ತಿ.ನರಸೀಪುರ: ಸ್ವಾತಂತ್ರ್ಯ ಸೇನಾನಿಯಾಗಿ ಬ್ರಿಟಿಷರ ವಸಹಾತುಶಾಹಿ ವಿರುದ್ಧ ಹೋರಾಟ ನಡೆಸಿದ ಟಿಪ್ಪು ಸುಲ್ತಾನ್‌ರನ್ನು ಷಡ್ಯಂತ್ರ್ಯ ನಡೆಸಿ ವ್ಯವಸ್ಥಿತವಾಗಿ ಹತ್ಯೆ ಮಾಡಲಾಯಿತು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ಪ್ರಭುಸ್ವಾಮಿ ಹೇಳಿದರು. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಕಾಲೇಜು ರಸ್ತೆಯಲ್ಲಿರುವ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಮಾತನಾಡಿದರು.
ಹಿಂದೂ ದೇವಾಲಯಗಳ ಅಭಿವೃದ್ಧಿಗೆ ನೆರವು ಹಾಗೂ ಶೋಷಿತ ಮಹಿಳೆಯರ ಮೇಲಿನ ಸಾಮಾಜಿಕ ಕಟ್ಟುಪಾಡುಗಳನ್ನು ರದ್ದುಪಡಿಸಿ ಮೈಸೂರು ದೊರೆಯಾಗಿ ಆಳ್ವಿಕೆ ನಡೆಸಿದ ಟಿಪ್ಪು ಸುಲ್ತಾನ್‌ರನ್ನು ಆಸ್ಥಾನದ ದಿವಾನರೇ ಷಡ್ಯಂತ್ರ್ಯ ನಡೆಸಿ ಬ್ರಿಟಿಷರಿಂದ ಹತ್ಯೆಮಾಡಲು ಸಹಕಾರ ನೀಡಿದ್ದರು ಎಂದು ದೂರಿದರು.
ಒಂದು ಸುಳ್ಳನ್ನು ನೂರು, ಸಾವಿರ ಬಾರಿ ಹೇಳುವ ಮೂಲಕ ಸುಳ್ಳನ್ನೇ ಸತ್ಯವಾಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಶೂದ್ರ ಸಮುದಾಯ ಪ್ರತಿನಿಧಿಸುವ ಅನಂತಕುಮಾರ ಹೆಗ್ಡೆ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಹಾಗೂ ಪ್ರತಾಪ್ ಸಿಂಹ ಹಿಂದೂತ್ವ ಪ್ರತಿಪಾದಿಸಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆಂದರು.
ಬಿಎಸ್ಪಿ ಹಿರಿಯ ಮುಖಂಡ ಹಾಗೂ ಕ್ಷೇತ್ರ ಉಸ್ತುವಾರಿ ಬಿ.ಆರ್.ಪುಟ್ಟಸ್ವಾಮಿ, ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ ಸರ್ಕಾರದ ಆಡಳಿತವಿದ್ದಾಗ ಮಸೀದಿ ಆಸುಪಾಸಿನಲ್ಲಿ ಪ್ರಾರ್ಥನೆಗೆ ಅನುಮತಿ ಕೇಳಿ ಹಿಂದೂಪರ ಸಂಘಟನೆಗಳ ಮನವಿ ನೇರವಾಗಿ ತಿರಸ್ಕರಿಸುವ ಮೂಲಕ ಕೋಮು ಸಾಮರಸ್ಯ ಕದಡದಂತೆ ಕಟ್ಟೆಚ್ಚರ ವಹಿಸಿದ್ದರು. ಧಾರ್ಮಿಕ ಆಚರಣೆಯಲ್ಲಿ ಹಿಂದೂಪರರಿಗೆ ಅಲ್ಪಸಂಖ್ಯಾತರಿಂದಲೂ ಅಡಚಣೆಯಾಗದಂತೆ ಉತ್ತಮ ಆಡಳಿತ ನೀಡಿದ್ದರು ಎಂದು ತಿಳಿಸಿದರು.
ಬಿಎಸ್ಪಿ ಕ್ಷೇತ್ರಾಧ್ಯಕ್ಷ ಬಿ.ಸೀಹಳ್ಳಿ ಕೆ.ರಾಜೂಗೌಡ, ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಬಹುಜನ ವಿದ್ಯಾರ್ಥಿ ಸಂಘದ ತಾಲೂಕು ಸಂಯೋಜಕ ಸಾಗರ್, ಮುಖಂಡರಾದ ಕೃಷ್ಣಾಪುರ ಗೋವಿಂದ, ಕೈಯಂಬಳ್ಳಿ ಪುಟ್ಟಸ್ವಾಮಿ, ಶಿವಮೂರ್ತಿ, ಮಹದೇವಚಾರ್, ಸಿದ್ಧಶೆಟ್ಟಿ, ಮನ್ನೇಹುಂಡಿ ನಾಗರಾಜು, ಶಿವಲಿಂಗಮೂರ್ತಿ, ಸಿದ್ದರಾಜು ಮತ್ತಿತರರಿದ್ದರು.