ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವ ರಾಯ ವಿವಿ ಬೋಧಕೇತರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಪ್ರವೇಶ ಪತ್ರಕ್ಕೆ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ಅವರ ಭಾವಚಿತ್ರ ಹಚ್ಚಿದ ಆರೋಪದಡಿ ಪೊಲೀಸರು ಗುರುವಾರ ಸುದ್ದಿ ವಾಹಿನಿ ವರದಿಗಾರ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಸಿಎಂ ಹಾಗೂ ರಾಜ್ಯಪಾಲರ ಭಾವಚಿತ್ರ ದುರ್ಬಳಕೆ ಮಾಡಿಕೊಂಡಿರುವ ಪ್ರಮುಖ ಆರೋಪಿ ಹಗರಿಬೊಮ್ಮನಹಳ್ಳಿ ತಾಲೂಕು ಹನಸಿ ಗ್ರಾಮದ ಮಂಜುನಾಥಯ್ಯ ಸಿ.ಎಂ., ಸುದ್ದಿವಾಹಿನಿಯೊಂದರ ವರದಿ ಗಾರ ವೀರೇಶ್ ದಾನಿ ಮತ್ತು ಚಿದಾನಂದ, ವೀರೇಶ ಎಂಬುವವರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?: ವಿಎಸ್‌ಕೆ ವಿವಿ ಯಲ್ಲಿನ ಬೋಧಕೇತರ ಹುದ್ದೆಗಳ ನೇಮ ಕಾತಿಗೆ 371(ಜೆ)ಅಡಿ ಅಧಿಸೂಚನೆ ಹೊರಡಿಸಲಾಗಿತ್ತು. ಇದರಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಮಂಜು ನಾಥಯ್ಯ ಸಿ.ಎಂ ಅರ್ಜಿ ಸಲ್ಲಿಸಿದ್ದರು. ಜೂ.3ರಂದು ಲಿಖೀತ ಪರೀಕ್ಷೆಗೆ ಹಾಜರಾಗಲು ಸೂಚಿಸಿ ವೆಬ್‌ಸೈಟ್‌ನಲ್ಲಿ ಪ್ರವೇಶ ಪತ್ರ ಬಿಡುಗಡೆ ಮಾಡಲಾಗಿತ್ತು. ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅಭ್ಯರ್ಥಿಗಳು ಖಾಲಿ ಜಾಗದಲ್ಲಿ ತಮ್ಮ ಭಾವಚಿತ್ರ ಅಂಟಿಸಲು ಸೂಚಿಸಲಾಗಿತ್ತು.
ಆದರೆ ಜೂ.3ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಗೈರು ಹಾಜರಾಗಿದ್ದ ಮಂಜು ನಾಥಯ್ಯ ಪ್ರವೇಶ ಪತ್ರದಲ್ಲಿ ತಮ್ಮ ಭಾವ ಚಿತ್ರ ಅಂಟಿಸುವ ಸ್ಥಳದಲ್ಲಿ ಸಿಎಂ ಕುಮಾರ ಸ್ವಾಮಿ ಹಾಗೂ ಮತ್ತೂಂದು ಪ್ರವೇಶ ಪತ್ರದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಭಾವಚಿತ್ರ ಅಂಟಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೂ ವಿವಿ ಆಡಳಿತ ಮಂಡಳಿ ತನಗೇನೂ ಸಂಬಂಧವಿಲ್ಲದಂತೆ ವರ್ತಿಸು ತ್ತಿದೆ ಎಂಬ ವಿಷಯದಡಿ ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ಸುದ್ದಿ ಪ್ರಸಾರವಾಗಿತ್ತು.
ವಿಶ್ವವಿದ್ಯಾಲಯಕ್ಕೆ ಧಕ್ಕೆ ಉಂಟು ಮಾಡುವ ಸಲುವಾಗಿ ಈ ಒಳಸಂಚು ಮಾಡಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸುದ್ದಿವಾಹಿನಿಯಲ್ಲಿ ಸುದ್ದಿಯನ್ನು ಪ್ರಸಾರ ಮಾಡಿ ಮಾಧ್ಯಮಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಪ್ರವೇಶ ಪತ್ರಗಳನ್ನು ಅಪ್‌ಲೋಡ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕುಲಪತಿ ಎಂ.ಎಸ್. ಸುಭಾಶ್ ದೂರು ದಾಖಲಿಸಿದ್ದರು.