ ನಿವೇಶನದಲ್ಲಿ ಸೂರು ಒದಗಿಸಲು ಸಮರ್ಪಕ ಯೋಜನೆ ರೂಪಿಸಬೇಕು ಎಂದು ಹೇಳಿದರು.
Related Articles
Advertisement
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ ಬೆಳೆ, ರಸ್ತೆ, ಸೇತುವೆ ಇತರ ಮೂಲಸೌಕರ್ಯಗಳು ಸೇರಿದಂತೆ ಒಟ್ಟಾರೆ 7800 ಕೋಟಿ ರೂಪಾಯಿ ಹಾನಿಯಾಗಿದೆ. 21,300 ವಿದ್ಯುತ್ ಕಂಬಗಳು ಹಾಗೂ 5300 ಟ್ರಾನ್ಸ್ ಫಾರ್ಮರ್ ನೀರಿನಲ್ಲಿ ಮುಳುಗಡೆಯಾಗಿವೆ. ನೀರು ಕಡಿಮೆಯಾದ ಬಳಿಕ ಹಾನಿ ಅಂದಾಜು ಮಾಡಬೇಕು ಎಂದು ಹೇಳಿದರು.
ಜಂಟಿ ಸಮೀಕ್ಷೆ ಕೂಡಲೇ ಪೂರ್ಣಗೊಳಿಸಬೇಕು. ಜಮೀನಿನಲ್ಲಿ ನೀರಿರುವುದರಿಂದ ಒಂದು ವೇಳೆ ಸಮೀಕ್ಷೆಗೆ ಅಡ್ಡಿಯಾದರೆ ಜಿ.ಪಿ.ಎಸ್.ಆಧಾರಿತ ಸಮೀಕ್ಷೆಯ ಸಾಧ್ಯತೆ ಕುರಿತು ಪರಿಶೀಲಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ಸಲಹೆ ನೀಡಿದರು. ಮಳೆಯಿಂದ ವಿದ್ಯುತ್ ಪೂರೈಕೆ ತೊಂದರೆಯಾದ ಕಡೆಗಳಲ್ಲಿ ತಕ್ಷಣವೇ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಬೇಕು. ಒಂದು ವೇಳೆ ಪ್ರವಾಹ ಉಂಟಾದರೆ ನಂತರದ ದಿನಗಳಲ್ಲಿ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ ಅಗತ್ಯ ಪರಿಕರಗಳನ್ನು ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಕೋವಿಡ್ ಸಂಭವನೀಯ ಮೂರನೇ ಅಲೆ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆ ಮುಖ್ಯವಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್, ಔಷಧಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕಾಗಿ ಸೂಕ್ತ ಪ್ರಸ್ತಾವ ಸಲ್ಲಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ, ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ 418 ಹಾಸಿಗೆಗಳು ಲಭ್ಯವಿವೆ. ಆದರೆ ತುರ್ತು ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುವಂತೆ ಖಾಸಗಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಬೇಕು. ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಯ ಕೆಲಸ ತ್ವರಿತವಾಗಿ ಆಗಬೇಕು ಎಂದು ಸೂಚನೆ ನೀಡಿದರು.
ಬಾಕಿ ಉಳಿದಿರುವ ಆಕ್ಸಿಜನ್ ಘಟಕಗಳ ಸ್ಥಾಪನೆ ಹಾಗೂ ತುರ್ತು ನಿರ್ವಹಣೆಗೆ ಅನುಕೂಲವಾಗುವಂತೆ ಸ್ಥಳೀಯ ಉತ್ತಮ ಕಂಪನಿಗಳಿಗೆ ಕಾರ್ಯಾದೇಶ ನೀಡುವಂತೆ ತಿಳಿಸಿದರು.
ಇದನ್ನೂ ಓದಿ: ಮೇಕೆದಾಟು ಯೋಜನೆ ವಿಳಂಬಕ್ಕೆ ಕೇಂದ್ರವೇ ಕಾರಣ!
ಕೋವಿಡ್ ಸಂದರ್ಭದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಗುಣಮಟ್ಟದ ಚಿಕಿತ್ಸೆಗಾಗಿ ಅಗತ್ಯ ತಜ್ಞ ವೈದ್ಯರು ಮತ್ತು ಸಿಬ ಸಿಬ್ಬಂದಿ ನಿಯೋಜಿಸಬೇಕು. ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ಯಾರಾ ಮೆಡಿಕಲ್ ತರಬೇತಿ ನೀಡುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು ಎಂದರು.
ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ರವಾಹದಿಂದ ಜಿಲ್ಲೆಯಲ್ಲಿ ಬೆಳೆ, ಮೂಲಸೌಕರ್ಯ ಸೇರಿದಂತೆ ಒಟ್ಟಾರೆ ಅಂದಾಜು 7800 ಕೋಟಿ ರೂಪಾಯಿಗಿಂತ ಅಧಿಕ ನಷ್ಟವಾಗಿದೆ. ಸಮೀಕ್ಷೆಯ ಬಳಿಕ ಖಚಿತ ಮಾಹಿತಿ ಲಭಿಸಲಿದೆ ಎಂದು ಹೇಳಿದರು.
ಮಳೆಯಿಂದ ಚಿಕ್ಕೋಡಿ ವಿಭಾಗದಲ್ಲಿ ತೊಂದರೆಯಾಗಿದೆ. ಸಕಾಲದಲ್ಲಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಹಾನಿಯ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಯಿತು. ಅಥಣಿ ಭಾಗದಲ್ಲಿ 22 ಹಳ್ಳಿಗಳು ಜಲಾವೃತಗೊಂಡಿದ್ದವು. 230 ತಾತ್ಕಾಲಿಕ ಶೆಡ್ ನಿರ್ಮಿಸಿ ಜನರಿಗೆ ತುರ್ತು ವಸತಿ ಕಲ್ಪಿಸಲಾಗಿದೆ.
ಆದ್ಯತೆ ಮೇರೆಗೆ ತಲಾ ಹತ್ತು ಸಾವಿರ ರೂಪಾಯಿ ಪರಿಹಾರ ಆರ್.ಟಿ.ಜಿ.ಎಸ್. ಮೂಲಕ ನಿರ್ಧಾರ. ಈಗಾಗಲೇ ಬಹುತೇಕ ಪಟ್ಟಿ ಸಿದ್ಧಗೊಂಡಿದೆ. ಬೆಳೆಹಾನಿ ಜಂಟಿ ಸಮೀಕ್ಷೆ ಆರಂಭಿಸಲಾಗಿದೆ. ಆಗಸ್ಟ್ 15 ರ ವೇಳೆಗೆ ಮಳೆಯಿಂದ ಉಂಟಾಗಿರುವ ಮನೆ, ಬೆಳೆ ಹಾಗೂ ಮೂಲಸೌಕರ್ಯ ಹಾನಿಯ ಕುರಿತು ಸಮಗ್ರ ವರದಿ ಸಿದ್ಧಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ನದಿತೀರದ ಪ್ರದೇಶಗಳಲ್ಲಿ ಮಳೆ ಹಾಗೂ ನೀರು ಹರಿವು ಪ್ರಮಾಣಕ್ಕೆ ಸಂಬಂಧಿಸಿದಂತೆ ಪ್ರವಾಹ ಮುನ್ಸೂಚನೆ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ಮುನ್ಸೂಚನೆ ವ್ಯವಸ್ಥೆ ಮಾಡಬೇಕಿದೆ ಎಂದು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಸಚಿವರ ಗಮನಸೆಳೆದರು.
ಮಳೆಯಿಂದ ಉಂಟಾದ ಮನೆಹಾನಿಯ ಸಮೀಕ್ಷೆ ಮಾಹಿತಿಯನ್ನು ಅಪ್ ಲೋಡ್ ಮಾಡಲು ನಿಗದಿಪಡಿಸುವ ಸಮಯವನ್ನು ವಿಸ್ತರಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ ಸಿಇಓ ದರ್ಶನ್ ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಇದುವರೆಗೆ 5.59 ಲಕ್ಷ ಜನರ ಕೋವಿಡ್ ಪರೀಕ್ಷೆ ಮಾಡಲಾಗಿದ್ದು 496 ಪಾಸಿಟಿವ್ ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಸದ್ಯಕ್ಕೆ ಶೇ.0.84 ರಷ್ಟಿದೆ. ಕೋವಿಡ್ ಮರಣಪ್ರಮಾಣ ಶೇ.2.34 ರಷ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ತಿಳಿಸಿದರು. 460 ಬ್ಲ್ಯಾಕ್ ಫಂಗಸ್ ಇದರಲ್ಲಿ 300 ಕ್ಕೂ ಅಧಿಕ ಜನರು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. 49 ಜನರು ಬ್ಲ್ಯಾಕ್ ಫಂಗಸ್ ನಿಂದ ಮರಣ ಹೊಂದಿದ್ದಾರೆ ಎಂದರು.
ಜಿಲ್ಲೆಯಲ್ಲಿ ಒಟ್ಟಾರೆ 18 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. 199 ಕಾಳಜಿ ಕೇಂದ್ರದಲ್ಲಿ ಕೂಡ 30 ಸಾವಿರಕ್ಕೂ ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಡಾ.ಐ.ಪಿ.ಗಡಾದ ವಿವರಿಸಿದರು.
ಜಿಲ್ಲೆಯ ಒಟ್ಟಾರೆ 6.91 ಹೆಕ್ಟೇರ್ ಬಿತ್ತನೆ ಬೆಳೆಯ ಪೈಕಿ ಸೋಯಾಬಿನ್, ಕಬ್ಬು, ಹೆಸರು ಮತ್ತಿತರ ಬೆಳೆಹಾನಿಯಾಗಿದೆ. ಬೆಳೆಹಾನಿ ಜಂಟಿ ಸಮೀಕ್ಷೆ ಆರಂಭಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಹೊಸಮನಿ ತಿಳಿಸಿದರು.