ಬಳ್ಳಾರಿ: ರಾಜ್ಯದ ದೋಸ್ತಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ “ಬೆಳಗಾವಿ ಬಿಕ್ಕಟ್ಟು’ ಶಮನವಾಗುವ ಮುನ್ನವೇ ಮತ್ತೂಂದು ಸಮಸ್ಯೆ ಉದ್ಭವವಾಗಿದೆ. ಜಾರಕಿಹೊಳಿ ಬ್ರದರ್ಸ್ ಹಾಗೂ ಹೆಬ್ಟಾಳ್ಕರ್ ನಡುವಿನ ಮುಸುಕಿನ ಗುದ್ದಾಟವನ್ನು ನಿಭಾಯಿಸಿದ ಕಾಂಗ್ರೆಸ್‌ಗೆ ಈಗ “ಬಳ್ಳಾರಿ ಬಿಸಿ’ ತಟ್ಟಿದೆ.
ಸಮ್ಮಿಶ್ರ ಸರಕಾರದ ಸಚಿವ ಸಂಪುಟದಲ್ಲಿ ಬಳ್ಳಾರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಅಸಮಾಧಾನ ಈಗ ಸ್ಫೋಟಗೊಂಡಿದೆ. ಸರಕಾರ ರಚನೆಯಾದಾಗಿನಿಂದಲೂ ಈ ಬಗ್ಗೆ ಬೇಸರವಿದ್ದರೂ ಬಹಿರಂಗವಾಗಿ ತೋರ್ಪಡಿಸದ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಜಾರಕಿಹೊಳಿ ಸಹೋದರರ ಬಂಡಾಯದ ನಂತರ ತಮ್ಮ ತಾಕತ್ತು ತೋರಿಸಲು ಮುಂದಾಗಿದ್ದಾರೆ.
ಈ ಮಧ್ಯೆ, ಜಾರಕಿಹೊಳಿ ಸಹೋದರರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಬಳ್ಳಾರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇಟ್ಟು, ಶಾಸಕ ನಾಗೇಂದ್ರ ಹೆಸರು ಹೇಳಿರುವುದೇ ಈಗ ಅಸಮಾಧಾನಕ್ಕೆ ಕಾರಣ. ಮೊದಲು ಒಗ್ಗಟ್ಟು ಪ್ರದರ್ಶಿಸಿದ್ದ ಜಿಲ್ಲೆಯ 6 ಮಂದಿ ಕಾಂಗ್ರೆಸ್ ಶಾಸಕರ ಮಧ್ಯೆಯೇ ಈಗ ಭಿನ್ನರಾಗ ಕೇಳಿ ಬಂದಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಾದ ಸಂಡೂರು ಶಾಸಕ ಇ.ತುಕಾರಾಂ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಒಗ್ಗೂಡಿ ದೆಹಲಿಯತ್ತ ಮುಖ ಮಾಡಿದ್ದಾರೆ.
ಲಂಬಾಣಿ ಕೋಟಾದಡಿ ಸ್ಥಾನ ಕೊಡಿ: 3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಡಗಲಿ ಶಾಸಕ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ, “ಉದಯವಾಣಿ’ ಜೊತೆ ಮಾತನಾಡಿ, “ಜಿಲ್ಲೆಯ ಶಾಸಕರ ಪೈಕಿ ನಾನು ಸಹ ಸಚಿವಾಕಾಂಕ್ಷಿಯಾಗಿದ್ದೇನೆ. ಸಮುದಾಯದಲ್ಲೂ ಹಿರಿಯ ಮುಖಂಡನಾಗಿದ್ದೇನೆ. ಹೀಗಾಗಿ ಲಂಬಾಣಿ ಸಮುದಾಯದ ಕೋಟಾದಡಿ ಸಚಿವ ಸ್ಥಾನ ನೀಡುವಂತೆ ಪಕ್ಷದ ಹಿರಿಯ ಮುಖಂಡರಲ್ಲಿ ಬೇಡಿಕೆ ಇಟ್ಟಿದ್ದೇನೆ. ಆದರೆ, ಯಾವುದೇ ಕಾರಣಕ್ಕೂ ದೆಹಲಿಗೆ ಹೋಗಲ್ಲ ಎಂದರು.
ನಾಗೇಂದ್ರಗೆ ಬೇಡ: ಈ ಮಧ್ಯೆ, ಶಾಸಕ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ನನಗೂ ಅಸಮಾಧಾನವಿದೆ ಎಂದು ಸಂಡೂರು ಶಾಸಕ ಇ.ತುಕಾರಾಂ ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಸಚಿವ ಸ್ಥಾನದ ಬಗ್ಗೆ ಬೇರೆಯವರು ನಿರ್ಧಾರ ಮಾಡಬಾರದು. ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಸೇರಿ ಜಯಗಳಿಸಿದ್ದ ಶಾಸಕ ಭೀಮಾನಾಯ್ಕ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷದ ಹೈಕಮಾಂಡ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಸಂತೋಷ್‌ಲಾಡ್ ಎಂಎಲ್‌ಸಿ ಆಗಲಿ: ಈ ಮಧ್ಯೆ, ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರು, ಸಂತೋಷ್ ಲಾಡ್ ಅವರನ್ನು ಎಂಎಲ್‌ಸಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಹಾಲಿ ಸಚಿವರಾದ ರಮೇಶ ಜಾರಕಿಹೊಳಿ, ಡಿ.ಕೆ.ಶಿವಕುಮಾರ ಅವರಿಗೆ ಯಾವುದೇ ಜಿಲ್ಲೆಗಳ ಉಸ್ತುವಾರಿ ನೀಡಲಿ. ನನಗೆ ಯಾವುದೇ ತಕರಾರು ಇಲ್ಲ. ಆದರೆ, ನನ್ನ ಗೆಲುವಿಗೆ ಶ್ರಮಿಸಿದ್ದ ಮಾಜಿ ಸಚಿವ ಎಸ್.ಸಂತೋಷ್‌ಲಾಡ್ ಅವರನ್ನು ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಪರಿಗಣಿಸಬೇಕು ಎಂದಿದ್ದಾರೆ.