ಗದಗ: ಕಳೆದ ಎರಡು ವರ್ಷದಲ್ಲಿ ಕೋವಿಡ್ ನಿಯಂತ್ರಣ ಮಾಡಿದ್ದೇ ಸರಕಾರದ ದೊಡ್ಡ ಸಾಧನೆ. ಜೊತೆಗೆ ರಾಜ್ಯದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಕಾಂಗ್ರೆಸ್ ಬಳಿ ಕೇಳಿ ಬಿಜೆಪಿ ಜನ ಸ್ವರಾಜ್ ಕಾರ್ಯಕ್ರಮ ಮಾಡಬೇಕಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಮಂಗಳವಾರ ತಿರುಗೇಟು ನೀಡಿದರು.
ನರಗುಂದ ಪಟ್ಟಣದಲ್ಲಿ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಜಾಥಾ, ಅಭಿಯಾನ ನಡೆಸುವುದು ಸಾಮಾನ್ಯ. ಆ ಮೂಲಕ ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತದೆ. ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದಿದ್ದರೆ, ರಾಜ್ಯವನ್ನೇ ಮಾರಿಬಿಡುತ್ತಿದ್ದರು. ಇಲ್ಲವೇ ಹಾದಿ ಬೀದಿಯಲ್ಲೇ ಸಾಲು ಸಾಲ ಮೃತದೇಹಗಳು ಬೀಳುತ್ತಿದ್ದವು. ಈ ಹಿಂದೆ 18 ತಿಂಗಳು ಅಧಿಕಾರ ನಡೆಸಿದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದ ಕೊಡುಗೆ ಏನು ಎಂದು ಕುಟುಕಿದರು.
ದೇಶದ 100 ಕೋಟಿ ಜನರಿಗೆ ಲಸಿಕೆ ನೀಡಿದ್ದು ಸಾಮಾನ್ಯ ಕೆಲಸವಲ್ಲ. ಬಿಜೆಪಿ ಸರಕಾರದ ಸಾಧನೆ ಪ್ರಶ್ನಿಸುವವರಿಗೆ ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಮತ ಪೆಟ್ಟಿಗೆ ಮೂಲಕ ಉತ್ತರ ನೀಡುತ್ತೇವೆ ಎಂದರು.
ಇದನ್ನೂ ಓದಿ: ಚೆನ್ನೈನಲ್ಲಿ ಮತ್ತೆ ಮಳೆ ಅಬ್ಬರ,ನಾಲ್ವರು ಬಲಿ: ಆರೆಂಜ್ ಅಲರ್ಟ್
ಯಾರದ್ದೋ ಕುತಂತ್ರದಲ್ಲಿ ಸಿಲುಕಿದ್ದ ರಮೇಶ ಜಾರಕಿಹೊಳಿ ಅವರು ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯ ದಿನಗಳು ಬರುತ್ತವೆ ಎಂದರು.
ಮೇಕೆದಾಟು ಯೋಜನೆ ಕೋರ್ಟ್ ನಲ್ಲಿದ್ದು, ಅಲ್ಲಿ ಕ್ಲಿಯರೆನ್ಸ್ ದೊರಕುತ್ತಿದ್ದಂತೆ ನಾವೇ ಮಾಡುತ್ತೇವೆ. ಈ ಬಗ್ಗೆ ಕಾಂಗ್ರೆಸ್ ನವರಿಂದ ಹೇಳಿಸಿಕೊಳ್ಳಬೇಕಿಲ್ಲ. ಇದು ತಮ್ಮದೇ ಯೋಜನೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ತಮ್ಮ ಅಧಿಕಾರದಲ್ಲಿ ಏಕೆ ಮಾಡಲಿಲ್ಲ ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಟೀಲ, ಸಂಸದ ಪಿ.ಸಿ.ಗದ್ದಿಗೌಡರ ಮತ್ತಿತರರು ಇದ್ದರು.