Advertisement

ನವೀಕರಿಸಬಹುದಾದ ಇಂಧನದತ್ತ ಸರ್ಕಾರದ ಚಿತ್ತ

08:17 PM Nov 26, 2023 | Team Udayavani |

ದಾವಣಗೆರೆ: ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಗ್ರಿಡ್‌ ಮೇಲಿನ ಹೊರೆ ತಗ್ಗಿಸಲು ರಾಜ್ಯ ಸರ್ಕಾರ ನವೀಕರಿಸಬಹುದಾದ ಇಂಧನದತ್ತ ಚಿತ್ತ ಹರಿಸಿದೆ.

Advertisement

ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಹಾಗೂ ಕೈಗೆತ್ತಿಕೊಳ್ಳಬೇಕಾದ ನವೀಕರಿಸಬಹುದಾದ ಇಂಧನ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಬಲರಾಂ ಅಧ್ಯಕ್ಷತೆಯಲ್ಲಿ ಐದು ಜನರ ಸಮಿತಿಯೊಂದರನ್ನು ರಚಿಸಿದ್ದು ನವೀಕರಿಸಬಹುದಾದ ಇಂಧನ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಕ್ರಮವಹಿಸಲು ನಿರ್ದೇಶನ ನೀಡಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಬೇಡಿಕೆ ಹಾಗೂ ಕೇಂದ್ರ ಸರ್ಕಾರ 2030ರೊಳಗೆ ನಿಗದಿಪಡಿಸಿದ 500 ಗಿಗಾ ವ್ಯಾಟ್‌ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿ ಸಾಧಿಸಲು ರಾಜ್ಯ ಸರ್ಕಾರ, ನವೀಕರಿಸಬಹುದಾದ ಇಂಧನ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿದೆ. ಇದಕ್ಕಾಗಿ ರಚಿಸಲಾದ ಸಮಿತಿ ಮೂಲಕ ಎಲ್ಲ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಸಂಸ್ಥೆ ಇಲ್ಲವೇ ಅಭಿವೃದ್ಧಿದಾರರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲು ನಿರ್ಧರಿಸಿದೆ.

ಯೋಜನೆಗಳ ಸ್ಥಿತಿಗತಿ: ಗ್ರಿಡ್‌ ಮೇಲಿನ ಹೊರೆ ತಗ್ಗಿಸಲು ಈಗಾಗಲೇ ಪಿಎಂ ಕುಸುಮ್‌- ಕಾಂಪೋನೆಂಟ್‌- ಬಿ ಯೋಜನೆಯಡಿ 38,782 ಸಂಖ್ಯೆಯ ಜಾಲಮುಕ್ತ ಸೌರ ನೀರಾವರಿ ಪಂಪ್‌ಸೆಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ರೂಫ್‌ಟಾಫ್‌ ಹಂತ-2ಎ ಯೋಜನೆಯಡಿ ರಾಜ್ಯಕ್ಕೆ 33 ಮೆಗಾ ವ್ಯಾಟ್‌ ಸಾಮರ್ಥ್ಯದ ಯೋಜನೆಗಳ ಹಂಚಿಕೆ ನೀಡಿದ್ದು ಈವರೆಗೆ ಕೇವಲ 2.5 ಮೆಗಾ ವ್ಯಾಟ್‌ ಸಾಮರ್ಥ್ಯದ ಯೋಜನೆಗಳನ್ನು ಮಾತ್ರ ಅನುಷ್ಠಾನಗೊಳಿಸಲಾಗಿದೆ.

ರಾಜ್ಯದಲ್ಲಿ ಈಗಾಗಲೇ ಪಿಎಂ ಕುಸುಮ್‌ ಕಾಂಪೋನೆಂಟ್‌-ಸಿ ಯೋಜನೆಯಡಿ ಹಂತ-1ರಲ್ಲಿ 3,37,331 ಪಂಪ್‌ಸೆಟ್‌ಗಳನ್ನು ಫೀಡರ್‌ವಾರು ಸೌರೀಕರಣ ಮಾಡಲು 1300 ಮೆಗಾ ವ್ಯಾಟ್‌ ಸಾಮರ್ಥ್ಯದ ಯೋಜನೆಗಳ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಮತ್ತು ಹಂತ-2ರಲ್ಲಿ 1192 ಮೆಗಾ ವ್ಯಾಟ್‌ ಸಾಮರ್ಥ್ಯದ 4,29,588 ಪಂಪ್‌ಸೆಟ್‌ ಒಳಗೊಂಡಂತೆ ಫೀಡರ್‌ವಾರು ಸೌರೀಕರಣ ಯೋಜನೆ ಇನ್ನೂ ಕೈಗೆತ್ತಿಕೊಳ್ಳಬೇಕಾಗಿದೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಈಗಾಗಲೇ ಇರುವ 2050 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಪಾರ್ಕ್‌ಗೆ ಹೆಚ್ಚುವರಿಯಾಗಿ 300 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರಪಾರ್ಕ್‌ ಸ್ಥಾಪಿಸಲು ಮತ್ತು ಹೊಸದಾಗಿ 2500 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಪಾರ್ಕ್‌ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 100 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಯೋಜನೆ ಮತ್ತು ಬೀದರ್‌ ಜಿಲ್ಲೆಯಲ್ಲಿ 500 ಮೆಗಾ ವ್ಯಾಟ್‌ ಸಾಮರ್ಥ್ಯದ ಸೌರ ಪಾರ್ಕ್‌ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅದೇ ರೀತಿ ಪಾವಗಡ ತಾಲೂಕಿನಲ್ಲಿ 2.4 ಮೆಗಾ ವ್ಯಾಟ್‌/4.5 ಮೆಗಾ ವ್ಯಾಟ್‌ ಸಾಮರ್ಥ್ಯದ ಬ್ಯಾಟರಿ ಶೇಖರಣೆ ಯೋಜನೆ (ಬಿಇಎಸ್‌ಎಸ್‌)ಯನ್ನು ಪ್ರಾಯೋಗಿಕವಾಗಿ ಕೈಗೊಂಡಿದ್ದು ಇಲ್ಲಿ ಹೆಚ್ಚಿನ ಸಾಮರ್ಥಯದ ಬ್ಯಾಟರಿ ಶೇಖರಣೆ ಯೋಜನೆ ಅನುಷ್ಠಾನಗೊಳಿಸುವ ಅವಶ್ಯಕತೆ ಇದೆ.

Advertisement

ಅದೇ ರೀತಿ ಪಂಪಂಡ್‌ ಹೈಡ್ರೋ ಸ್ಟೋರೇಜ್‌ (ಪಿಎಸ್‌ಪಿ) ಯೋಜನೆಯಡಿ ಶರಾವತಿ-2000 ಮೆಗಾ ವ್ಯಾಟ್‌ ಸಾಮರ್ಥ್ಯದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಖಾಸಗಿ ಹೂಡಿಕೆಯಲ್ಲಿ 1000 ಮೆಗಾ ವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಖರೀದಿ ಮಾಡುವ ಪ್ರಸ್ತಾವನೆಯೂ ಚಾಲ್ತಿಯಲ್ಲಿದೆ. ಅಲ್ಲದೇ 7830 ಮೆಗಾ ವ್ಯಾಟ್‌ ಸಾಮರ್ಥ್ಯದ ಪಿಎಸ್‌ಪಿ ಅಭಿವೃದ್ಧಿ ಪಡಿಸಲು ವಿವಿಧ ಖಾಸಗಿ ಬಂಡವಾಳದಾರರು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಗ್ರಿಡ್‌ ಹೈಡ್ರೋಜನ್‌ ನೀತಿ ರಚನೆ: ಕೇಂದ್ರ ಸರ್ಕಾರದ ಗ್ರೀನ್‌ ಹೈಡ್ರೋಜನ್‌ ಮಿಷನ್‌ಗೆ ಪೂರಕವಾಗಿ ರಾಜ್ಯದಲ್ಲಿಯೂ ಗ್ರೀನ್‌ ಹೈಡ್ರೋಜನ್‌ ನೀತಿ ರಚಿಸಲು ಕ್ರಮ ವಹಿಸಿದ್ದು ಈ ಯೋಜನೆಗಳ ಅನುಷ್ಠಾನವನ್ನೂ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕಾಗಿದೆ. ಪಿಎಸ್‌ಪಿ ಹಾಗೂ ಗ್ರೀನ್‌ ಹೈಡ್ರೋಜನ್‌/ಗ್ರೀನ್‌ ಅಮೋನಿಯಾ ಯೋಜನೆಗಳಿಗೂ ವಿದ್ಯುತ್‌ನ ಅವಶ್ಯಕತೆ ಇರುವುದರಿಂದ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕಾಗಿದೆ.

ಒಟ್ಟಾರೆ ಚಾಲ್ತಿಯಲ್ಲಿರುವ ಹಾಗೂ ಕೈಗೊಳ್ಳಬಹುದಾದ ಎಲ್ಲ ನವೀಕರಿಸಬಹುದಾದ ಇಂಧನ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಮಿತಿ ಕ್ರಮ ವಹಿಸಲಿದ್ದು ಇದರಿಂದ ರಾಜ್ಯದ ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಪೂರೈಕೆಯಾಗುವ ಜತೆಗೆ ಗ್ರಿಡ್‌ ಮೇಲಿನ ಹೊರೆ ತಗ್ಗುವ ನಿರೀಕ್ಷೆ ಇದೆ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next