Advertisement

ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರಗಳು: ಎಚ್‌ಡಿಕೆ

12:30 PM Feb 22, 2017 | Team Udayavani |

ತಿ.ನರಸೀಪುರ: ಹೈಕಮಾಂಡ್‌ಗೆ ಕಪ್ಪ ಕೊಡುವ ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮೀನಮೇಷ ಎಣಿಸುತ್ತಿದ್ದರೆ, ಅಧಿಕ ಮೌಲ್ಯದ ನೋಟುಗಳನ್ನು ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ರೈತರ ಬದುಕಿಗೆ ಬರೆ ಎಳೆದರು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು.

Advertisement

ತಾಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿರುವ ಶ್ರೀ ರಾಮಕೃಷ್ಣ ಸೇವಾ ಕೇಂದ್ರದಲ್ಲಿ ಆವರಣದಲ್ಲಿ ಮಂಗಳವಾರ ವಿಶ್ವಮಾನವ ಕುವೆಂಪು ಅವರ ಚಿತಾಭಸ್ಮ ಸಂರಕ್ಷಣಾ ಭವನದ ಶಂಕುಸ್ಥಾಪನೆ ನೇರವೇರಿಸಿದ ಬಳಿಕ ಹೊರಾವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದ ಮತ್ತು ಶ್ರೀ ರಾಮಕೃಷ್ಣ ಸೇವಾಕೇಂದ್ರದ ಪ್ರೌಢಶಾಲೆಯ ಬೆಳ್ಳಿಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾವಿರಾರು ಕೋಟಿ ರೂ. ಕಪ್ಪ ಕೊಡಲು ಹಣವಿದೆ. ರೈತರ ಸಾಲ ಮನ್ನಾ ಮಾಡಲು ಹಣವಿಲ್ಲ ಎನ್ನುತ್ತಾರೆ. ಪ್ರಸಕ್ತ ರಾಜ್ಯ ಬಜೆಟ್‌ನ ಗಾತ್ರ ಒಂದೂವರೆ ಲಕ್ಷ ಕೋಟಿ ರೂ.ಗಳಷ್ಟಿದೆ. ರಾಜ್ಯದಾದ್ಯಂತ ಬರಗಾಲ ಇರುವುದರಿಂದ ರೈತರು ಫ‌ಸಲು ನಾಶವಾಗಿದ್ದರಿಂದ 50ರಿಂದ 60 ಸಾವಿರ ಕೋಟಿ ರೂ. ನಷ್ಟವಾಗಿದ್ದರೂ ಕೇಂದ್ರ ಮತ್ತು ಸರ್ಕಾರಗಳು ಸಾಲ ಮನ್ನಾ ಮಾಡುವುದಕ್ಕೆ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡುವುದನ್ನು ಬಿಟ್ಟು ದೇಶದಲ್ಲಿನ ರೈತರ ಎರಡು ತಿಂಗಳ ಬಡ್ಡಿ ಮನ್ನಾ ಮಾಡಿಕೊಳ್ಳಲು 650 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ದೇಶದಲ್ಲಿನ 10 ಕೋಟಿ ರೈತರಿಗೆ ಅಷ್ಟೂ ಹಣವನ್ನು ಹಂಚಿಕೆ ಮಾಡಿದರೆ 60 ರೂ.ಗಳಷ್ಟೇ ಸಿಗಬಹುದು. ಮಧ್ಯೆಯಲ್ಲಿ ಸೋರಿಕೆಯಾದರೆ ಆ ಹಣ ಅನ್ನದಾತನಿಗೆ ತಲುಪುವುದಿಲ್ಲ.

ನೋಟುಗಳ ಅಮಾನ್ಯಕರಗೊಳಿಸಿ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತೇನೆ. ಶರೀಮಂತರನ್ನು ಬಡವರ ಮನೆ ಮುಂದೆ ಸರದಿಯಲ್ಲಿ ನಿಲ್ಲಿಸುತ್ತೇನೆ ಎಂದು ಪ್ರಧಾನ ಮಂತ್ರಿಗಳು ಅಬ್ಬರಿಸಿದ್ದರು. ಬಡವರು ದುಡಿದು ಕೂಡಿಟ್ಟಿದ್ದ ಹಣವನ್ನು ಉಳಿಸಿಕೊಳ್ಳಲಿಕ್ಕೆ ಎಟಿಎಂ ಮುಂದೆ ಸಾಲುಗಟ್ಟಿ ನಿಂತರೇ ವಿನಃ ಶ್ರೀಮಂತರ್ಯಾರೋ ಬಡವರ ಮನೆ ಮುಂದೆ ನಿಲ್ಲಲಿಲ್ಲ ಎಂದು ವ್ಯಂಗ್ಯವಾಡಿದರು.

Advertisement

ವಿಶ್ವಪ್ರಜ್ಞ ಸಮೂಹ ಸಂಸ್ಥೆಯ ಅಧ್ಯಕ್ಷ ವೈ.ಎನ್‌.ಶಂಕರೇಗೌಡ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವೈ.ಡಿ.ರಾಜಣ್ಣ, ಶ್ರೀರಾಮಕೃಷ್ಣ ಸೇವಾ ಕೇಂದ್ರದ ನಾದನಂದನಾಥ ಸ್ವಾಮೀಜಿ, ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್‌ ಸದಸ್ಯರಾದ ಸಂದೇಶ್‌ ನಾಗರಾಜು, ಕೆ.ಟಿ.ಶ್ರೀಕಂಠೇಗೌಡ, ಮಳವಳ್ಳಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಪಂ ಸದಸ್ಯರಾದ ಎಂ. ಅಶ್ವಿ‌ನ್‌ಕುಮಾರ್‌, ಎಂ.ಸುಧೀರ್‌, ಮಾಜಿ ಅಧ್ಯಕ್ಷ ಎಸ್‌.ಎನ್‌.ಸಿದ್ಧಾರ್ಥ, ಎಸ್‌.ಮೇಗಡಹಳ್ಳಿ ಎಂ.ಶಿವಕುಮಾರ್‌,

ಎಪಿಎಂಸಿ ಅಧ್ಯಕ್ಷ ಬಸವನಹಳ್ಳಿ ವೆಂಕಟೇಶ, ಉಪಾಧ್ಯಕ್ಷ ಮಹದೇವಯ್ಯ, ನಿರ್ದೇಶಕ ಕೆ.ಕೆ.ಅನಿಲ್‌ಕುಮಾರ್‌, ಬನ್ನೂರು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎಸ್‌.ರಾಮಸ್ವಾಮಿ, ಜೆಡಿಎಸ್‌ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಕಾರ್ಯಾಧ್ಯಕ್ಷ ಬಿ.ಆರ್‌.ಮಂಜುನಾಥ್‌, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಬಾಲಕೃಷ್ಣ, ಪಿಎಸಿಸಿಎಸ್‌ ಸಿಇಒ ವೈ.ಕೆ.ಕ್ಯಾತೇಗೌಡ, ನಾಡಗೌಡ ವೈ.ಎಚ್‌.ಹನುಮಂತೇಗೌಡ, ಗ್ರಾ.ಪಂ ಸದಸ್ಯ ಅಶೋಕ್‌ಕುಮಾರ್‌, ಮುಖ್ಯ ಶಿಕ್ಷಕ ಹೊಂಬಾಳೇಗೌಡ ಇನ್ನಿತರರು ಹಾಜರಿದ್ದರು.

ಅಂಗವಿಕಲೆಗೆ ನೆರವು
ಯಾಚೇನಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ತಂದೆಯಾಗಲಿ, ಪತಿಯಾಗಲಿ ಇಲ್ಲದೆ 6 ವರ್ಷದ ಮಗಳೊಂದಿಗೆ ಕಷ್ಟದ ಬದುಕನ್ನು ನಡೆಸುತ್ತಿದ್ದ ಅಂಗವಿಕಲ ಮಹಿಳೆಗೆ ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಮುಖಂಡರ ಪೈಪೋಟಿಯಿಂದಾಗಿ ನೆರವಿನ ಭಾಗ್ಯದ ಮಹಾಪೂರವೇ ಹರಿದು ಬಂದಿತು. ಎಚ್‌.ಡಿ.ಕೆ ಬಳಿಗೆ 6 ವರ್ಷದ ಮಗಳು ಚಂದನಳೊಂದಿಗೆ ತೆರಳಿದ ಶಶಿಕಲಾ ಕಷ್ಟ ಹೇಳಿಕೊಂಡರು. ಸರ್ಕಾರದ ಸೌಲಭ್ಯ ಕೊಡಿಸುವಂತೆ ಕೇಳಿಕೊಂಡರು.

ಭಾಷಣದಲ್ಲಿ ಶಶಿಕಲಾ ಬದುಕನ್ನು ಪ್ರಸ್ತಾಪಿಸುತ್ತಿದ್ದಂತೆ ಜಿಪಂ ಸದಸ್ಯ ಎಂ.ಸುಧೀರ್‌ ಚಂದನಾಳಿಗೆ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದರು. ಸೋಮನಾಥಪುರ ಜಿಪಂ ಕ್ಷೇತ್ರದ ಸದಸ್ಯ ಎಂ.ಅಶ್ವಿ‌ನ್‌ಕುಮಾರ್‌ 50 ಸಾವಿರ ರೂ. ಠೇವಣಿ ಇಡುತ್ತೇನೆ ಎಂದರು. ನರಸೀಪುರ ಕ್ಷೇತ್ರದ ಯುವ ಮುಖಂಡ ಎಸ್‌.ಮೇಗಡಹಳ್ಳಿ ಗ್ರಾಮದ ಎಂ.ಶಿವಕುಮಾರ್‌ 1 ಲಕ್ಷ ರೂ. ಠೇವಣಿ ಘೋಷಿಸಿದರು. ಸರ್ಕಾರಿ ಸೌಲಭ್ಯ ಕೊಡಿಸುವುದಾಗಿ ಬಿ.ಆರ್‌. ಮಂಜುನಾಥ್‌, ಮನೆ ನಿರ್ಮಾಣಕ್ಕೆ ನೆರವು ನೀಡುವುದಾಗಿ ರಾಮಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next