ಬೆಂಗಳೂರು: ಹಿಜಾಬ್ ತೀರ್ಪು ಪ್ರಕಟವಾದ ಬೆನ್ನಲ್ಲೇ, ಸಮವಸ್ತ್ರ ಕುರಿತ ವಿವಾದಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಿರುವ ರಾಜ್ಯ ಸರಕಾರ, ಮುಂದಿನ ಶೈಕ್ಷಣಿಕ ವರ್ಷದಿಂದ ಸರಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಲ್ಲಿಯೂ ಸಮವಸ್ತ್ರ ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ.
ಪ್ರಸ್ತುತ ಭಾಗಶಃ ಕಾಲೇಜುಗಳಲ್ಲಿ ಸಮವಸ್ತ್ರ ಪಾಲನೆ ಮಾಡುತ್ತಿಲ್ಲ. ಆದರೆ, ಕೆಲವು ಕಾಲೇಜುಗಳಲ್ಲಿ ಮಾತ್ರ ಸಮವಸ್ತ್ರ ಅಳವಡಿಸಿಕೊಂಡಿದ್ದು, ಕಾಲೇಜು ಆಡಳಿತ ಮಂಡಳಿಗಳು ನಿರ್ಧರಿಸುತ್ತಿವೆ. ಈಗ ಎಲ್ಲ ಕಾಲೇಜುಗಳಲ್ಲೂ ಸಮವಸ್ತ್ರ ಜಾರಿಗೊಳಿಸಲು ಸರಕಾರ ಮುಂದಾಗಿದೆ.
ಅನಾವಶ್ಯಕವಾಗಿ ಮತ್ತು ಶೈಕ್ಷಣಿಕ ವಿಷಯಗಳಿಗೆ ಹೊರತಾದ ವಿಚಾರಗಳಿಂದ ಶಾಲಾ ಮತ್ತು ಕಾಲೇಜು ಆವರಣಗಳಲ್ಲಿ ತೊಂದರೆಗಳು ಎದುರಾಗಬಾರದು. ಅದರಲ್ಲಿಯೂ ವಿಶೇಷವಾಗಿ ಧಾರ್ಮಿಕ ವಿಚಾರಗಳು, ಸೂಕ್ಷ್ಮವಾಗಿರುವುದರಿಂದ ಎಚ್ಚರಿಕೆ ವಹಿಸಲು ಈಗಿನಿಂದಲೇ ಸಿದ್ಧತೆ ನಡೆಸಿದೆ. ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಜಾರಿಗೊಳಿಸಿದರೆ, ಸರಕಾರದ ವತಿಯಿಂದಲೇ ಸಮವಸ್ತ್ರ ವಿತರಿಸಬೇಕಾಗುತ್ತದೆ. ಸದ್ಯ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಸಮವಸ್ತ್ರ ನೀಡುತ್ತಿದೆ. ಆದರೆ, ಪಿಯುಸಿಗೆ ಸಮವಸ್ತ್ರ ನೀಡಬೇಕಾದರೆ, ಸರಕಾರಕ್ಕೆ ಆರ್ಥಿಕ ಹೊರೆ ಎದುರಾಗ ಬಹುದು. ಆದರೆ, ಸಮವಸ್ತ್ರ ಜಾರಿಗೊಳಿಸುವ ಒಲವಿನಲ್ಲಿ ಸರಕಾರವಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಹಿಜಾಬ್ ಅನಗತ್ಯ ವಿವಾದ ಬಗೆಹರಿದಿದೆ: ಸಚಿವ ನಾಗೇಶ್
ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮುಂದಿನ ದಿನಗಳಲ್ಲಿ ಪಿಯು ಕಾಲೇಜುಗಳಲ್ಲೂ ಸಮವಸ್ತ್ರ ಜಾರಿಗೊಳಿ ಸುವ ಸಂಬಂಧ ಸಾಧಕ-ಬಾಧಕಗಳನ್ನು ಚರ್ಚಿಸಿ ಮತ್ತು ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ನಿರ್ಧರಿಸಲಾಗುತ್ತದೆ.
– ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ