ತಿರುವನಂತಪುರಂ: ಕೇರಳದ ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ಅವರು ರಾಜ್ಯದ 9 ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಿಗೆ ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸೂಚಿಸಿದ್ದಾರೆ.
ಎ.ಪಿ.ಜಿ.ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಯುಜಿಸಿ ನಿಯಮ ಉಲ್ಲಂಘಿಸಿ ಉಪ ಕುಲಪತಿ ನೇಮಕ ಮಾಡಿಕೊಳ್ಳಲಾಗಿದ್ದು, ಆ ನೇಮಕವನ್ನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯಪಾಲರು ಈ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ರಾಜಶ್ರೀ ಎಂ.ಎಸ್ ಸೇರಿದಂತೆ ಒಟ್ಟು 9 ವಿಶ್ವವಿದ್ಯಾಲಯಗಳ ಉಪ ಕುಲಪತಿಗಳಿಗೆ ಈ ಸೂಚನೆ ನೀಡಲಾಗಿದೆ.
ಸೋಮವಾರ ಬೆಳಗ್ಗೆ 11.30ರ ಒಳಗಾಗಿ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ತಲುಪಿಸಬೇಕೆಂದೂ ಹೇಳಲಾಗಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ನಿಯಮದ ಪ್ರಕಾರ ಸರ್ಕಾರ ರಚಿಸುವ ಶೋಧ ಸಮಿತಿಯು ಇಂಜಿನಿಯರಿಂಗ್ ವಿಜ್ಞಾನ ವಿಷಯದಲ್ಲಿ ಪರಿಣಿತರಾಗಿರುವ ಕನಿಷ್ಠ ಮೂವರು ಹೆಸರನ್ನು ಸೂಚಿಸಬೇಕಿತ್ತು. ಆದರೆ ಅಬ್ದುಲ್ ಕಲಾಂ ವಿವಿ ವಿಚಾರದಲ್ಲಿ ಕೇವಲ ಒಬ್ಬರ ಹೆಸರನ್ನು ಮಾತ್ರ ಸೂಚಿಸಿ, ಅವರನ್ನೇ ಉಪ ಕುಲಪತಿಯನ್ನಾಗಿಸಲಾಗಿತ್ತು. ಇದರಿಂದಾಗಿ ನಿಯಮ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.