ಬಳ್ಳಾರಿ: ಪತ್ರಿಕಾರಂಗದಲ್ಲಿ ಪತ್ರಕರ್ತರಾಗಿ, ಪತ್ರಿಕೋದ್ಯಮಿಯಾಗಿ ಸೇವೆ ಸಲ್ಲಿಸಿರುವ ಸಿ.ಜಿ.ಹಂಪಣ್ಣನವರಿಗೆ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್, ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಬೇಕು ಎಂದು ಸಂಡೂರು ವಿರಕ್ತಮಠದ ಪ್ರಭುಸ್ವಾಮಿ ಹೇಳಿದರು.
ನಗರದ ರಾಘವಕಲಾ ಮಂದಿರದಲ್ಲಿ ಹಿರಿಯ ಸಾಹಿತಿ ಸಿ.ಜಿ.ಹಂಪಣ್ಣ ಅವರ 80ನೇ ಜನ್ಮದಿನ ಕಾರ್ಯಕ್ರಮ ಮತ್ತು ಗಡಿನಾಡ ಕನ್ನಡಿಗ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿ.ಜಿ.ಹಂಪಣ್ಣನವರು ಕಳೆದ 6 ದಶಕಗಳಿಂದ ಪತ್ರಕರ್ತರಾಗಿ, ಚಲನಚಿತ್ರ ನಿರ್ಮಾಪಕರಾಗಿ, ಚಲನಚಿತ್ರ ವಿತರಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಮತ್ತು ಆಂಧ್ರಪ್ರದೇಶದ ತೆಲುಗು ಭಾಷಾ ಬಾಂಧವ್ಯವನ್ನು ಬೆಸೆದಿದ್ದಾರೆ. ಇವರ ಸೇವೆಯನ್ನು ಗುರುತಿಸಿದ್ದ ಕೆಲ ವರ್ಷಗಳ ಹಿಂದೆ ಆಂಧ್ರದ ಮಾಜಿ ಮುಖ್ಯಮಂತ್ರಿ ಕೆ.ರೋಸಯ್ಯ, ಹಂಪಣ್ಣರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ನಮ್ಮನ್ನು ಬೇರೆ ರಾಜ್ಯಗಳವರು ಗುರುತಿಸಿದರೂ, ಜಿಲ್ಲೆಯಲ್ಲೇ ಇರುವ ವಿವಿಗಳು ಗುರುತಿಸಿಲ್ಲ. ಈ ನಿಟ್ಟಿನಲ್ಲಿ ಬಳ್ಳಾರಿಯ ವಿಎಸ್ ಕೆ ವಿವಿಯು ಸಿ.ಜಿ.ಹಂಪಣ್ಣನವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಬೇಕಾಗಿದೆ. ಜತೆಗೆ ರಾಜ್ಯ ಸರ್ಕಾರವೂ ರಾಜ್ಯೋತ್ಸವ ಪ್ರಶಸ್ತಿಯನ್ನೂ ನೀಡಬೇಕಾಗಿದೆ ಎಂದರು.
ಪ್ರತಿಯೊಬ್ಬರಿಗೂ ಬಾಲ್ಯ, ಯೌವನ ಮತ್ತು ಸಂಧ್ಯಾಕಾಲದ ಜೀವನವಿರುತ್ತದೆ. ಇವರು ತಮ್ಮ ಸಂಧ್ಯಾಕಾಲದಲ್ಲೂ ಎಲ್ಲರಿಗೂ ಮಾದರಿಯಾಗುವ ಜೀವನ ನಡೆಸುತ್ತಿದ್ದಾರೆ. ಇಂದಿನ ಯುವಜನತೆಗೆ ಮಾದರಿಯಾಗಿದ್ದಾರೆ.
ಉತ್ತರ ಕರ್ನಾಟಕ ರಾಜ್ಯವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಹೊರಟಿರುವವರಿಗೆ ಜಿಲ್ಲೆಯ ಜನರು ಏಕೀಕರಣದ ಸಂದರ್ಭದಲ್ಲೆ ಉತ್ತರ ನೀಡಿದ್ದಾರೆ. ಅಖೀಲ ಕರ್ನಾಟಕಕ್ಕೆ ಬಳ್ಳಾರಿ ಮಾದರಿ ಜಿಲ್ಲೆಯಾಗಿದೆ. ಗಡಿಭಾಗದಲ್ಲಿರುವ ಸೌಹಾರ್ದತೆಯನ್ನು ಕಾಪಾಡಬೇಕಿದೆ. ರಾಜ್ಯದ ಗಡಿಯಲ್ಲಿರುವ ಜನರು ಎರಡು ಭಾಷೆ ಮತ್ತು ಎರಡು ಸಂಸ್ಕೃತಿಯನ್ನು ಅರಿತಿದ್ದಾರೆ. ಗಡಿಭಾಗದಲ್ಲಿ ಜಿಲ್ಲೆ ರಾಜ್ಯದ ಗಮನ ಸೆಳೆದಿದೆ ಎಂದರು.
ಗಡಿನಾಡ ಕನ್ನಡಿಗ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದ ಮಾತನಾಡಿದ ರಂಗಭೂಮಿ ಹಿರಿಯ ಕಲಾವಿದ, ನಾಡೋಜ ಬೆಳಗಲ್ಲು ವೀರಣ್ಣ , ಜಿಲ್ಲೆಯ ಸಾಹಿತಿಗಳು, ಕಲಾವಿದರು ಯಾರೂ ಪ್ರಚಾರದ ಬೆನ್ನತ್ತಿ ಹೋಗುವವರಲ್ಲ. ಪ್ರಚಾರವೇ ಅವರ ಬೆನ್ನತ್ತಿ ಬರುತ್ತದೆ ಎಂದರು.
ಚೆಳ್ಳಗುರ್ಕಿಯ ವೈದ್ಯ ಸಿ.ಎರ್ರೆಪ್ಪ ಅಧ್ಯಕ್ಷತೆ ವಹಿಸಿದ್ದರು. ಕಲಾವಿದೆ ಸುಭದ್ರಮ್ಮ ಮನ್ಸೂರು, ಜನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಟಿ.ಎಚ್. ಎಂ.ಬಸವರಾಜ್, ಇತಿಹಾಸ ಸಂಶೋಧಕ ವೈ. ಹನುಮಂತರೆಡ್ಡಿ, ಸಾಹಿತಿ ರಜನೀಶ್ ಕುಲಕರ್ಣಿ, ವನಮಾಲಾ ಕುಲಕರ್ಣಿ, ಮುಖ್ಯಶಿಕ್ಷಕಿ ವೈ. ಆರ್.ಪಲ್ಲವಿ, ಸಿ.ಜಿ.ಹಂಪಣ್ಣ ಅಭಿನಂದನಾ ಸಮಿತಿ ಗೌರವಾಧ್ಯಕ್ಷರಾದ ಕೇಣಿ ಜಂಬುನಾಥ್, ಕೆ.ಚನ್ನಪ್ಪ, ಆನೆಗಂಗಣ್ಣ, ನಿಷ್ಠಿರುದ್ರಪ್ಪ, ದರೂರು ಪುತುಷೋತ್ತಮ ಗೌಡ, ರಮೇಶ್ ಗೌಡ ಪಾಟೀಲ…, ಗಂಗಾಧರ್ ಪತ್ತಾರ್,
ಬಂಗ್ಲೆ ಮಲ್ಲಿಕಾರ್ಜುನ, ವಿ.ಜಗನ್‌ಮೋಹನ್ ರೆಡ್ಡಿ, ಕಾಳಪ್ಪ ಪತ್ತಾರ್, ಕೆ.ಬಿ.ಸಿದ್ದಲಿಂಗಪ್ಪ ಇನ್ನಿತರರಿದ್ದರು.