Advertisement

ಸರಕಾರದ ಯೋಜನೆ ಜನರಿಗೆ ತಲುಪಿಸುವ ಉತ್ಸುಕತೆ ತೋರಿ: ಸಚಿವ ಸುನಿಲ್‌

01:20 AM Jan 29, 2022 | Team Udayavani |

ಮಂಗಳೂರು: ಸರಕಾರದ ಜನ ಹಿತ ಕಾರ್ಯಕ್ರಮಗಳನ್ನು ಮುಂದಿನ ಒಂದೂ ವರೆ ವರ್ಷದಲ್ಲಿ ಜನರಿಗೆ ತಲುಪಿಸುವ ಕೆಲಸವನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ನಿರ್ವಹಿಸಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಕರೆ ನೀಡಿದರು.

Advertisement

ಅವರು ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜನಪ್ರತಿನಿಧಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿ ಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಿಎಂ ಬೊಮ್ಮಾಯಿ ಸರಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಪೂರ್ಣಗೊಂಡಿದೆ. ಉಳಿದಿರುವ ಅವಧಿಯಲ್ಲಿ ಸರಕಾರ ಜನರ ಕಲ್ಯಾಣಕ್ಕಾಗಿ ರೂಪಿಸಿ ರುವ ಹಲವು ಜನಪರ ಮತ್ತು ಜನ ಪ್ರಿಯ ಯೋಜನೆಗಳ ಲಾಭ ಅರ್ಹ ಫಲಾನು ಭವಿಗಳಿಗೆ ತಲುಪಿಸಲು ಸಿದ್ಧರಾಗುವಂತೆ ಸೂಚಿಸಿದರು.

ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕೆಂದರು.

ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಮಟ್ಟದಲ್ಲಿ ಬಗೆಹರಿಸುವ ಸಮಸ್ಯೆಗಳಿದ್ದರೆ ಅಧಿಕಾರಿಗಳು ನನ್ನ ಗಮನಕ್ಕೆ ತರಬಹುದು; ಸರಕಾರಿ ಸುತ್ತೋಲೆಗಳಲ್ಲಿ ಜನರ ಹಿತದೃಷ್ಟಿಯ ಬದಲಾವಣೆ ಬೇಕಿದ್ದಲ್ಲಿ ಗಮನಕ್ಕೆ ತರಬಹುದು ಎಂದರು.

Advertisement

ಜಿಲ್ಲೆಯನ್ನು ಕೃಷಿ, ಉದ್ಯಮ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಲು ವಿಶಿಷ್ಟ ಚಟುವಟಿಕೆಗಳನ್ನು ಕೈಗೊಳ್ಳಲಾಗು ವುದು. ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲೇ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಳ್ಳಲಾಗು ವುದು. ಭ್ರಷ್ಟಾಚಾರ, ಅಶಿಸ್ತು, ಉದಾಸೀನತೆ, ಉಡಾಫೆ ಸಹಿಸುವುದಿಲ್ಲ. ಎಲ್ಲರೂ ಒಂದೇ ಮನೋಭಾವದಿಂದ ಕೆಲಸ ಮಾಡಿ ಸರಕಾರಕ್ಕೆ ಉತ್ತಮ ಹೆಸರು ತರಬೇಕು ಎಂದು ಕರೆ ನೀಡಿದರು.
ಶಾಸಕ ಡಾ| ಭರತ್‌ ಶೆಟ್ಟಿ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಜಿ.ಪಂ. ಸಿಇಒ ಡಾ| ಕುಮಾರ್‌ ಮತ್ತು ಮಂಗಳೂರು ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌ ಮಾತನಾಡಿದರು.

ಶಾಸಕ ಪ್ರತಾಪ್‌ಸಿಂಹ ನಾಯಕ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌, ಜಿಲ್ಲಾ ಎಸ್‌ಪಿ ಋಷಿಕೇಶ್‌ ಸೋನಾವಣೆ, ಡಿಸಿಪಿ ಹರಿರಾಮ್‌ ಶಂಕರ್‌, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ ವೇದಿಕೆಯಲ್ಲಿದ್ದರು. ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಡೋಂಟ್‌ ಕೇರ್‌ ಪಾಲಿಸಿ ಸಹಿಸಲಾಗದು
ಒಂದು ಕೆಲಸವನ್ನು ಒಮ್ಮೆ ಮಾತ್ರ ಹೇಳುವ ಸ್ವಭಾವ ನನ್ನದು. ಆದ್ದರಿಂದ ಕಾಲಮಿತಿಯೊಳಗೆ ಕೆಲಸ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದ ಸಚಿವರು, ಆಡಳಿತದಲ್ಲಿ ಚುರುಕು ಇರಬೇಕು, ನೋಡೋಣ… ಮಾಡೋಣ… ಡೋಂಟ್‌ ಕೇರ್‌ ಪಾಲಿಸಿ ಮತ್ತು ಕಡತಗಳನ್ನು ವಿಳಂಬಿಸುವ ಪ್ರವೃತ್ತಿಯನ್ನು ಸಹಿಸುವುದಿಲ್ಲ. ಇಲಾಖೆಗಳು ಮತ್ತು ಅಧಿಕಾರಿಗಳ ಸಮನ್ವಯ, ಹೊಂದಾಣಿಕೆ ಇರಬೇಕು. ಕಾಲಮಿತಿ ಮತ್ತು ಸ್ಪಷ್ಟತೆಯಿಂದ ಕೆಲಸ ಪೂರ್ಣಗೊಳಿಸಲು ಗಮನ ನೀಡಬೇಕು. ಆ ಮೂಲಕ ಆಡಳಿತ ಚುರುಕಾಗಿರುವುದು ಜನರ ಅರಿವಿಗೆ ಬರಬೇಕು. ಫೆಬ್ರವರಿಯಲ್ಲಿ ತಾಲೂಕು ಮಟ್ಟದಲ್ಲಿಯೂ ಕೆಡಿಪಿ ಸಭೆ ನಡೆಸಲಾಗುವುದು. ಜನರು ಸರಕಾರಿ ಕೆಲಸಗಳ ವಿಚಾರದಲ್ಲಿ ದೂರು ನೀಡುವುದಕ್ಕೆ ಆಸ್ಪದ ಕೊಡಬಾರದು ಎಂದು ಎಚ್ಚರಿಸಿದರು.

“ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ‘
ಮಂಗಳೂರು: ಅಭಿವೃದ್ಧಿ, ಹಿಂದುತ್ವ ಮತ್ತು ಯುವ ನಾಯಕತ್ವ- ಈ 3 ವಿಚಾರಗಳನ್ನು ಮುಂದಿಟ್ಟುಕೊಂಡು ಮುಂದಿನ ವಿಧಾನಸಭಾ ಚುನಾವಣೆ ಎದುರಿಸಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಶುಕ್ರವಾರ ಮಂಗಳೂರಿನ ದ.ಕ. ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಪಕ್ಷದ ಜಿಲ್ಲಾ ಘಟಕದಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ಹಿಂದುತ್ವಕ್ಕೆ ಧಕ್ಕೆ ಆಗದಂತೆ ಆಡಳಿತ‌
ರಾಜ್ಯದಲ್ಲಿ ಗೋಹತ್ಯೆ ತಡೆ, ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದ್ದೇವೆ. ದೇವಸ್ಥಾನಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತ ಗೊಳಿಸಲು ಚಿಂತನೆ ನಡೆಸಲಾಗಿದೆ. ಹಿಂದುತ್ವ ವಿಚಾರಕ್ಕೆ ಧಕ್ಕೆ ಆಗದಂತೆ ಆಡಳಿತ ನಡೆಸಲಾಗುತ್ತದೆ ಎಂದರು.

ಕಾಂಗ್ರೆಸ್‌ಗೆ ಭ್ರಮೆ
ಕಾಂಗ್ರೆಸ್‌ಗೆ ಅಧಿಕಾರ ಇಲ್ಲದೆ ಭ್ರಮೆ ಉಂಟಾಗಿದೆ. ಅಪಪ್ರಚಾರದಿಂದ ಅಧಿಕಾರ ಗಳಿಸುವ ಕಾಂಗ್ರೆಸ್‌ನ ತಂತ್ರ ಗಾರಿಕೆ ಈಡೇರದು. ಬಿಜೆಪಿಯಲ್ಲಿ ಮೂಲ, ವಲಸಿಗರು ಎಂಬ ಭೇದ ಇಲ್ಲ. ಆದರೆ ಕಾಂಗ್ರೆಸ್‌ನಲ್ಲಿ ನಾಯಕರ ಗುಂಪುಗಾರಿಕೆ ಇದೆ ಎಂದರು.

ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಪಕ್ಷದ ದ.ಕ. ಪ್ರಭಾರಿ ಭರತೇಶ್‌, ಸಹಪ್ರಭಾರಿ ರಾಜೇಶ್‌ ಕಾವೇರಿ, ಮೇಯರ್‌ ಪ್ರೇಮಾನಂದ ಶೆಟ್ಟಿ , ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ವೇದಿಕೆಯಲ್ಲಿದ್ದರು. ಕಾರ್ಯಕರ್ತರಿಗೆ ತೊಂದರೆ ಆಗಲು ಬಿಡೆ ಯಾವುದೇ ಇಲಾಖೆಯಲ್ಲಿ ಕಾರ್ಯಕರ್ತರಿಗೆ ತೊಂದರೆಯಾದರೆ ನ್ಯಾಯ- ನೆರವು ಒದಗಿಸಲು ಬದ್ಧ. ವಾರದಲ್ಲಿ 2 ದಿನ ಜಿಲ್ಲೆಯಲ್ಲಿ ಇರಲು ಪ್ರಯತ್ನಿಸುತ್ತೇನೆ. ಉಳಿದ ದಿನ ಸ್ವಕ್ಷೇತ್ರ ಕಾರ್ಕಳ, ಉಡುಪಿ ಜಿಲ್ಲೆ ಅಭಿವೃದ್ಧಿಗೂ ಶ್ರಮಿಸಲಿದ್ದೇನೆ ಎಂದರು. ಸಚಿವರು ಹೂಗುತ್ಛ ಸ್ವೀಕರಿಸುವುದಿಲ್ಲ. ಬದಲಾಗಿ ಪುಸ್ತಕ ನೀಡಬಹುದು ಎಂದು ನಿರೂಪಕ ರಾಮದಾಸ್‌ ಬಂಟ್ವಾಳ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next