Advertisement

Electronic Waste ತಗ್ಗಿಸಲು ಸರಕಾರದ ಐಡಿಯಾ!ಯಶಸ್ಸು ತಂದೀತೇ ಕರ್ನಾಟಕ ಸರಕಾರದ ಹೊಸ ಹೆಜ್ಜೆ?

11:01 PM Sep 13, 2024 | Team Udayavani |

ಇ-ತ್ಯಾಜ್ಯ ಸಮಸ್ಯೆಯನ್ನು ನೀಗಿಸುವುದಕ್ಕಾಗಿ ಕೆಲವು ದಿನಗಳ ಹಿಂದೆ ಕರ್ನಾಟಕ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆಯವರು ಹಳೆಯ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಕಡ್ಡಾಯವಾಗಿ ಮರು ಖರೀದಿ ಮಾಡುವ ಯೋಜನೆಗೆ ಚಿಂತನೆ ನಡೆಸಿದ್ದಾರೆ. ಅದರ ಬಗ್ಗೆ ಕಾರ್ಯಸಾಧ್ಯತಾ ವರದಿಯನ್ನು 1 ತಿಂಗಳಲ್ಲಿ ನೀಡುವಂತೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇ-ತ್ಯಾಜ್ಯ ಎಂದರೇನು, ಅದರಿಂದಾಗುವ ಪರಿಣಾಮ, ಸರಕಾರದ ಪ್ರಸ್ತಾವ ಯಶಸ್ವಿಯಾಗುವುದೇ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Advertisement

ಜೀವನ ಆಧುನೀಕರಣಗೊಂಡಾಗ ಸರಳಗೊಳ್ಳುತ್ತದೆ ಎನ್ನುವುದು ಸರ್ವ ಸಾಮಾನ್ಯವಾಗಿರುವ ತಿಳಿವಳಿಕೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಜೀವನ ಸುಲಭಗೊಂಡಷ್ಟು ಅದರಿಂದ ಉಂಟಾಗುವ ಸಮಸ್ಯೆಗಳು ಹೆಚ್ಚು. ಕಾರು, ಫೋನ್‌, ಫ್ರಿಡ್ಜ್ ಸೇರಿದಂತೆ ಎಲ್ಲವೂ ಈಗ ಅನಿವಾರ್ಯ. ಅವುಗಳನ್ನು ಬಳಕೆ ಮಾಡುತ್ತಾ ವರ್ಷಗಳು ಕಳೆದಂತೆ ನಿರುಪಯುಕ್ತವೋ, ಬಳಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಬರುತ್ತದೆ. ಆಗ ಅವುಗಳು ತ್ಯಾಜ್ಯ ಎನಿಸುತ್ತವೆ. ಸಾಮಾನ್ಯ ತ್ಯಾಜ್ಯಗಳಂತೆ ಈಗ ನಿರುಪಯುಕ್ತವಾಗಿರುವ ಎಲೆಕ್ಟ್ರಾನಿಕ್‌ ವೇಸ್ಟ್‌ (ನಿರುಪಯುಕ್ತ ಎಲೆಕ್ಟ್ರಾನಿಕ್‌ ಉಪಕರಣಗಳು) ಕೂಡ ತಲೆನೋವಾಗಿವೆ.

ಇ-ತ್ಯಾಜ್ಯ ಎಂದರೇನು?
ಸಾಮಾನ್ಯವಾಗಿ ಹೇಳುವುದಿದ್ದರೆ ನಿರುಪಯುಕ್ತವಾಗಿರುವ ವಿದ್ಯುತ್‌ ಮತ್ತು ಗೃಹೋಪಯೋಗಿ ಉಪಕರಣಗಳು. ಮಿಕ್ಸಿ, ಫ್ರಿಡ್ಜ್, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌, ವೈದ್ಯಕೀಯ ಉಪಕರಣಗಳನ್ನು ಅವುಗಳಲ್ಲಿ ಸೇರಿಸಲಾಗುತ್ತದೆ. ಅಮೆರಿಕದ ಪರಿಸರ ಸಂರಕ್ಷಣ ಸಂಸ್ಥೆ ಒಟ್ಟು 10 ಭಿನ್ನ ರೀತಿಯ ಇ- ತ್ಯಾಜ್ಯವನ್ನು ವಿಂಗಡಿಸಿದೆ.

ಕರ್ನಾಟಕ ಸಚಿವರ ಹೊಸ ಪ್ರಯತ್ನ
ಮುಂದಿನ ದಿನಗಳಲ್ಲಿ ಇ-ತ್ಯಾಜ್ಯ ಎನ್ನುವುದು ಸವಾಲಾಗದಿರಲಿ ಎಂಬ ಕಳಕಳಿಯಿಂದ ಕರ್ನಾಟಕದ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆಯವರು ಎಲೆಕ್ಟ್ರಾನಿಕ್ಸ್‌ ಅಂಗಡಿಯವರು ಕಡ್ಡಾಯವಾಗಿ ಹಳೆಯ ಮತ್ತು ಬಳಕೆ ಮಾಡಿರುವ ವಿದ್ಯುನ್ಮಾನ ಉಪಕರಣಗಳನ್ನು ಖರೀದಿ ಮಾಡಬೇಕು ಎಂಬ ನಿಯಮ ಜಾರಿ ಮಾಡುವುದರ ಬಗ್ಗೆ ಚಿಂತನೆ ಹೊಂದಿದ್ದಾರೆ. ಅದನ್ನು ಜಾರಿ ಮಾಡಲು ಸಾಧ್ಯವೇ ಎಂಬ ಬಗ್ಗೆ ಅಧ್ಯಯನ ನಡೆಸಿ 1 ತಿಂಗಳಲ್ಲಿ ವರದಿ ನೀಡಲು ತಮ್ಮ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ರಾಜ್ಯ ಸರಕಾರದ ಉದ್ದೇಶವೇನು?
ಕರ್ನಾಟಕ ಒಂದರಲ್ಲಿಯೇ ಪ್ರತೀ ವರ್ಷ 5 ಲಕ್ಷ ಟನ್‌ ಇ-ವೇಸ್ಟ್‌ ಉತ್ಪಾದನೆ ಆಗುತ್ತಿದೆ. ಆ ಪೈಕಿ ಕೇವಲ 1.5 ಲಕ್ಷ ಟನ್‌ ಮಾತ್ರ ಸರಿಯಾದ ರೀತಿಯಲ್ಲಿ ಇ-ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲಾಗುತ್ತದೆ ಎನ್ನುತ್ತದೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ ಅಂಶಗಳು. ಹೀಗಾಗಿ ಕರ್ನಾಟಕದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆಯವರು ಸರಿಯಾದ ರೀತಿಯಲ್ಲಿ ಇ-ತ್ಯಾಜ್ಯವನ್ನು ನಿರ್ವಹಿಸುವ ಹೊಸ ಯೋಜನೆ ತರುವ ನಿಟ್ಟಿನಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಸದ್ಯ ಇರುವ ಮಾಹಿತಿ ಪ್ರಕಾರ ಎಲೆಕ್ಟ್ರಾನಿಕ್ಸ್‌ ಮಳಿಗೆಯವರು ಬಳಕೆಯಾಗಿರುವ ಹಳೆಯ ಮತ್ತು ನಿರುಪಯುಕ್ತ ವಿದ್ಯುತ್‌ ಉಪಕರಣಗಳನ್ನು ಸಣ್ಣ ಮೊತ್ತವನ್ನು ಗ್ರಾಹಕರಿಗೆ ನೀಡಿ ಖರೀದಿಸಬೇಕು. ಇಂಥ ಇ-ತ್ಯಾಜ್ಯಗಳನ್ನು ಸಂಸ್ಕರಣ ಘಟಕಗಳು ಖರೀದಿ ಮಾಡಲು ಅನುಕೂಲವಾಗುತ್ತದೆ. ಇದರಿಂದಾಗಿ ಹೆಚ್ಚುತ್ತಿರುವ ಇ-ತ್ಯಾಜ್ಯದ ಮೇಲೆ ನಿಯಂತ್ರಣ ಹೇರುವ ಉದ್ದೇಶ ಸರಕಾರದ್ದು.

Advertisement

ಇ-ತ್ಯಾಜ್ಯಗಳ ನಿರ್ವಹಣೆ ಹೇಗೆ?
ನಿತ್ಯ ಜೀವನದಲ್ಲಿ ಬಳಕೆ ಮಾಡುವ ವಿದ್ಯುತ್‌ ಉಪಕರಣಗಳನ್ನು ಆಗಾಗ ಪರೀಕ್ಷೆಗೆ ಒಳಪಡಿಸುತ್ತಿರಬೇಕು. ದುರಸ್ತಿ ಅಗತ್ಯವಿದೆ ಎಂದು ಸಂಶಯಕ್ಕೆ ಗುರಿಯಾದಾಗ ಅದನ್ನು ದುರಸ್ತಿ ಮಾಡಬೇಕು. ಮರು ಬಳಕೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದು. ಯಾವುದೇ ವಸ್ತುವನ್ನು ಖರೀದಿ ಮಾಡುವ ಮೊದಲು ಅದರ ಜೀವಿತಾವಧಿಯನ್ನು ತಿಳಿದುಕೊಳ್ಳಬೇಕು. ಅಗತ್ಯವಿದ್ದಷ್ಟೇ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಖರೀದಿ ಮಾಡುವುದರ ಮೂಲಕವೂ ಇ-ತ್ಯಾಜ್ಯ ಪ್ರಮಾಣ ತಗ್ಗಿಸಲು ಅವಕಾಶ ಉಂಟು. ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗ್ಳಲ್ಲಿರುವ ಹಾರ್ಡ್‌ಡ್ರೈವ್‌ನಲ್ಲಿರುವ ಮಾಹಿತಿಯನ್ನು ತೆಗೆದಿಟ್ಟುಕೊಳ್ಳಬೇಕು.

16 ಲಕ್ಷ ಟನ್‌: ಭಾರತದ ಇ-ತ್ಯಾಜ್ಯ!
ದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ವಿಶ್ವಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಂಸ್ಥೆ (ಅಂಕ್‌ಟಡ್‌) 2021 ಮತ್ತು 2022ರ ವರದಿ ಪ್ರಕಾರ ಹಿಂದಿನ 10 ವರ್ಷಗಳಲ್ಲಿ ದೇಶದಲ್ಲಿ ಇ-ತ್ಯಾಜ್ಯ ಉತ್ಪಾದನೆ ಶೇ.163 ರಷ್ಟು ಹೆಚ್ಚಾಗಿದೆ. ಜಗತ್ತಿನಲ್ಲಿಯೇ ಇದು ಅತ್ಯಂತ ಹೆಚ್ಚು. 2010ರಲ್ಲಿ ದೇಶದಲ್ಲಿ ಇ- ತ್ಯಾಜ್ಯ ಉತ್ಪಾದನೆ ಶೇ.3.1 ಇತ್ತು. 2022ರ ವೇಳೆಗೆ ಅದರ ಪ್ರಮಾಣ ಶೇ.6.4ಕ್ಕೆ ಏರಿಕೆ ಯಾಯಿತು.

ಏಷ್ಯಾದಲ್ಲಿನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಅದಕ್ಕೆ ಹೆಚ್ಚಿನ ಕೊಡುಗೆ ನೀಡಿವೆ. ಕೇಂದ್ರ ಸರಕಾರವೇ 2023 ಜು.27ರಂದು ನೀಡಿದ್ದ ಮಾಹಿತಿಯಂತೆ 2017-18ರಲ್ಲಿ 7.08 ಲಕ್ಷ ಟನ್‌, 2018-19ರಲ್ಲಿ 7.71 ಲಕ್ಷ ಟನ್‌, 2019-20ರಲ್ಲಿ 10.14 ಲಕ್ಷ ಟನ್‌, 2020-21ರಲ್ಲಿ 13.46 ಲಕ್ಷ ಟನ್‌, 2021-22ರಲ್ಲಿ 16.01 ಲಕ್ಷ ಟನ್‌ ಇ-ತ್ಯಾಜ್ಯ ಉತ್ಪಾದನೆಯಾಗಿತ್ತು.

ಇ-ತ್ಯಾಜ್ಯ ಸಾಗಿಸಲು 15 ಲಕ್ಷ ಟ್ರಕ್‌ ಬೇಕು!
ವಿಶ್ವಸಂಸ್ಥೆಯ ತರಬೇತಿ ಮತ್ತು ಸಂಶೋಧನೆ (ಯುಎನ್‌ಐಟಿಎಆರ್‌) ಪ್ರಕಾರ 2022ರಲ್ಲಿ ಜಗತ್ತಿನಲ್ಲಿ 6200 ಕೋಟಿ ಕೆ.ಜಿ. (62 ಬಿಲಿಯ) ಇ-ತ್ಯಾಜ್ಯ ಉತ್ಪಾದನೆ ಆಗಿದೆ. 2010ನೇ ಸಾಲಿಗೆ ಹೋಲಿಕೆ ಮಾಡಿದರೆ ಅದರ ಪ್ರಮಾಣ ಶೇ.82ರಷ್ಟು ಹೆಚ್ಚು. ಟ್ರಕ್‌ಗಳಲ್ಲಿ ಅವುಗಳನ್ನು ಸಾಗಿಸಬೇಕಾಗಿದ್ದರೆ 15.5 ಲಕ್ಷ ಟ್ರಕ್‌ಗಳು ಬೇಕಾಗುತ್ತವೆ ಎಂದು ಅಂದಾಜು ಮಾಡಲಾಗಿದೆ. ಜಗತ್ತಿನಲ್ಲಿ ಪ್ರತೀ ವರ್ಷ 260 ಕೋಟಿ ಕೆ.ಜಿ. (2.6 ಬಿಲಿಯನ್‌) ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ.

ಮಕ್ಕಳ ಆರೋಗ್ಯಕ್ಕೆ ತೊಂದರೆ
ವಿಶ್ವ ಆರೋಗ್ಯ ಸಂಸ್ಥೆಯು 2021ರಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ 5 ವರ್ಷದಿಂದ 17 ವರ್ಷ ವಯೋಮಿತಿಯ 1.80 ಕೋಟಿ ಮಕ್ಕಳು ಚಿಂದಿ ಆಯುವ ಕೆಲಸ ಮಾಡುತ್ತಿದ್ದಾರೆ. ಗ್ಲೌಸ್‌ ಮತ್ತು ಇತರ ಸುರಕ್ಷಿತ ಸಾಧನ ಬಳಸದೆ ಹಾನಿಕಾರಕ ತ್ಯಾಜ್ಯಗಳನ್ನು ಕೈಗಳಲ್ಲಿಯೇ ವಿಲೆವಾರಿ ಮಾಡುವುದರಿಂದ ಅವರ ಆರೋಗ್ಯದ ಮೇಲೆ ಇ-ತ್ಯಾಜ್ಯಗಳು ಪರಿಣಾಮ ಬೀರುತ್ತದೆ. 5-17 ವರ್ಷ ಬೆಳವಣಿಗೆ ಹಂತ ಆಗಿರುವುದರಿಂದ ಅವರ ನರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿ, ವಿವಿಧ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣಗಳಾಗಬಹುದು. ಜತೆಗೆ ಕೆಲವೊಂದು ಕಾಯಿಲೆಗಳೂ ಕಾಣಿಸಿಕೊಳ್ಳಬಹುದು. ಹಾಗಾಗಿ ಇ-ತ್ಯಾಜ್ಯವನ್ನು ವ್ಯವಸ್ಥಿತ ನಿರ್ವಹಣೆ ಅತ್ಯಗತ್ಯ ಎಂದು ತನ್ನ ವರದಿಯಲ್ಲಿ ವಿಶ್ವಸಂಸ್ಥೆ ತಿಳಿಸಿತ್ತು.

ಜಾಗೃತಿ ಮೂಡಿಸಬೇಕು: ಸಾಹಸ್‌ ಸಂಸ್ಥೆ
ಬೆಂಗಳೂರಿನಲ್ಲಿರುವ ಸಾಹಸ್‌ ಸಂಸ್ಥೆ ಇ-ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿದೆ. ಇ-ತ್ಯಾಜ್ಯ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಸ್ಥೆಯ ಅಸೋಸಿಯೇಟ್‌ ಮ್ಯಾನೇಜರ್‌ ರಾಜು ಎನ್‌. ಮತ್ತು ಅಸೋಸಿಯೇಟ್‌ ಡೈರೆಕ್ಟರ್‌ ಕನ್ನಿಕಾ ಕೆ.ಪಿ. ಅವರು ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದ್ದಾರೆ. ಸಂಭಾವ್ಯ ಸಮಸ್ಯೆಯ ಬಗ್ಗೆ ನಮ್ಮ ಸಂಸ್ಥೆ ಜನರಲ್ಲಿ ಆಗಾಗ ಜಾಗೃತಿ ಮೂಡಿಸುತ್ತದೆ. ಮನೆಗಳಿಂದಲೂ ಇ-ತ್ಯಾಜ್ಯವನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಪರಿಸರ, ಆರೋಗ್ಯದ
ಮೇಲೆ ಪರಿಣಾಮ
ಇ-ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದಿದ್ದರೆ ಪ್ರತಿಕೂಲ ಪರಿಣಾಮ ಕಟ್ಟಿಟ್ಟ ಬುತ್ತಿ.
ವಿದ್ಯುನ್ಮಾನ ಉಪಕರಣಗಳಲ್ಲಿನ ಸತು, ನಿಕ್ಕೆಲ್‌, ಕ್ರೋಮಿಯಂನಂಥ ವಸ್ತುಗಳು ಅಪಾಯಕಾರಿ.
ವಿದ್ಯುನ್ಮಾನ ವಸ್ತುಗಳ ಈ ಅಂಶ ಗಳು ಭೂಮಿಗೆ ಸೇರಿದರೆ ಪರಿಸ ರದ ಮೇಲೆ ದುಷ್ಪರಿಣಾಮ ಹೆಚ್ಚು.
ಇ-ತ್ಯಾಜ್ಯಗಳು ಪರೋಕ್ಷವಾಗಿ ಜನರ ಅನಾರೋಗ್ಯಕ್ಕೂ ಕಾರಣವಾಗುತ್ತವೆ.
ಶ್ವಾಸಕೋಶಗಳ ಮೇಲೆ ದುಷ್ಪರಿಣಾಮ, ಸಂತಾನೋತ್ಪತ್ತಿಗೆ ಧಕ್ಕೆ, ಥೈರಾಯ್ಡ ಸಮಸ್ಯೆ ಇತ್ಯಾದಿ
ಕೆಲವೊಮ್ಮೆ ಇ-ತ್ಯಾಜ್ಯಗಳಿಂದ ಮಾರಕ ಕ್ಯಾನ್ಸರ್‌ ಕೂಡ ಉಂಟಾಗುವ ಅಪಾಯಗಳು ಇವೆ.

-ಸದಾಶಿವ .ಕೆ.

Advertisement

Udayavani is now on Telegram. Click here to join our channel and stay updated with the latest news.

Next