ಹುಣಸೂರು: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್.ವಿಜಯಶಂಕರ್ ಅಧಿಕಾರ ಸ್ವೀಕರಿಸಿದ ನಂತರ ಸ್ವಕ್ಷೇತ್ರ ಹುಣಸೂರಿಗೆ ಮೊದಲ ಬಾರಿಗೆ ಆಗಮಿಸಿದ ಅವರು ತಾಲೂಕಿನ ಗದ್ದಿಗೆಯ ಕೆಂಡಗಣ್ಣಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ನಗರ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಧರ್ಮಾಪುರ, ರತ್ನಪುರಿ, ಕೊಯಮುತ್ತೂರು ಕಾಲನಿ, ಸುಭಾಷ್‌ನಗರ, ಹುಣಸೂರಿನ ವಿಜಯನಗರ ಬಡಾವಣೆಯಲ್ಲಿ ನಾಗರಿಕರು ಹಾಗೂ ಅಭಿಮಾನಿಗಳು, ಸಂಘ ಸಂಸ್ಥೆಗಳಿಂದ ಅಭಿನಂದನೆ ಸ್ವೀಕರಿಸಿದರು.
ನಗರದ ಎಂಡಿಸಿಸಿ ಬ್ಯಾಂಕ್ ವೃತ್ತದಲ್ಲಿ ಟಿಎಪಿಸಿಎಂಎಸ್ ವತಿಯಿಅದ ಸಮಿತಿ ಅಧ್ಯಕ್ಷ ಬಸವಲಿಂಗಯ್ಯ, ಉಪಾಧ್ಯಕ್ಷ ರೇವಣ್ಣ ಹಾಗೂ ಸದಸ್ಯರು ಸನ್ಮಾನಿಸಿದರು. ನಂತರ ಮೈಸೂರು ರಸ್ತೆಯ ಸಾಯಿಬಾಬಾ ಮಂದಿರ, ಕಲ್ಕುಣಿಕೆ ವೃತ್ತದ ಈಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸಾಯಿಬಾಬಾ ಮಂದಿರ ನಿರ್ಮಿಸಲು ನೆರವಾಗಿದ್ದು ಸ್ಮರಿಸಿದ ಟ್ರಸ್ಟಿ ಶಶಿಧರ್ ಮತ್ತಿತರರು ವಿಜಯಶಂಕರ್‌ರನ್ನು ಟ್ರಸ್ಟ್ ವತಿಯಿಂದ ಗೌರವಿಸಿದರು. ಕಲ್ಕುಣಿಕೆ ವೃತ್ತದ ಬಳಿಯ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ನಡೆದ ಆರಾಧನಾ ಮಹೋತ್ಸವ ಅಂಗವಾಗಿ ನಡೆದ ಅನ್ನಸಂತರ್ಪಣೆಯಲ್ಲಿ ಭಾಗಿಯಾದರು.
ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಹಾಗೂ ಶಾಸಕ ಹರೀಶ್‌ಗೌಡರನ್ನು ಸನ್ಮಾನಿಸಿದರು. ಈ ವೇಳೆ ಉಪ ವಿಭಾಗಾಧಿಕಾರಿ ವಿಜಯಕುಮಾರ್, ತಹಸೀಲ್ದಾರ್ ಮಂಜುನಾಥ್ ಇತರರಿದ್ದರು.