ಪಿರಿಯಾಪಟ್ಟಣ: ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ರೈತರ ಸಂಕಷ್ಟಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ ಎಂದು ರೈತ ಸಂಘ, ಹಸಿರು ಸೇನೆಯ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.
ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ನೂತನವಾಗಿ ರೈತ ಸಂಘ, ಹಸಿರು ಸೇನೆ ಘಟಕ ಉದ್ಘಾಟಿಸಿ ಮಾತನಾಡಿ ಯಾವುದೇ ಪಕ್ಷಗಳಾಗಲೀ ಅಧಿಕಾರಕ್ಕೇರಲು ರೈತರು ಬೇಕು ಆದರೆ, ಅಧಿಕಾರಕ್ಕೆ ಬಂದ ನಂತರ ಅವರ ಬೆನ್ನಿಗೆ ಚೂರಿ ಹಾಕುತ್ತಿವೆ. ರೈತ ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ರಾಜಕಾರಣಿಗಳು ಐಷಾರಾಮಿ ಜೀವನದೊಂದಿಗೆ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.
ನಾವು ಸ್ವಾರ್ಥಕ್ಕಾಗಿ ಸಂಘ ಮಾಡುತ್ತಿಲ್ಲ, ಬದಲಾಗಿ ನಮ್ಮ ಹಕ್ಕನ್ನು ಪಡೆಯಲು ಸಂಘಟಿತರಾಗಬೇಕಾಗಿದೆ ಎಂದರು. ಹುಣಸೂರು ತಾಲೂಕು ರೈತ ಸಂಘದ ಉಪಾಧ್ಯಕ್ಷ ಬಸವೇಗೌಡ ಮಾತನಾಡಿ, ರೈತ ಸಂಘ ಅಸ್ತಿತ್ವದಲ್ಲಿರದೆ ಹೋಗಿದ್ದರೆ ರಾಜಕಾರಣಿಗಳು ನಮ್ಮನ್ನು ಕೀಳಾಗಿ ಕಾಣುತ್ತಿದ್ದರು. ಸರ್ಕಾರ ಎಲ್ಲಾ ಭಾಗ್ಯಗಳ ಜೊತೆಗೆ ಆತ್ಮಹತ್ಯೆ ಭಾಗ್ಯ ನೀಡಿದೆ.
ಅಧಿಕಾರಿಗಳು ಸಹ ರೈತರ ಬಗ್ಗೆ ನಿರ್ಲಕ್ಷ ತೋರುತ್ತಿದ್ದು, ನಾವೇ ಅವರ ಬಳಿ ಅಲೆದು ನಮ್ಮ ಸವಲತ್ತುಗಳನ್ನು ಕಿತ್ತುಕೊಳ್ಳುವ ದುಸ್ಥಿತಿ ಬಂದಿದೆ. ಜನ ಜಾನುವಾರುಗಳಿಗೆ ನೀರು, ಮೇವಿಲ್ಲ ಇಂತಹ ಪರಿಸ್ಥಿತಿಯಲ್ಲೂ ಗೋಶಾಲೆ ತೆರೆಯುವ ಕೆಲಸ ಮಾಡುತ್ತಿಲ್ಲ. ಇದರಿಂದ ಗೋವುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದರು.
ಹುಣಸೂರು ತಾಲೂಕು ಘಟಕದ ಅಧ್ಯಕ್ಷ ಬೆಟ್ಟೇಗೌಡ, ಉಪಾಧ್ಯಕ್ಷ ರಾಜೇಗೌಡ, ಕೆ.ಆರ್.ನಗರ ಘಟಕದ ಅಧ್ಯಕ್ಷ ಚೀರನಹಳ್ಳಿ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷ ನಿಂಗಮ್ಮ, ಕಾರ್ಯದರ್ಶಿ ಸವಿತ, ಭಾಗ್ಯ, ಮುತ್ತುರಾಯನಹೊಸಳ್ಳಿ ಜಯರಾಮ್, ಹೊಸವಾರಂಚಿ ಮಂಜೇಗೌಡ, ದೇವೇಂದ್ರ, ಪೆಂಜಳ್ಳಿ ನಾಗರಾಜು, ಚಂದ್ರೇಗೌಡ, ನಾಗೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪದಾಧಿಕಾರಿಗಳು: ಗೋವಿಂದೇಗೌಡ – ಗೌರವಾಧ್ಯಕ್ಷ, ಕೆ.ಎಂ. ಶಿವಶಂಕರ್ – ಅಧ್ಯಕ್ಷ, ಸದಾನಂದ – ಉಪಾಧ್ಯಕ್ಷ, ಸ್ವಾಮಿ – ಖಜಾಂಚಿ, ಸ್ವಾಮಿಗೌಡ -ಹೋಬಳಿ ಘಟಕದ ಅಧ್ಯಕ್ಷ.