Advertisement

ಕುಂದಾಪುರ : ಬಾವಿ ಕುಸಿತ, ಹಾಸ್ಟೆಲ್‌ ಗೋಡೆಗೆ ಅಪಾಯ

02:15 AM Jun 22, 2018 | Karthik A |

ಕುಂದಾಪುರ: ಕುಂದಾಪುರ ಪುರಸಭೆಯ ಅಧೀನದ ನಿರುಪಯುಕ್ತ ಬಾವಿಯೊಂದು ಮಳೆ ನೀರಿನ ಒತ್ತಡದಿಂದ ಬುಧವಾರ ತಡರಾತ್ರಿ ಕುಸಿದು ಬಿದ್ದಿದ್ದು, ಇದಕ್ಕೆ ತಾಗಿಕೊಂಡೇ ಇರುವ ಪ.ಜಾತಿ, ಪಂಗಡದ ಬಾಲಕರ ವಿದ್ಯಾರ್ಥಿನಿಲಯದ ಊಟದ ಕೋಣೆಯಿರುವ ಕಟ್ಟಡಕ್ಕೂ ಅಪಾಯ ಎದುರಾಗುವ ಸಂಭವವಿದೆ.

Advertisement

ಕಟ್ಟಡದಲ್ಲಿ ಬಿರುಕು
ನಿರಂತರ ಮಳೆಯಾಗುತ್ತಿರುವುದರಿಂದ ಬಾವಿಯು ಮತ್ತೆ ಮತ್ತೆ ಕುಸಿಯುತ್ತಿದೆ. ಒಂದು ಬದಿಯ ಆವರಣ ಗೋಡೆ ಕೂಡ ಕುಸಿದು ಬಿದ್ದು ಅಪಾಯದ ಸ್ಥಿತಿಯಲ್ಲಿದೆ. ಈ ಬಾವಿಯ ಆವರಣ ಗೋಡೆಗೆ ತಾಗಿಕೊಂಡೇ ಇದ್ದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೊಳಪಟ್ಟ ಈ ಹಾಸ್ಟೆಲ್‌ ನ ಶೌಚಾಲಯದ ಗೋಡೆಯೂ ಬಿರುಕು ಬಿಟ್ಟಿದೆ.


ನಿರುಪಯುಕ್ತ ಬಾವಿ

25 ವರ್ಷಗಳ ಹಿಂದಿನ ಬಾವಿ ಇದಾಗಿದ್ದು, ಪುರಸಭೆಯ ಕೆಲ ವಾರ್ಡ್‌ಗಳಿಗೆ ಇಲ್ಲಿಂದ ನೀರು ಪೂರೈಸಲಾಗುತ್ತಿತ್ತು. ಕೆಲ ವರ್ಷಗಳ ಹಿಂದೆ ಪುರಸಭೆಗೆ ವಾರಾಹಿ ನೀರನ್ನು ತರಿಸಲು ಆರಂಭಿಸಿದ್ದರಿಂದ ಈ ಬಾವಿಯ ನೀರು ತೆಗೆಯುವುದನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದು ಅಪಾಯಕಾರಿ ಬಾವಿಯಾಗಿದ್ದರೂ, ಮುಚ್ಚದೇ ಹಾಗೇ ಬಿಟ್ಟಿರುವುದು ಯಾಕೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

ಪುರಸಭೆಯಿಂದ ಕಾರ್ಯಾರಂಭ
ಬಾವಿ ಕುಸಿದು ಬಿದ್ದ ಅನಂತರ ಪುರಸಭೆ ಎಚ್ಚೆತ್ತುಕೊಂಡಿದ್ದು, ಗುರುವಾರ ಬೆಳಗ್ಗಿನಿಂದಲೇ ಸಮರೋಪಾದಿ ಕಾರ್ಯ ನಡೆಯುತ್ತಿದೆ. ಸದ್ಯಕ್ಕೆ ಬಾವಿ ಕುಸಿದು ಬೀಳದಂತೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ‘ಉದಯವಾಣಿ’ಗೆ ತಿಳಿಸಿದ್ದಾರೆ. ಕುಂದಾಪುರ ತಹಶೀಲ್ದಾರ್‌ ರವಿ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಚಂದ್ರಶೇಖರ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಹಾಸ್ಟೆಲ್‌ ವಾರ್ಡನ್‌ ವಿ. ಲಕ್ಷ್ಮಿ, ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಪ್ರಭಾಕರ್‌, ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು. 

ಎಸಿ ಭೇಟಿ
ಸುದ್ದಿ ತಿಳಿದ ತತ್‌ ಕ್ಷಣ ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರಲ್ಲದೆ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲು  ಪುರಸಭೆ ಹಾಗೂ ತಾಲೂಕು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next