ಮದ್ದೂರು: ಸಕ್ಕರೆ ಕಾರ್ಖಾನೆಯನ್ನು ಒ ಅಂಡ್ ಎಂ ವ್ಯವಸ್ಥೆಯಲ್ಲಿ ಪ್ರಾರಂಭಿಸಲು ಸರ್ಕಾರ ಚಿಂತನೆ ಮಾಡಿದೆ. ಈ ಸಂಬಂಧ ಜಿಲ್ಲೆಯ ಶಾಸಕರು, ಪ್ರಗತಿಪರ ಸಂಘಟನೆಗಳ ಜತೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಶೀಘ್ರವಾಗಿ ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಭರವಸೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಕಬ್ಬು ಬೆಳೆಗಾರರು ಯಾವುದೇ ಆತಂಕಪಡಬಾರದು. ಕಟಾವಿಗೆ ಬಂದಿರುವ ಕಬ್ಬನ್ನು ಬೇರೆ ಕಾರ್ಖಾನೆಗೆ ಸರಬರಾಜು ಮಾಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ. ರೈತರಿಗೆ ತೊಂದರೆಯಾಗದಂತೆ ಶೀಘ್ರವಾಗಿ ಭತ್ತ ಖರೀದಿ ಕೇಂದ್ರ ತೆರೆಯಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಂಬಂಧ ಅಧಿಕಾರಿಗಳ ಜತೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋವಿಡ್ 19 ತಡೆಗೆ ಅಗತ್ಯ ಕ್ರಮ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರಿಗೆ ವೆಂಟಿಲೇಟರ್ ಸಮಸ್ಯೆಯಾಗದಂತೆ ಅಗತ್ಯ ಕ್ರಮವಹಿಸಲಾಗಿದೆ. ಕೋವಿಡ್ 19 ತಡೆಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ. ಮುಂಬೈ, ಚೆನ್ನೈ ಹಾಗೂ ಹೊರ ಜಿಲ್ಲೆಗಳಿಗೆ ಹೋಗಿ ಬರುತ್ತಿರುವ ವ್ಯಕ್ತಿಗಳಿಂದ ಜಿಲ್ಲೆಯಲ್ಲಿ ಕೋವಿಡ್ 19 ಹರಡುತ್ತಿದೆ. ಯಾರು ಬೇರೆ ಜಿಲ್ಲೆ ಅಥವಾ ರಾಜ್ಯಗಳಿಗೆ ಪ್ರಯಾಣ ಮಾಡುವ ವ್ಯಕ್ತಿಗಳು ಸ್ವಲ್ಪ ದಿನ ಸ್ಥಳದಲ್ಲೇ ಉಳಿದುಕೊಳ್ಳುವುದು ಉತ್ತಮ ಎಂದರು.
ಸಿಎಂ ಕಾರ್ಯಕ್ಕೆ ಮೆಚ್ಚುಗೆ: ಕೋವಿಡ್ 19 ನಿಯಂತ್ರಣದಲ್ಲಿ ಸಿಎಂ ಬಿ.ಎಸ್ .ಯಡಿಯೂರಪ್ಪ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಸೋಂಕು ತಡೆಗೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರು ವುದನ್ನು ವಿರೋಧ ಪಕ್ಷದ ನಾಯಕರೇ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ: ರಾಜ್ಯದಲ್ಲಿ ಕೋವಿಡ್ 19 ಸೇನಾನಿಗಳಾಗಿ ಕೆಲಸ ನಿರ್ವಹಿಸುತ್ತಿರುವ 42680 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಬಿಜೆಪಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಆಶಾ ಕಾರ್ಯಕರ್ತೆತರ ವೇತನ ಹೆಚ್ಚಳಕ್ಕೆ ಸರ್ಕಾರದ ಚಿಂತನೆ ನಡೆಸಿದೆ. ಶೇ.98ರಷ್ಟು ರೈತರಿಗೆ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ನೀಡಲಾಗಿದೆ. ಆದರೆ, ಸಮರ್ಪಕವಾದ ದಾಖಲೆ ನೀಡದ ಪರಿಣಾಮ ಕೆಲ ರೈತರಿಗೆ ಸಾಲ ನೀಡಲು ವಿಳಂಬವಾಗುತ್ತಿದೆ.
ಅರ್ಹ ಫಲಾನುಭವಿಗಳು ಸಮರ್ಪಕವಾದ ದಾಖಲೆ ನೀಡಿ ಸಾಲ ಪಡೆಯಬೇಕು ಎಂದು ತಿಳಿಸಿದರು. ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಎಪಿಎಂಸಿ ಅಧ್ಯಕ್ಷ ಜಿ.ಸಿ.ಮಹೇಂದ್ರ, ಉಪಾಧ್ಯಕ್ಷ ಎಚ್.ಪಿ.ಸ್ವಾಮಿ, ನಿರ್ದೇಶಕರಾದ ಸುನಿಲ್‌ಕುಮಾರ್, ಬುಲೆಟ್ ಬಸವರಾಜು, ಮುಖಂಡರಾದ ಚಾಮನಹಳ್ಳಿ ಸ್ವಾಮಿ, ಮಧುಕುಮಾರ್, ತಹಶೀಲ್ದಾರ್ ವಿಜಯಕುಮಾರ್ ಇದ್ದರು.