Advertisement

ಬಿಎಂಟಿಸಿ ಪ್ರಯಾಣದರ ಇಳಿಕೆಗೆ ಸರ್ಕಾರ ನಿರ್ಧಾರ

12:13 AM Nov 07, 2019 | Lakshmi GovindaRaju |

ಬೆಂಗಳೂರು: ರಾಜಧಾನಿಯ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿ ಪ್ರಯಾಣ ದರ ಇಳಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಸಂಬಂಧಪಟ್ಟ ಸಚಿವರು, ಸ್ಥಳೀಯ ಶಾಸಕರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘ‌ ಚರ್ಚೆ ಮಾಡಿದ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದರು.

Advertisement

ಬಿಎಂಟಿಸಿ ಪ್ರಯಾಣದ ದರ ಇಳಿಕೆಗೆ ಸರ್ಕಾರ ನಿರ್ಧರಿಸಿದೆ. ಎಷ್ಟು ಪ್ರಮಾಣದಲ್ಲಿ ಇಳಿಕೆ ಮಾಡಬೇಕು ಮತ್ತು ಯಾವ ಮಾನದಂಡ ಬಳಸಿ ಜನರಿಗೆ ಅನುಕೂಲ ಆಗುವಂತೆ ಪ್ರಯಾಣ ದರ ಇಳಿಕೆ ಮಾಡಬೇಕು ಎಂಬುದನ್ನು ಚರ್ಚಿಸಿ ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು.

ಪ್ರಸ್ತುತ ಸಾರ್ವಜನಿಕ ಸಾರಿಗೆ ತುಟ್ಟಿಯಾಗಿದ್ದು, ಬಡವರು ಮತ್ತು ಮಧ್ಯಮ ವರ್ಗದವರು ದ್ವಿಚಕ್ರ ವಾಹನ ಸಹಿತವಾಗಿ ಖಾಸಗಿ ವಾಹನ ಬಳಸಲು ಮುಂದಾಗುತ್ತಿದ್ದಾರೆ. ಆದ್ದರಿಂದ ಬಿಎಂಟಿಸಿಗೆ ಸರ್ಕಾರದಿಂದ ಆರ್ಥಿಕ ನೆರವು ನೀಡಿ, ಬಸ್‌ ದರ ಇಳಿಸಿ, ಈ ವರ್ಗದ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಲು ಪ್ರೇರೇಪಿಸಲಿದ್ದೇವೆ ಎಂದರು.

ಬಸ್‌ ಬಾಡಿಗೆಗೆ: ಪ್ರಸ್ತುತ ಬಿಎಂಟಿಸಿ ಬಳಿ 6,500 ಬಸ್‌ಗಳಿದ್ದು, ಹೆಚ್ಚುವರಿಯಾಗಿ 6 ಸಾವಿರ ಬಸ್‌ಗಳನ್ನು ಸೇರ್ಪಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಹೊಸ ಬಸ್‌ಗಳನ್ನು ಖರೀದಿ ಮಾಡುವ ಬದಲು ಬಸ್‌ ಉತ್ಪಾದನಾ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ಒಪ್ಪಂದದ ಮೇರೆಗೆ ನೇರವಾಗಿ ಬಾಡಿಗೆ ಪಡೆಯಲು ನಿರ್ಧರಿಸಿದ್ದೇವೆ.

ಬಾಡಿಗೆಯನ್ನು ಕಿಲೋ ಮೀಟರ್‌ ರೂಪದಲ್ಲಿ ಅಥವಾ ದಿನದ ರೂಪದಲ್ಲಿ ನೀಡಬೇಕೇ ಎಂಬುದನ್ನು ತೀರ್ಮಾನಿಸಲಿದ್ದೇವೆ ಎಂದು ವಿವರ ನೀಡಿದರು. ಹೊಸ ಬಸ್‌ಗಳಲ್ಲಿ ಶೇ.50 ಎಲೆಕ್ಟ್ರಿಕಲ್‌ ಬಸ್‌ಗಳನ್ನು ಒದಗಿಸಲು ಕ್ರಮ ಜರುಗಿಸಿ, ಇವುಗಳನ್ನು ಪ್ರತ್ಯೇಕ ಲೇನ್‌ಗಳ ಸಂಚಾರಕ್ಕೆ ಒದಗಿಸಲಿದ್ದೇವೆ. ಇದರಿಂದ ಶೇ. 50 ಮಾಲಿನ್ಯ ಪ್ರಮಾಣ ತಡೆಗಟ್ಟಬಹುದಾಗಿದೆ ಎಂದರು.

Advertisement

ಸಂಚಾರ ದಟ್ಟಣೆ ತಡೆಗೆ ಕ್ರಮ: ಬೆಂಗಳೂರು ಮೊಬಿಲಿಟಿ ಮ್ಯಾನೇಜ್‌ಮೆಂಟ್‌ ಅಥಾರಟಿ (ಬಿಎಂಎಂಎ) ಸ್ಥಾಪಿಸಿ, ಸಂಯೋಜಿತ ಸಂಚಾರ ನಿರ್ವಹಣೆ ಕೈಗೊಳ್ಳಲು ನಿರ್ಧರಿಸಿದ್ದೇವೆ. ನಗರದ ಅತ್ಯಂತ ದಟ್ಟಣೆಯುಳ್ಳ 12 ಕಾರಿಡಾರ್‌ ರಸ್ತೆಗಳನ್ನು ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ಪ್ರತ್ಯೇಕ ಬಸ್‌ ಹಾಗೂ ಸೈಕಲ್‌ ಲೇನ್‌ಗಳನ್ನು ಸ್ಥಾಪಿಸಿ, ಸಾರ್ವಜನಿಕ ಸಾರಿಗೆಗೆ ಒತ್ತು ನೀಡುವ ಮೂಲಕ ಸಂಚಾರ ದಟ್ಟಣಿ ಕಡಿಮೆಗೊಳಿಸಲಾಗುತ್ತದೆ. ಅತಿ ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳಲ್ಲಿ ಈ ಕ್ರಮ ತಗೆದುಕೊಳ್ಳಲಿದ್ದೇವೆ ಎಂದು ವಿವರಿಸಿದರು.

ಮೆಟ್ರೋಗೆ ಸೂಚನೆ: ಮೆಟ್ರೋ ಮೂರನೇ ಹಂತವನ್ನು ಹೊಸಕೋಟೆ ಕ್ರಾಸ್‌ವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ವೈಟ್‌ಫೀಲ್ಡ್‌-ಸರ್ಜಾಪುರ ಮಾರ್ಗದಲ್ಲಿ ಈ ಮೆಟ್ರೋ ಸಂಚಾರವಾಗಲಿದೆ. ಮೊದಲನೇ ಹಂತದ 42 ಕಿ.ಮೀ ಸಹಿತವಾಗಿ 119 ಕಿ.ಮೀ ಉದ್ದದ ಮೆಟ್ರೋ 2ನೇ ಹಂತವನ್ನು 2012ರ ಅಕ್ಟೋಬರ್‌-ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಲು ಸೂಚನೆ ನೀಡಿದ್ದೇವೆ.

ಹೊರ ವರ್ತುಲ ರಸ್ತೆ, ಏರ್‌ಫೋರ್ಟ್‌ ಮಾರ್ಗದ ಮೆಟ್ರೋ ಯೋಜನೆಯನ್ನು 2023ರೊಳಗೆ ಪೂರ್ಣಗೊಳಿಸಲು ನಿರ್ದೇಶಿಸಿದ್ದೇವೆ. 2025ರ ವೇಳೆಗೆ ಬೆಂಗಳೂರು ಮೆಟ್ರೋ ವಿಸ್ತೀರ್ಣವನ್ನು 300 ಕಿ.ಮೀಗೆ ವಿಸ್ತರಿಸಲಾಗುತ್ತದೆ ಎಂದು ಹೇಳಿದರು. 2022ರ ವೇಳೆಗೆ ಪೂರ್ವ ದಿಕ್ಕಿನ ವೈಟ್‌ಫೀಲ್ಡ್‌, ಹೊರ ವರ್ತುಲ ರಸ್ತೆ, ಐಟಿಪಿಎಲ್‌ ಪ್ರದೇಶದ ಐಟಿಹಬ್‌ ಜತೆಗೆ ಪಶ್ಚಿಮದ ಯಶವಂತಪುರ, ಪೀಣ್ಯ ಕೈಗಾರಿಕಾ ಹಬ್‌ಗ ಸಂಯೋಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ ಎಂದರು.

ಘನತಾಜ್ಯ ನಿರ್ವಹಣೆ: ನಗರದ ಕಸ ನಿರ್ವಹಣೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸೂಚನೆ ನೀಡಿದ್ದೇವೆ. ಕಸ ಸಾಗಣೆ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್‌ ಉಪಕರಣ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಈ ವಾಹನಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು. ಘನತ್ಯಾಜ್ಯ ನಿರ್ವಹಣೆ ಕಾರ್ಯದ ಉಸ್ತುವಾರಿಗೆ 20 ಎಂಜಿನಿಯರ್‌ಗಳನ್ನು ತಕ್ಷಣವೇ ನೇಮಿಸಿಕೊಳ್ಳಲಾಗುವುದು ಎಂದು ಹೇಳಿದರು.

ಘನ ತ್ಯಾಜ್ಯ ನಿರ್ವಹಣೆಗೆ ಹೆಚ್ಚುವರಿ ಪೌರಕಾರ್ಮಿಕರನ್ನು ಬಳಸಿಕೊಳ್ಳಲು ನಿರ್ದೇಶನ ನೀಡಿದ್ದೇವೆ. ನಗರದಲ್ಲಿ ನಿತ್ಯ ಸುಮಾರು 4,500 ಟನ್‌ ಕಸ ಉತ್ಪಾದನೆಯಾಗುತ್ತಿದೆ. ಇದರಲ್ಲಿ 2,500 ಟನ್‌ ಮಾತ್ರ ಸಂಸ್ಕರಣೆಯಾಗುತ್ತಿದೆ. ವೈಜ್ಞಾನಿಕ ಕಸ ವಿಲೇವಾರಿಗೆ ಅಗತ್ಯವಿರುವ ಹೆಚ್ಚುವರಿ ಸಂಸ್ಕರಣಾ ಘಟಕ ಸ್ಥಾಪಿಸಲು ಸೂಚನೆ ನೀಡಿದ್ದೇವೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಕೆರೆಗಳ ನಿರ್ವಹಣೆ: ನಗರ ವ್ಯಾಪ್ತಿಯ ಎಲ್ಲ ಕೆರೆಗಳ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಲು ನಿರ್ಧಾರ ತೆಗೆದುಕೊಂಡಿದ್ದೇವೆ. ಎಲ್ಲ ಕೆರೆಗಳ ಏರಿಗಳನ್ನು ಭದ್ರಪಡಿಸಿ, ವಾಕಿಂಗ್‌ ಪಾತ್‌ ನಿರ್ಮಿಸಿ ಸೌಂದರ್ಯ ವರ್ಧನೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಕೆರೆ ಪ್ರದೇಶದಲ್ಲಿರುವ ಬಡವರ ಮನೆಗಳನ್ನು ಹೊರತುಪಡಿಸಿ, ಶ್ರೀಮಂತರು ಮತ್ತು ಬಿಲ್ಡರ್‌ಗಳು ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆರೆವುಗೊಳಿಸಲು ಸೂಚನೆ ನೀಡಿದ್ದೇವೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next