ಕೊಪ್ಪಳ: ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ತಾಲೂಕಿನ ಹನುಮನ ಜನ್ಮ ಸ್ಥಳ ಅಂಜನಾದ್ರಿಗೆ ಶುಕ್ರವಾರ(ಡಿ.9) ಬೆಳ್ಳಿಗ್ಗೆ ಭೇಟಿ ನೀಡಿ ಬೆಟ್ಟದ ಕೆಳಗಿರುವ ಶ್ರೀ ಆಂಜನೇಯನ ದರ್ಶನ ಪಡೆದರು.
ದೇಗುಲ ಮತ್ತು ಜಿಲ್ಲಾಡಳಿತದ ಪರವಾಗಿ ರಾಜ್ಯಪಾಲರಿಗೆ ಕುಂಭಕಳಸ ಸ್ವಾಗತ ಕೋರಲಾಯಿತು. ಬಳಿಕ ರಾಜ್ಯಪಾಲರು ಬೆಟ್ಟದ ಬಲಭಾಗದ ಕೆಳಗಿರುವ ಪಾದಗಟ್ಟೆ ಆಂಜನೇಯನ ಮೂರ್ತಿಗೆ ಪೂಜೆ ಸಲ್ಲಿಸಿ, ಆಂಜನೇಯನಿಗೆ ಮಂತ್ರಗಳ ಮೂಲಕ ಪುಷ್ಪಾಚರಣೆ ಮಾಡಿ, ನೈವೇದ್ಯ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ರಾಜ್ಯಪಾಲರು ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಅಂಜನಾದ್ರಿಗೆ ಆಗಮಿಸುವ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ನೀಡಿದ ನೀಲನಕ್ಷೆಯಂತೆ ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಈ ಕಾರ್ಯವನ್ನು ಬೇಗ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಅಂಜನಾದ್ರಿ ವಿಶ್ವಮಟ್ಟದಲ್ಲಿ ಬೆಳಸಲಾಗುವುದು ಎಂದರು.
ಈ ನಡುವೆ ರಾಜ್ಯಪಾಲರ ಭದ್ರತೆ ಹಿನ್ನೆಲೆ ಪೂಜೆಗೆ ಅವಕಾಶ ನೀಡದಿದ್ದಕ್ಕಾಗಿ ಕೆಲ ಹೊತ್ತು ಅಡಚಣೆಯಾದ ಘಟನೆ ನಡೆಯಿತು. ರಾಜ್ಯಪಾಲರ ಪೂಜಾ ಕಾರ್ಯಕ್ಕೆ ತಮಗೆ ಅವಕಾಶ ನೀಡುವಂತೆ ಅರ್ಚಕ ವಿದ್ಯಾದಾಸ ಬಾಬಾ ತಗಾದೆ ತೆಗೆದರು. ಜಿಲ್ಲಾಡಳಿತದ ಅಧಿಕಾರಿಗಳು ಪೂಜೆಗೆ ಅವಕಾಶ ನೀಡದಿರುವ ಬಗ್ಗೆ ಬೆಟ್ಟದ ತಟದಲ್ಲಿ ಅಧಿಕಾರಿಗಳೊಂದಿಗೆ ತಗಾದೆ ತೆಗೆದರು. ಪೂಜೆಗೆ ಅವಕಾಶ ನೀಡುವಂತೆ ವೇದಿಕೆ ಮೇಲೆ ಬಂದು ಕುಳಿತ ಅರ್ಚಕನನ್ನುಅಧಿಕಾರಿಗಳು ಬೇರೆಡೆ ಕರೆದುಕೊಂಡು ಹೋದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಎಸ್ಪಿ ಅರುಣಾಶ್ಯುಂ ಗಿರಿ, ಸಿಇಒ ಫೌಜೀಯಾ ತರನ್ನುಮ್,ಎಸಿ ಬಸವಣ್ಣೆಪ್ಪ ಕಲಶೆಟ್ಟಿ, ತಹಶಿಲ್ದಾರ್ ಯು.ನಾಗರಾಜ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ,ಇಒ ಮಹಾಂತಗೌಡ ಪಾಟೀಲ್ ಬಿಜೆಪಿ ಹಿರಿಯ ಮುಖಂಡ ಕೆಲೋಜಿ ಸಂತೋಷ , ರಮೇಶ ಸೇರಿ ಅನೇಕರಿದ್ದರು.