Advertisement

ಮೀನುಗಾರರಿಗೆ ಸದಾ ಸರಕಾರದ ಬೆಂಬಲ: ಉಚ್ಚಿಲ ದೇವಸ್ಥಾನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

01:09 AM Apr 09, 2022 | Team Udayavani |

ಪಡುಬಿದ್ರಿ: ಮೀನುಗಾರರದು ಜಾಗೃತ ಸಮಾಜ. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪುನರ್‌ ನಿರ್ಮಾಣದೊಂದಿಗೆ ನಿಮ್ಮೆಲ್ಲರ ಮನಸ್ಸಿನಲ್ಲೂ ಶ್ರೀ ಮಹಾಲಕ್ಷ್ಮೀ ನೆಲೆಸಿದ್ದಾಳೆ.

Advertisement

ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಇಲ್ಲಿಗೆ 10ಕೋಟಿ ರೂ. ನೀಡಿದ್ದಾರೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ 3.5 ಕೋಟಿ ರೂ. ನೀಡುವೆನೆಂದಿದ್ದಾರೆ. ಮೀನುಗಾರರ ಜತೆ ಕೇಂದ್ರ, ರಾಜ್ಯ ಸರಕಾರಗಳು ಸದಾ ಇರಲಿವೆ ಎಂದು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಶುಕ್ರವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಬ್ರಹ್ಮಕಲಶ ಪುಣ್ಯೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಮಹಾಲಕ್ಷ್ಮೀ ದೇವಸ್ಥಾನವು ಮಾಯಾನಗರಿಯಂತೆ ಅದ್ಭುತವಾಗಿ ನಿರ್ಮಾಣವಾಗಿದೆ. ಇದು ನಮ್ಮ ಯೋಗ ಮತ್ತು ಭಾಗ್ಯವಾಗಿದೆ. ಹಿಂದೂ ಸಮಾಜಕ್ಕೆ ಚೈತನ್ಯವನ್ನು ನೀಡಿದ ಸಮಾಜವೂ ಮೊಗವೀರ ಸಮಾಜವಾಗಿದೆ ಎಂದರು.

ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಮಾತನಾಡಿ, ಮೊಗವೀರರು ಸಂಸ್ಕಾರವಂತರಾಗಿದ್ದು, ದೇವರನ್ನು ದೃಢ ಮನಸ್ಸಿಂದ ನಂಬಿದವರಾಗಿದ್ದಾರೆ. ಡಾ| ಜಿ. ಶಂಕರ್‌ ಇಂದು ರಾಜ್ಯಕ್ಕೇ ಮಾದರಿಯಾಗುವಂತಹ ಈ ದೇವಸ್ಥಾನ ವನ್ನು ನಿರ್ಮಿಸಿದ್ದಾರೆ ಎಂದರು.

Advertisement

ವೇ| ವಿ| ಪಂಜ ಭಾಸ್ಕರ ಭಟ್‌ ಉಪನ್ಯಾಸ ನೀಡಿದರು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಜಿ. ಶಂಕರ್‌ ಅಧ್ಯಕ್ಷತೆಯನ್ನು ವಹಿಸಿದ್ದು, ಕೇಂದ್ರದಿಂದ ರೈತರಿಗೆ ಸಿಗುವ ಸಾಲ ಯೋಜನೆಗಳು ಮೀನುಗಾರರಿಗೂ ಸಿಗುವಂತಾಗಬೇಕು. ಶೂನ್ಯ ಬಡ್ಡಿ ದರದಲ್ಲಿ ರಾಜ್ಯ ಸರಕಾರದಿಂದ ಮೀನುಗಾರ ಮಹಿಳೆಯರಿಗೂ ಸಾಲ ದೊರಕುವಂತಾಗಬೇಕು ಎಂದರು.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್‌, ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್‌, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್‌, ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಉದ್ಯಮಿಗಳಾದ ಪ್ರಸಾದ್‌ ರಾಜ್‌ ಕಾಂಚನ್‌, ದಿಲೀಪ್‌ ರಾಜ್‌ ಬೆಂಗಳೂರು, ಆನಂದ ಕುಂದರ್‌, ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ಯಶ್‌ಪಾಲ್‌ ಸುವರ್ಣ, ಬೆಂಗಳೂರು ಮೊಗವೀರ ಸಂಘದ ಅಧ್ಯಕ್ಷ ಚೇತನ್‌ ಜಿ., ಮಾಜಿ ಅಧ್ಯಕ್ಷ ಬಿ.ಎನ್‌. ನರಸಿಂಹ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು, ಕಾಪು ಮಾರಿಯಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಾಪು ವಾಸುದೇವ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯರಾದ ದಿವಾಕರ ಎ. ಕುಂದರ್‌, ಶಶಿಕಾಂತ್‌ ಪಡುಬಿದ್ರಿ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್‌ ಠಾಕೂರ್‌, ಗ್ರಾಮ ಪಂಚಾಯತ್‌ ಸದಸ್ಯ ಶಿವಕುಮಾರ್‌ ವೇದಿಕೆಯಲ್ಲಿದ್ದರು.

ಸ್ವಾತಿ ಆಚಾರ್ಯ ಅಂಬಲಪಾಡಿ ಅವರು ಕಾರ್ಯಕ್ರಮ ನಿರ್ವಹಿಸಿ ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶಂಕರ ಸಾಲ್ಯಾನ್‌ ಅವರು ವಂದಿಸಿದರು.

ಸೀಮೆ ಎಣ್ಣೆ ದೋಣಿಗಳು ಶೀಘ್ರ ವಿದ್ಯುತ್‌ ಆಧಾರಿತ
182 ಕೋಟಿ ರೂ. ವೆಚ್ಚದಲ್ಲಿ ಹೆಜಮಾಡಿ ಮೀನುಗಾರಿಕೆ ಬಂದರು ನಿರ್ಮಾಣವಾಗಲಿದೆ. ಸೀಮೆಎಣ್ಣೆ ಆಧಾರಿತ ದೋಣಿಗಳು ವಿಶೇಷ ತಂತ್ರಜ್ಞಾನದ ಮೂಲಕ ಶೀಘ್ರದಲ್ಲೇ ಚಾರ್ಜೆಬಲ್‌ ದೋಣಿಗಳಾಗಲಿವೆ. ಶೇ. 70 ಖರ್ಚವೆಚ್ಚ ಇದರಿಂದ ಮೀನುಗಾರರಿಗೆ ಕಡಿತವಾಗಲಿದೆ ಎಂದು ಸಚಿವೆ ಶೋಭಾ ತಿಳಿಸಿದರು.

ಮೀನುಗಾರಿಕೆಯೂ ಕೃಷಿ ಚಟುವಟಿಕೆಗಳಡಿ ಬರುವುದರಿಂದ ಮೀನುಗಾರ ಉತ್ಪಾದಕರ ಸಂಘವನ್ನು ತೆರೆಯಿರಿ. ಕೇಂದ್ರ ಸರಕಾರವು 15 ಲಕ್ಷ ರೂ.ಗಳ ಸಬ್ಸಿಡಿ ನೀಡಲಿದೆ. ಇದರ ಸದುಪಯೋಗವನ್ನು ರೈತರು, ಮೀನುಗಾರರು ಪಡೆದುಕೊಳ್ಳಿರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಂದು ಬ್ರಹ್ಮಕಲಶ, ಮಹಾಅನ್ನಸಂತರ್ಪಣೆ
ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಎ. 9ರಂದು ಬ್ರಹ್ಮಕಲಶ ಪುಣ್ಯೋತ್ಸವ ಮತ್ತು ಮಹಾಅನ್ನಸಂತರ್ಪಣೆ ನಡೆಯಲಿದೆ.

ವಿದ್ವಾನ್‌ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ಹಿರಿಯ ಅರ್ಚಕ ವೆಂಕಟನರಸಿಂಹ ಉಪಾಧ್ಯಾಯ ಮತ್ತು ರಾಘವೇಂದ್ರ ಉಪಾಧ್ಯಾಯ ಮತ್ತು ವಾಸ್ತುತಜ್ಞ ವಿದ್ವಾನ್‌ ಸುಬ್ರಹ್ಮಣ್ಯ ಭಟ್‌ ಗುಂಡಿಬೈಲು ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶ ಪುಣ್ಯೋತ್ಸವ ಸಮಿತಿ ಅಧ್ಯಕ್ಷ ಡಾ| ಜಿ. ಶಂಕರ್‌ ನೇತೃತ್ವದಲ್ಲಿ ಸಮಗ್ರ ಜೀರ್ಣೋದ್ಧಾರ ಕಾರ್ಯಗಳು ನೆರವೇರಿವೆ.

ಸಾಮೂಹಿಕ ಕುಂಕುಮಾರ್ಚನೆ, ಮಹಾಮಂಗಳಾರತಿ
ಎ. 2ರಿಂದ 15ರ ವರೆಗೆ ಸಹಸ್ರ ಸುಮಂಗಲೆಯರಿಂದ ಕುಂಕುಮಾರ್ಚನೆಯೊಂದಿಗೆ ಸಾಮೂಹಿಕ ಮಹಾ ಮಂಗಳಾರತಿ ಸೇವೆ ನಡೆಯುತ್ತಿದೆ. ದಿನವೊಂದಕ್ಕೆ 1.08 ಲಕ್ಷದಂತೆ 14 ದಿನಗಳಲ್ಲಿ 1.51 ಕೋಟಿ ಅರ್ಚನೆ ನಡೆಯಲಿದೆ.

ನಿತ್ಯ ಅನ್ನದಾಸೋಹ
ಎ. 1ರಿಂದ ನಿತ್ಯ ಅನ್ನದಾಸೋಹ ನಡೆಯುತ್ತಿದ್ದು ಲಕ್ಷಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಸ್ವಯಂ ಸೇವಕರ ಶಿಸ್ತುಬದ್ಧ ಸೇವೆಗೆ ಸಾರ್ವತ್ರಿಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಹಾಲಕ್ಷ್ಮೀ ಸಾಂಸ್ಕೃತಿಕ ಉತ್ಸವ
ಎ. 9ರಿಂದ 14ರ ವರೆಗೆ ರಾಷ್ಟ್ರ ಮಟ್ಟದ ಕಲಾವಿದರ ಕೂಡುವಿಕೆಯೊಂದಿಗೆ ಕೇಂದ್ರ ಸರಕಾರದ ಸಾಂಸ್ಕೃತಿಕ ಸಚಿವಾಲಯದ ವತಿಯಿಂದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಅವರಿಂದ ಮಹಾಲಕ್ಷ್ಮೀ ಸಾಂಸ್ಕೃತಿಕ ಉತ್ಸವ ನಡೆಯಲಿದೆ.

ಎ. 11ಕ್ಕೆ ಮುಖ್ಯಮಂತ್ರಿ ಭೇಟಿ
ಎ. 11ರಂದು ಪೂರ್ವಾಹ್ನ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.

ಹಲವು ಸಚಿವರು, ಶಾಸಕರು, ಸಂಸದರ ಸಹಿತ ಗಣ್ಯರು ಭಾಗವಹಿಸಲಿದ್ದಾರೆ ಎಂದು ಬ್ರಹ್ಮಕಲಶ ಪುಣ್ಯೋತ್ಸವ ಸಮಿತಿಯ ಅಧ್ಯಕ್ಷ ಡಾ| ಜಿ. ಶಂಕರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next