ಬೀದರ: ರೈತರ ಆದಾಯ ದ್ವಿಗುಣಗೊಳಿಸಿ, ಅವರ ಜೀವನ ಮಟ್ಟವನ್ನು ಸುಧಾರಿಸುವುದು ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಹೇಳಿದರು.
ಔರಾದ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳ ರೈತ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣ ಹಾಗೂ ಇನ್ನಿತರೆ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
ರೈತರು ನಮ್ಮ ದೇಶದ ಬೆನ್ನೆಲುಬಾಗಿದ್ದಾರೆ. ಅವರು ಸುಖವಾಗಿದ್ದರೆ ಎಲ್ಲರೂ ನೆಮ್ಮದಿಯಿಂದ ಜೀವಿಸಲು ಸಾಧ್ಯ. ಹಾಗಾಗಿ ಸರ್ಕಾರವು ರೈತರನ್ನು ಆರ್ಥಿಕವಾಗಿ ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಿದೆ. ರೈತರು ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳುವಂತಾಗಲು ಸಬ್ಸಿಡಿಯೊಂದಿಗೆ ಕೃಷಿ ಯಂತ್ರೋಪಕರಣ ವಿತರಿಸಲಾಗುತ್ತಿದೆ. ಮಣ್ಣು ಪರೀಕ್ಷೆ ನಡೆಸಲಾಗುತ್ತಿದೆ. ರೈತರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗೆ ರೈತರಿಗಾಗಿ ಇರುವ ಎಲ್ಲ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಯೋಜನೆಗಳು ಸಾಕಾರವಾಗಬೇಕಾದರೆ ಅಧಿಕಾರಿಗಳ ಪಾತ್ರ ಅತ್ಯಂತ ಮುಖ್ಯವಾಗಿದೆ. ಎಲ್ಲ ಯೋಜನೆಗಳು ಸರಿಯಾದ ಫಲಾನುಭವಿಗೆ ತಲುಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸಬೇಕು. ಕಚೇರಿಗಳಿಗೆ ಬರುವ ರೈತರೊಂದಿಗೆ ಸೌಜನ್ಯದಿಂದ ಮಾತನಾಡಿಸಿ, ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಬೇಕು. ರೈತರಿಗಾಗಿ ಇರುವ ಯೋಜನೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಇನ್ನಷ್ಟು ಪ್ರಚಾರ ನೀಡಬೇಕು ಎಂದು ನಿರ್ದೇಶನ ನೀಡಿದರು.
ರೈತರಿಗೆ ಯಂತ್ರೋಪಕರಣ ವಿತರಣೆ
ಔರಾದ ತಾಲೂಕಿನ ರೈತರಿಗೆ ಸಬ್ಸಿಡಿಯೊಂದಿಗೆ ಸುಮಾರು 16 ಲಕ್ಷ ಮೊತ್ತದ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಮತ್ತು ಸಬ್ಸಿಡಿಯೊಂದಿಗೆ 1.86 ಲಕ್ಷ ಮೊತ್ತದ ಸ್ಪ್ರಿಂಕ್ಲರ್ಸ್ ಹಾಗೂ ಟಾರ್ಪಲಿನ್‌ಗಳನ್ನು ವಿತರಿಸಿದರು.
ಇದೇ ವೇಳೆ ಮುಖ್ಯಮಂತ್ರಿಯವರ ರೈತ ವಿದ್ಯಾನಿ ಧಿ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಚಿವರು ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್, ಕೆಂಗೆಗೌಡ ಎನ್., ಅರುಣಕುಮಾರ ಕುಲಕರ್ಣಿ, ಅನ್ಸಾರಿ ಎಂ.ಎ.ಕೆ, ಮಲ್ಲಿಕಾರ್ಜುನ ಲಿಂಗದಳ್ಳಿ, ತಾಪಂ ಇಒ ಮಾಣಿಕರಾವ ಪಾಟೀಲ, ಸಂತೋಷ ಹಜಾರಿ, ರಾಮಶೆಟ್ಟಿ ಪನ್ನಾಳೆ, ಸುರೇಶ ಭೋಸ್ಲೆ, ಮಾರುತಿ ಚವ್ಹಾಣ, ನಾಗನಾಥ ಮೋರ್ಗೆ, ಸಂಜು ಇದ್ದರು.