ಚಿತ್ರದುರ್ಗ: ಪ್ರತಿ ತಿಂಗಳು 1 ನೇ ತಾರೀಕಿನೊಳಗೆ ಸಂಬಳ ಎಣಿಸುತ್ತಿದ್ದ ಸರಕಾರಿ ನೌಕರರು ಈ ಬಾರಿ ತೊಂದರೆಗೆ ಸಿಲುಕಿದ್ದಾರೆ. ಏಪ್ರಿಲ್ ತಿಂಗಳ 15 ದಿನ ಕಳೆದರೂ ಸರಕಾರಿ ನೌಕರರಿಗೆ ಇನ್ನೂ ಮಾರ್ಚ್ ತಿಂಗಳ ಸಂಬಳ ಪಾವತಿಯಾಗಿಲ್ಲ. ಹೀಗಾಗಿ ಈ ತಿಂಗಳು ಕುಟುಂಬ ನಿರ್ವಹಣೆ ಸೇರಿದಂತೆ ದಿನದ ಖರ್ಚಿಗೂ ಪರದಾಡುವಂತಾಗಿದೆ.
ತಂತ್ರಜ್ಞಾನದಲ್ಲಿನ ತಾಂತ್ರಿಕ ದೋಷವೇ ಸಂಬಳ ಪಾವತಿ ಆಗದಿರೋದಕ್ಕೆ ಕಾರಣ. ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಎಚ್‌ಆರ್‌ಎಂಎಸ್‌ನಲ್ಲಿ (ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ) ಕಳೆದ 15 ದಿನಗಳಿಂದ ಯಾವುದೇ ಅಪ್‌ಲೋಡ್, ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರ್ಕಾರಿ ಇಲಾಖೆಗಳ ಲಕ್ಷಾಂತರ ನೌಕರರ ಮಾರ್ಚ್ ತಿಂಗಳ ಸಂಬಳಕ್ಕೇ ಸಂಚಕಾರ ಉಂಟಾಗಿದೆ.
ಆಯಾ ತಿಂಗಳ ಕೊನೆಯಲ್ಲಿ ಅಂದರೆ 30- 31ನೇ ತಾರೀಕಿಗೆ ಆನ್‌ಲೈನ್ ಮೂಲಕ ನೇರವಾಗಿ ನೌಕರರ ಖಾತೆಗೆ ವೇತನ ಪಾವತಿಯಾಗುತ್ತಿತ್ತು. ಆದರೆ ಮಾರ್ಚ್ ತಿಂಗಳ ವೇತನ ಏಪ್ರಿಲ್ 17 ಮುಗಿದರೂ ಇನ್ನೂ ಜಮಾ ಆಗಿಲ್ಲ. ವಿವಿಧ ಇಲಾಖೆಗಳಲ್ಲಿ ಎ,ಬಿ ಗ್ರೇಡ್‌ನಲ್ಲಿರುವ ಅಧಿಕಾರಿಗಳಿಗೆ ಕೆಲ ಸಿಬ್ಬಂದಿಗೆ ಅಷ್ಟಾಗಿ ತೊಂದರೆ ಯಾಗಿಲ್ಲ. ಆದರೆ ಮದ್ಯಮ ಹಾಗೂ ಕಡಿಮೆ ಸಂಬಳ ಪಡೆಯುವ ಸಿ ಮತ್ತು ಡಿ ಗ್ರೂಪ್ ನೌಕರರಿಗೆ ತೊಂದರೆಯಾಗಿದೆ.
ಕೃಷಿ, ತೋಟಗಾರಿಕೆ, ಶಿಕ್ಷಣ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳ ಬಹುತೇಕ ಸರ್ಕಾರಿ ಇಲಾಖೆಗಳಲ್ಲಿ ವೇತನ ಪಟ್ಟಿ ತಯಾರು ಮಾಡುವ ಅಧಿಕಾರಿಗಳು ಪ್ರತಿನಿತ್ಯ ಕಂಪ್ಯೂಟರ್ ಮುಂದೆ ಕುಳಿತು ಖಾತೆಗೆ ವೇತನ ಜಮಾ ಆಗಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಆದರೆ ಎಚ್‌ಆರ್‌ಎಂಎಸ್ ತಂತ್ರಾಂಶ “ಅಪ್ಲಿಕೇಷನ್ ಅಂಡರ್ ಮೆಂಟೆನೆನ್ಸ್’ ಎಂದು ತೋರಿಸುತ್ತಿರುತ್ತದೆ. ಹೀಗಾಗಿ ನೌಕರರ ಮೊಗದಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.
ಹೇಗೆ ಬಟವಡೆಯಾಗುತ್ತೆ ವೇತನ?: ಆಯಾ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಯ ಪ್ರತಿ ತಿಂಗಳ ವೇತನದ ವಿವರಗಳ ಬಿಲ್ ತಯಾರಿಸಿ ಎಚ್‌ಆರ್‌ಎಂಎಸ್ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಅಪ್‌ಲೋಡ್ ಆದ 24 ಗಂಟೆಯೊಳಗಾಗಿ ಬಿಲ್ ಜನರೇಟ್ ಆಗಿ ವಾಪಸ್ ಬರುತ್ತದೆ. ವಾಪಸ್ ಬಂದ ವೇತನದ ವಿವರಗಳ ಪ್ರತಿಯನ್ನು ಡೌನ್‌ಲೋಡ್ ಮಾಡಬೇಕು. ಡೌನ್‌ಲೋಡ್ ಪ್ರತಿಯನ್ನು ಖಜಾನೆ-2ಗೆ ಅಪ್‌ಲೋಡ್ ಮಾಡಿ ಕಳುಹಿಸಿದರೆ 3-4 ದಿನಗಳಲ್ಲಿ ಆಯಾ ಅಧಿಧಿಕಾರಿ, ನೌಕರರು, ಸಿಬ್ಬಂದಿ ಖಾತೆಗೆ ನೇರವಾಗಿ ಖಜಾನೆಯಿಂದ ವೇತನ ಬಿಡುಗಡೆಯಾಗುತ್ತದೆ. ಆದರೆ ಈ ಬಾರಿ ವೇತನ ವಿವರ ತಯಾರಿಸಿ ಎಚ್‌ಆರ್‌ಎಂಎಸ್ ತಂತ್ರಾಂಶಕ್ಕೆ ಅಪಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ.
ಅಧಿಕಾರಿಗಳಲ್ಲೇ ಗೊಂದಲ!
ಎಚ್‌ಆರ್‌ಎಂಎಸ್ ತಂತ್ರಾಂಶದ ಬಗ್ಗೆ ಸರ್ಕಾರಿ ಅಧಿಕಾರಿಗಳಲ್ಲೇ ಗೊಂದಲ ಸೃಷ್ಟಿಯಾಗಿದೆ. ಸರಿ ಇದೆ ಎಂದು ಜಿಲ್ಲಾ ಖಜಾನೆ ಅಧಿಕಾರಿ ಹೇಳಿದರೆ, ಆ ತಂತ್ರಾಂಶ ನಿರ್ವಹಿಸುವ ಸಿಬ್ಬಂದಿ ತಂತ್ರಾಂಶ ಸರಿ ಇಲ್ಲ, ಯಾವುದೂ ಅಪ್‌ಲೋಡ್ ಆಗುತ್ತಿಲ್ಲ ಎಂದು ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಮತ್ತೂಂದೆಡೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾರ್ಚ್ ತಿಂಗಳ ಅಂತ್ಯದವರೆಗೆ ಸಂಬಳ ಪಡೆಯಲಾಗಿದೆ, ಏಪ್ರಿಲ್ ತಿಂಗಳು ಇನ್ನೂ ಪೂರ್ಣಗೊಂಡಿಲ್ಲ, ಬಾಕಿ ವೇತನ ಯಾವುದೂ ಇಲ್ಲ ಎನ್ನುತ್ತಿದ್ದಾರೆ. ಆದರೆ ಅವರ ಅಧೀನ ಸಿಬ್ಬಂದಿ ಮಾರ್ಚ್ ತಿಂಗಳ ವೇತನವೇ ಆಗಿಲ್ಲ, ಸಾಲ ಮಾಡಿಕೊಂಡು ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದೇವೆ ಎಂದು ಪತ್ರಿಕೆಗೆ ತಿಳಿಸಿದರು. ತೋಟಗಾರಿಕೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಕೂಡ ವೇತನ ಆಗಿಲ್ಲ ಎಂದು ಮಾಹಿತಿ ನೀಡಿದರು.
– ಹರಿಯಬ್ಬೆ ಹೆಂಜಾರಪ್ಪ