ಜೇವರ್ಗಿ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರೈತರಿಗೆ ನ್ಯಾಯ ಕೊಡುವಲ್ಲಿ ಸರಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಎದುರಿಗೆ ಕರ್ನಾಟಕ ಪ್ರಾಂತ ರೈತ ಸಂಘದ 5ನೇ ತಾಲೂಕು ಸಮ್ಮೇಳನದ ಪ್ರಯುಕ್ತ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಂಸತ್‌ನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ರೈತರ ಬದುಕಿಗೆ ಮಾರಕವಾಗಿರುವ ಕೃಷಿ ಕಾಯಿದೆಗಳನ್ನು ಅನುಷ್ಠಾನಗೊಳಿಸಿದೆ. ಕೃಷಿ ವಲಯವನ್ನು ಕಾರ್ಪೋರೇಟ್ ಗಳ ಕೈವಶ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಕೃಷಿ ಕಾಯಿದೆಗಳನ್ನು ಜಾರಿಗೊಳಿಸಿದೆ ಎಂದು ಕಿಡಿಕಾರಿದರು.
ತಾಲೂಕು ಅಧ್ಯಕ್ಷ ಸುಭಾಷ ಹೊಸಮನಿ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸ ನೀಡುತ್ತಿಲ್ಲ, ಹೋರಾಟ ನಡೆಸಿದಾಗಲೊಮ್ಮೆ ಕೆಲಸ ನೀಡುವ ನಾಟಕವಾಡುತ್ತಾರೆ. ಕೆಲಸ ಸಿಗದ್ದಕ್ಕೆ ಅನೇಕರು ಗುಳೆ ಹೋಗುವ ಸ್ಥಿತಿ ಉಂಟಾಗಿದೆ. ಬೆಳೆ ನಷ್ಟ ಪರಿಹಾರವನ್ನು ಸರ್ಕಾರ ಸರಿಯಾಗಿ ವಿತರಿಸಿಲ್ಲ, ಅರ್ಹರಿಗೆ ಬೆಳೆ ನಷ್ಟ ಪರಿಹಾರ ದೊರೆಯದೇ ಅನ್ಯಾಯವಾಗಿದೆ. ಕೂಲಿಕಾರರು ಮತ್ತು ರೈತರಲ್ಲಿ ಜಾಗೃತಿ ಮೂಡಬೇಕಿದೆ. ಮಂದೇವಾಲದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಮಂದೇವಾಲ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
ಸೊನ್ನದ ಡಾ|ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ರೈತ ಮುಖಂಡರಾದ ವೆಂಕೋಬರಾವ್ ವಾಗಣಗೇರ, ಮಲ್ಕಪ್ಪ ಹರನೂರ, ಶಂಕರಲಿಂಗ ರೇವನೂರ, ನಿಂಗಣ್ಣ ಯಾತನೂರ, ಮಹೇಶ ಬಳಬಟ್ಟಿ, ಉಸ್ಮಾನ ಅಲಿ ಮುಜಾವರ, ಭೀಮರಾಯ ದಾಸರ, ಸಿದ್ಧು ಮ್ಯಾಗೇರಿ, ಧರ್ಮಣ್ಣ ಶಖಾಪೂರ, ನಿಂಗಪ್ಪ ಹೆಗ್ಗಿನಾಳ, ನಾಗಪ್ಪ ನಾಟಿಕಾರ, ಆನಂದಪ್ಪ ಹರವಾಳ, ಪರೀದಾಬೇಗಂ ಮುದವಾಳ, ಮಲ್ಲಿಕಾರ್ಜುನ ವರ್ಚನಳ್ಳಿ, ಸಿದ್ಧಣ್ಣ ವಾಗಣಗೇರಿ, ಮಹಾನಿಂಗ ಪೂಜಾರಿ ಹಾಗೂ ಇತರರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ಶಾಂತನಗರ, ಅಂಬೇಡ್ಕರ್ ಸರ್ಕಲ್, ಅಖಂಡೇಶ್ವರ ಸರ್ಕಲ್ ಮೂಲಕ ಬಸ್ ನಿಲ್ದಾಣದ ಬಳಿ ಹಾಕಲಾದ ವೇದಿಕೆ ವರೆಗೆ ರ್ಯಾಲಿ ನಡೆಯಿತು