Advertisement

ಉಡುಪಿ ಜಿಲ್ಲೆಯಲ್ಲಿ “ಸಾರಿ’ಪ್ರಕರಣ ಹೆಚ್ಚಳ

11:09 AM Jul 22, 2020 | mahesh |

ಉಡುಪಿ: ದಿನೇ ದಿನೆ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿನ ವೆಂಟಿಲೇಟರ್‌ ಹಾಸಿಗೆಗಳು ಭರ್ತಿಯಾಗುತ್ತಿವೆ. ಮುಂದಿನ ದಿನಗಳಲ್ಲಿ “ಸಾರಿ’ (ತೀವ್ರ ಉಸಿರಾಟದ ಸಮಸ್ಯೆ) ಕೋವಿಡ್‌ ಪ್ರಕರಣಗಳು ಹೆಚ್ಚಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ವೆಂಟಿಲೇಟರ್‌ಗಳನ್ನು ಪೂರೈಸುವಂತೆ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಿದೆ.

Advertisement

ಕೋವಿಡ್ ಲಕ್ಷಣವಿರದ ಹಾಗೂ ಸೌಮ್ಯ ಲಕ್ಷಣ ಇರುವವರಿಗೆ ವೆಂಟಿಲೇಟರ್‌, ಐಸಿಯು ಅಗತ್ಯವಿಲ್ಲ. ಆದರೆ ಸಾರಿ ಪ್ರಕರಣಗಳಿಗೆ ಈ ವ್ಯವಸ್ಥೆ ಅಗತ್ಯ. ಹೊರಜಿಲ್ಲೆಯ ಸಾಮಾನ್ಯ ಸಾರಿ ಪ್ರಕರಣಗಳನ್ನು ತೆಗೆದುಕೊಳ್ಳದಂತೆ ಜಿಲ್ಲಾಡಳಿತ ಆಸ್ಪತ್ರೆಗಳಿಗೆ ಆದೇಶ ನೀಡಿದೆ. ಪ್ರಸ್ತುತ ಕ್ಯಾನ್ಸರ್‌ ಸೇರಿದಂತೆ ವಿವಿಧ ಪ್ರಮುಖ ಕಾಯಿಲೆಗಳಿಂದ ಬಳಲುತ್ತಿರುವ ಸಾರಿ ಕೋವಿಡ್‌ ಪ್ರಕರಣಗಳನ್ನು ಮಾತ್ರ ದಾಖಲಿಸಿಕೊಳ್ಳಲಾಗುತ್ತಿದೆ.

ವೆಂಟಿಲೇಟರ್‌ಗೆ ಪ್ರಸ್ತಾವನೆ
ಜಿಲ್ಲೆಯಲ್ಲಿ ಕೋವಿಡ್‌ ಚಿಕಿತ್ಸೆ ನೀಡಲಾಗುತ್ತಿರುವ ಜಿಲ್ಲಾಸ್ಪತ್ರೆ, ಕುಂದಾಪುರ ಹಾಗೂ ಕಾರ್ಕಳ ತಾಲೂಕು ಆಸ್ಪತ್ರೆ, ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಗಳಲ್ಲಿ ಒಟ್ಟು 50 ವೆಂಟಿಲೇಟರ್‌ ಹಾಗೂ 253 ಐಸಿಯು ಹಾಸಿಗೆಗಳಿವೆ. ಜು. 18ರಿಂದ ಜು. 20ರ ವರೆಗೆ 12 ಸಾರಿ ಪ್ರಕರಣಗಳು ಪತ್ತೆಯಾಗಿದೆ. ಜಿಲ್ಲೆಗೆ ಈಗಾಗಲೇ ಹೊಸದಾಗಿ 15 ವೆಂಟಿಲೇಟರ್‌ ಬಂದಿವೆ. ಜಿಲ್ಲಾಡಳಿತ ಹೆಚ್ಚುವರಿಯಾಗಿ 50 ವೆಂಟಿಲೇಟರ್‌ಗಳಿಗೆ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಿದೆ. ಕಾರ್ಕಳ ಮತ್ತು ಕುಂದಾಪುರ ಸರಕಾರಿ ಕೋವಿಡ್‌ ಆಸ್ಪತ್ರೆಗೂ ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಗಿದೆ. ಹೊಸದಾಗಿ ಬರುವ ವೆಂಟಿಲೇಟರ್‌ ಜಿಲ್ಲಾಸ್ಪತ್ರೆ, ಕಾರ್ಕಳ ಹಾಗೂ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾಗುತ್ತದೆ.

174 ಮಂದಿಗೆ ಹೋಂ ಐಸೊಲೇಶನ್‌
ಕೊರೊನಾ ರೋಗ ಲಕ್ಷಣದ ಸೋಂಕಿತರಿಗೆ ಹೋಂ ಐಸೊಲೇಶನ್‌ ವ್ಯವಸ್ಥೆಯನ್ನು ಕೂಡ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಜು. 20 ವರೆಗೆ 174 ಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲದಿ ದ್ದರೆ ಅಂತಹವರನ್ನು ಕೊರೊನಾ ಕೇರ್‌ ಸೆಂಟರ್‌ಗೆ ದಾಖಲಿಸಲಾಗುತ್ತದೆ.

ಪ್ರಾಥಮಿಕ ಸಂಪರ್ಕ
ಜಿಲ್ಲೆಯಲ್ಲಿ ನಿತ್ಯ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಗಳ‌ಲ್ಲಿ ಶೇ. 70ರಷ್ಟು ಪ್ರಕರಣಗಳು ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದಲ್ಲಿ ಇರುವವರಿಗೆ ಕಂಡು ಬರುತ್ತಿವೆ. ಜು. 20ರಲ್ಲಿ 98 ಪ್ರಕರಣಗಳಲ್ಲಿ 73 ಪ್ರಾಥಮಿಕ ಸಂಪರ್ಕಗಳ ಪ್ರಕರಣ ವರದಿಯಾಗಿದೆ.

Advertisement

ಆಸ್ಪತ್ರೆಗೆ 50 ವೆಂಟಿಲೇಟರ್‌ ಪೂರೈಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಡುಪಿ ಜಿಲ್ಲಾಸ್ಪತ್ರೆ, ಕಾರ್ಕಳ ಹಾಗೂ ಕುಂದಾಪುರ ಸರಕಾರಿ ಆಸ್ಪತ್ರೆಗಳಲ್ಲಿ ಹೊಸ ವೆಂಟಿಲೇಟರ್‌ ಆಳವಡಿಸಲಾಗುತ್ತದೆ.
– ಡಾ| ಸುಧೀರ್‌ಚಂದ್ರ ಸೂಡ, ಡಿಎಚ್‌ಒ

Advertisement

Udayavani is now on Telegram. Click here to join our channel and stay updated with the latest news.

Next