ಹೊಸದಿಲ್ಲಿ: ದೇಶದ ಆರ್ಥಿಕತೆಯನ್ನು ಬಲಪಡಿಸುವ ಮತ್ತು 5 ಶತಕೋಟಿ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಸಲುವಾಗಿ ಸದ್ಯದಲ್ಲೇ ಹೊಸ ಸಹಕಾರ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಸಹಕಾರ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ದಿಲ್ಲಿಯಲ್ಲಿ ನಡೆದ ಮೊದಲ ರಾಷ್ಟ್ರೀಯ ಸಹಕಾರ ಸಮ್ಮೇಳನದಲ್ಲಿ ಮಾತನಾಡಿದ ಅಮಿತ್ ಶಾ, ಸಹಕಾರ ಆಂದೋಲನ ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಾಜ್ಯಗಳ ಜತೆಗೆ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಈ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಸಹಕಾರ ಸಚಿವರು, 2,100 ಪ್ರತಿನಿಧಿಗಳು ಮತ್ತು 6 ಕೋಟಿ ಮಂದಿ ಆನ್‌ಲೈನ್‌ನಲ್ಲಿ ಭಾಗಿಯಾಗಿದ್ದರು.
ಸದ್ಯ ದೇಶದಲ್ಲಿ 65 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಇದನ್ನು ಮುಂದಿನ 5 ವರ್ಷಗಳಲ್ಲಿ ಇದನ್ನು 3 ಲಕ್ಷಕ್ಕೆ ಏರಿಸುವ ಗುರಿಯಿದೆ ಎಂದು ಅಮಿತ್ ಶಾ ಹೇಳಿದರು. ಸರಕಾರವು ರಾಷ್ಟ್ರೀಯ ಸಹಕಾರ ವಿಶ್ವವಿದ್ಯಾನಿಲಯದ ಜತೆಯಲ್ಲೇ ಸಹಕಾರ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ರಾಷ್ಟ್ರೀಯ ಡೇಟಾಬೇಸ್ ಸ್ಥಾಪಿಸಲಿದೆ ಎಂದರು.
ಸಂದೇಹ ಬೇಡ
ಕೇಂದ್ರ ಸರಕಾರವು ಸಹಕಾರ ಇಲಾಖೆಯನ್ನು ಸ್ಥಾಪಿಸಿದಾಗ ಹಲವಾರು ಮಂದಿ ಈ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ಇದು ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ, ಕೇಂದ್ರ ಸರಕಾರಕ್ಕೇನು ಕೆಲಸ ಎಂಬುದು ಅವರ ಪ್ರಶ್ನೆ. ನಾವು ರಾಜ್ಯಗಳ ಅಧಿಕಾರ ಕಿತ್ತುಕೊಳ್ಳುವುದಿಲ್ಲ, ಬದಲಾಗಿ ರಾಜ್ಯಗಳ ಜತೆ ಸಹಕಾರ ಆಂದೋಲನದಲ್ಲಿ ಜತೆಯಾಗಿ ಕೆಲಸ ಮಾಡುತ್ತೇವೆ ಎಂದು ಶಾ ಹೇಳಿದರು.
ವಾಜಪೇಯಿ ಅವರು 2002ರಲ್ಲಿ ಪ್ರಧಾನಿಯಾಗಿದ್ದಾಗ ಸಹಕಾರ ನೀತಿಯನ್ನು ಜಾರಿಗೆ ತರಲಾಗಿತ್ತು. ಈಗ ಮೋದಿ ಅವರು ಪ್ರಧಾನಿಯಾಗಿರುವ ವೇಳೆ ಮತ್ತೆ ಹೊಸ ನೀತಿ ಜಾರಿಗೆ ತರಲಾಗುತ್ತಿದೆ ಎಂದರು.