ಮುಂಬೈ: ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿನ ಅಧಿಕಾರ ಬದಲಾವಣೆ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಆದರೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಅದಾಗಿಯೇ ಪತನವಾಗಲಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಒಂದು ವೇಳೆ ನಾವು ಮಹಾರಾಷ್ಟ್ರದ ಕುರಿತು ಈ ಅರ್ಥದಲ್ಲಿ ಮಾತನಾಡಿದರೆ, ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾವಣೆಯಾಗಬೇಕು ಎಂಬ ಬಗ್ಗೆ ಕಾಳಜಿ ಇದೆ. ಆದರೆ ನಾವು ಈ ಬಗ್ಗೆ ನಿಗಾ ವಹಿಸಿಲ್ಲ. ಈ ಮಹಾರಾಷ್ಟ್ರ ಸರ್ಕಾರ ಒಂದಲ್ಲಾ ಒಂದು ದಿನ ತನ್ನಿಂದ ತಾನೇ ಪತನವಾಗಲಿದೆ ಎಂದು ಫಡ್ನವೀಸ್ ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಮಹಾರಾಷ್ಟ್ರ ರಾಜಕೀಯದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಫಡ್ನವೀಸ್ ಅವರು ಎಎನ್ ಐ ಜತೆ ಮಾತನಾಡುತ್ತ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಲಾಟರಿ ಹೆಸರಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ಪಂಗನಾಮ! 28 ಲಕ್ಷಕ್ಕೂ ಅಧಿಕ ವಂಚನೆ
“ ಈ ರೀತಿಯ ಸರ್ಕಾರ ಹೆಚ್ಚು ಕಾಲ ಆಡಳಿತ ನಡೆಸುವುದಿಲ್ಲ. ಯಾವಾಗ ಈ ಸರ್ಕಾರ ಪತನವಾಗುತ್ತದೋ, ಆಗ ನಾವು ಪರ್ಯಾಯ ಸರ್ಕಾರ ರಚಿಸುತ್ತೇವೆ. ಆದರೆ ಈಗ ಅದು ನಮ್ಮ ಗುರಿಯಲ್ಲ. ಮಹಾರಾಷ್ಟ್ರದಲ್ಲಿ ತೀವ್ರ ರೀತಿಯ ಕೃಷಿ ಬಿಕ್ಕಟ್ಟು ಇದೆ. ರೈತರು ಚಿಂತೆಗೊಳಗಾಗಿದ್ದಾರೆ. ಸರ್ಕಾರ ಕೂಡಾ ಅವರಿಗೆ ಆರ್ಥಿಕ ನೆರವು ನೀಡಿಲ್ಲ. ವಿರೋಧ ಪಕ್ಷವಾಗಿ ನಾವು ರೈತರ ಜತೆಗಿದ್ದೇವೆ ಮತ್ತು ಸರ್ಕಾರದ ನಿಲುವನ್ನು ಪ್ರಶ್ನಿಸುತ್ತೇವೆ ಎಂದು ಹೇಳಿದರು.
ಬಿಹಾರ ಚುನಾವಣೆಯ ಫಲಿತಾಂಶ ರಾಷ್ಟ್ರ ರಾಜಕಾರಣ ಮತ್ತು ಅದೇ ರೀತಿ ಪಶ್ಚಿಮಬಂಗಾಳದ ಚುನಾವಣೆ ಮೇಲೆಯೂ ಪರಿಣಾಮ ಬೀರಲಿದೆ. 2021ರಲ್ಲಿ ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.