Advertisement

“ಗುಪ್ತ ಶೆಟ್ಟಿ ಹಳ್ಳಿ’ಗೆ ಇನ್ನೂ ಬೀಳದ ಸರಕಾರಿ ಮುದ್ರೆ

01:43 AM Dec 23, 2021 | Team Udayavani |

ದಕ್ಷ, ಪ್ರಾಮಾಣಿಕ, ಖಡಕ್‌ ಎಂದೇ ಹೆಸರಾಗಿದ್ದ ಐಪಿಎಸ್‌ ಅಧಿಕಾರಿ ಕೆ. ಮಧುಕರ ಶೆಟ್ಟಿ ಅವರು ನಿಧನ ಹೊಂದಿ ಡಿ. 28ಕ್ಕೆ ಮೂರು ವರ್ಷ ಸಮೀಪಿಸುತ್ತಿದೆ. ಅವರು ಚಿಕ್ಕಮಗಳೂರು ಜಿಲ್ಲೆಯ ಎಸ್‌ಪಿಯಾಗಿ ಮಾಡಿದ ಸೇವೆಗೆ 15 ವರ್ಷ ಸಂದರೂ ಆಗ ನಡೆಸಿದ ಮಾನವೀಯ ಸ್ಪಂದನೆಯ ದ್ಯೋತಕವಾದ “ಗುಪ್ತ ಶೆಟ್ಟಿ ಹಳ್ಳಿ’ ಹೆಸರಿಗೆ ಸರಕಾರ ಇನ್ನೂ ಅಧಿಕೃತ ಮುದ್ರೆಯನ್ನು ಒತ್ತಿಲ್ಲ.

Advertisement

ಉಡುಪಿ: ಜಿಲ್ಲೆಯ ಕುವರ, ದಕ್ಷ, ಪ್ರಾಮಾಣಿಕ, ಖಡಕ್‌ ಅಧಿಕಾರಿ ಎಂದು ಹೆಸರಾದ ಐಪಿಎಸ್‌ ಅಧಿಕಾರಿ ಕೆ. ಮಧುಕರ ಶೆಟ್ಟಿ 2018ರ ಡಿಸೆಂಬರ್‌ 28ರಂದು ನಿಧನ ಹೊಂದಿ ಮೂರು ವರ್ಷ ಕಳೆದಿವೆ. ಅಂದು ಮಧುಕರ ಶೆಟ್ಟಿಯವರ ತಂದೆ, ಹೆಸರಾಂತ ಪತ್ರಕರ್ತ ದಿ| ವಡ್ಡರ್ಸೆ ರಘುರಾಮ ಶೆಟ್ಟಿ ವಾಸಿಸಿದ್ದ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನಡೆಯುತ್ತಿರುವಾಗ ಅಪಾರ ಜನಸ್ತೋಮ ಸೇರಿತ್ತು. ಹತ್ತಾರು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸೇರಿ ಸರಕಾರಿ ಗೌರವ ಸಲ್ಲಿಸಿದ್ದರು. ಇದು ಆ ಒಂದೆರಡು ದಿನಗಳಿಗೆ ಸೀಮಿತವೆಂಬುದು ಈಗ ಸಾಬೀತಾಗಿದೆ.

ಶೆಟ್ಟಿಯವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲವೇ ಕಾಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಾಗಿದ್ದರೂ ಮಾಡಿದ ಮಾನವೀಯ ಸ್ಪಂದನ ಕಾರ್ಯ ಆಗ ಎಲ್ಲರ ಗಮನ ಸೆಳೆಯಿತು. ಚಿಕ್ಕಮಗಳೂರು ಜಿಲ್ಲೆಯ ಬಡ 35 ಕುಟುಂಬಗಳಿಗೆ ತಲಾ ಎರಡು ಎಕ್ರೆ ಜಾಗಗಳನ್ನು ವ್ಯವಸ್ಥೆಗೊಳಿಸಿದ “ಗುಪ್ತ- ಶೆಟ್ಟಿ’ ಹಳ್ಳಿಯ ಜನರು ಬಂದು ಅಂತಿಮ ನಮನ ಸಲ್ಲಿಸಿದ್ದು ಮಾಧ್ಯಮಗಳಲ್ಲಿ ಬೆಳಕು ಕಂಡಿತು. ಆದರೆ ಆ ಗ್ರಾಮಕ್ಕೆ “ಗುಪ್ತ- ಶೆಟ್ಟಿ ಹಳ್ಳಿ’ ಎಂದು ಸರಕಾರ ನಾಮಕರಣ ಮಾಡಿದೆಯೆ? ಇನ್ನೂ ಇಲ್ಲ..

1971ರ ಡಿಸೆಂಬರ್‌ 17ರಂದು ಜನಿಸಿದ ಶೆಟ್ಟಿಯವರು ನಿಧನ ಹೊಂದುವಾಗ ಕೇವಲ 47 ವರ್ಷ. ಚಿಕ್ಕಮಗಳೂರು ಜಿಲ್ಲೆಯಲ್ಲಿ 2006ರಲ್ಲಿ ಕೇವಲ ಎಂಟು ತಿಂಗಳು ಮಾತ್ರ ಅವರು ಸೇವೆ ಸಲ್ಲಿಸಿದಾಗಲೇ ಅವರು ಶೋಷಿತರಿಗೆ ನೆರವಾದರು. ಆಗ ಸಾರಗೋಡು ಮೀಸಲು ಅರಣ್ಯ ಪ್ರದೇಶದಲ್ಲಿದ್ದ ಅನಧಿಕೃತ ರೈತರನ್ನು ತೆರವು ಮಾಡಿದಾಗ ರೈತರು ದಿಕ್ಕುಪಾಲಾದರು. ಚಿಕ್ಕಮಗಳೂರು ತಾಲೂಕು ಆಲ್ದೂರು ಹೋಬಳಿ ಯಲಗುಡಿಗೆ ಗ್ರಾಮದ 190 ಸರ್ವೆ ನಂಬರ್‌ನಲ್ಲಿ ಬಲಿಷ್ಠ ಭೂಮಾಲಕರು 243 ಎಕ್ರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರು. ಆಗ ಜಿಲ್ಲಾಧಿಕಾರಿ ಯಾಗಿದ್ದ ಇನ್ನೊಬ್ಬ ದಕ್ಷ ಅಧಿಕಾರಿ ಹರ್ಷ ಗುಪ್ತ ಮತ್ತು ಎಸ್‌ಪಿಯಾಗಿದ್ದ ಮಧುಕರ ಶೆಟ್ಟಿಯವರು ಜತೆಗೂಡಿ ಮೀಸಲು ಅರಣ್ಯದಿಂದ ತೆರವುಗೊಂಡ 32 ಕುಟುಂಬಗಳಿಗೆ ಯಲಗುಡಿಗೆ ಗ್ರಾಮದಲ್ಲಿ ಈ ಒತ್ತುವರಿ ಮಾಡಿಕೊಂಡಿದ್ದ ಭೂಮಾಲಕರಿಂದ ವಶಕ್ಕೆ ಪಡೆದು ಒಬ್ಬೊಬ್ಬರಿಗೆ ತಲಾ ಎರಡು ಎಕ್ರೆಯಂತೆ ಮತ್ತು ಪ್ರತ್ಯೇಕ ನಿವೇಶನವನ್ನು ಹಂಚಿ ಕೊಟ್ಟರು. ಆಗ ಜನರು ಪ್ರೀತಿಯ ದ್ಯೋತಕವಾಗಿ ಊರನ್ನು “ಗುಪ್ತ- ಶೆಟ್ಟಿ ಹಳ್ಳಿ’ ಎಂದು ಕರೆದರು.

ಆಗ ಪ್ರಭಾವಿ ವ್ಯಕ್ತಿಗಳು ಸರಕಾರದ ಮೇಲೆ ಒತ್ತಡ ತಂದ ಪರಿಣಾಮ ಹರ್ಷ ಗುಪ್ತರೂ, ಮಧುಕರ ಶೆಟ್ಟಿಯವರೂ ವರ್ಗಾವಣೆಯಾದರು. ಗುಪ್ತ ಶೆಟ್ಟಿ ಹಳ್ಳಿ ಎಂದೇನೋ ಹಳ್ಳಿಗರು ಪ್ರೀತಿಯಿಂದ ಕರೆದರು, ಸಮಸ್ಯೆ ಹೀಗೆಯೇ ಮುಂದುವರಿಯಿತು. ಜಾಗವನ್ನೇನೋ ಕೊಟ್ಟರು. ಇದಕ್ಕೆ ಕಂದಾಯ ಇಲಾಖೆಯಿಂದ ಪೋಡಿ ಆಗಲಿಲ್ಲ. ಕುಡಿಯುವ ನೀರು ಆದಿಯಾಗಿ ವಿವಿಧ ಮೂಲಸೌಕರ್ಯಗಳು ಇವೆ. ವಿದ್ಯುತ್‌ ಸಂಪರ್ಕವಾಗಬೇಕಾದರೆ ಮನೆಗಂದಾಯದ ರಶೀದಿ ಅಗತ್ಯವಿದೆ. ಹೀಗಾಗಿ ಹಕ್ಕುಪತ್ರವೂ ದೊರಕದೆ ಹೋಯಿತು. ಮಂಜೂರಾದ ನಿವೇಶನಗಳಲ್ಲಿ ಈಗ ಕೆಲವು ಮನೆಗಳಿವೆ. ಕೆಲವರು ಬಾಡಿಗೆ ಮನೆಯಲ್ಲಿ, ಪಕ್ಕದ ಊರಿನಲ್ಲಿ ನೆಲೆಸಿದ್ದಾರೆ. ಮಧುಕರ ಶೆಟ್ಟಿಯವರು ವರ್ಗವಾದ ಬಳಿಕ ಅದೆಷ್ಟು ಸರಕಾರಗಳು, ಮುಖ್ಯಮಂತ್ರಿಗಳು, ಮಂತ್ರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠರು ಬಂದು ಹೋದರೂ ಮಧುಕರ ಶೆಟ್ಟಿಯವರು ಮೃತರಾಗಿ ಮೂರು ವರ್ಷವಾದರೂ ಕನಿಷ್ಠ “ಗುಪ್ತ- ಶೆಟ್ಟಿ ಹಳ್ಳಿ’ ಹೆಸರು ಕೂಡ ನಾಮಕರಣವಾಗಿಲ್ಲ.

Advertisement

ಇದನ್ನೂ ಓದಿ:ಹರಿಕಥಾ ವಿ| ಲಕ್ಷ್ಮಣದಾಸ್‌ ವೇಲಣಕರ್‌ ನಿಧನ

ಗುಪ್ತ ಶೆಟ್ಟಿ ಹಳ್ಳಿಯ ನಿವೇಶನಗಳು ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಯಲ್ಲಿವೆ. ಇದನ್ನು ಒತ್ತುವರಿ ಮಾಡಿಕೊಂಡವರಿಂದ ಮಧುಕರ ಶೆಟ್ಟಿ ಬಿಡಿಸಿ ಬಡವರಿಗೆ ಹಂಚಿದ್ದರು. ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಸರ್ವೋಚ್ಚ ನ್ಯಾಯಾಲಯದಲ್ಲಿದೆ. ಆದ್ದರಿಂದ ಹಕ್ಕುಪತ್ರ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿಲ್ಲ. ನಾನು ರಸ್ತೆ ನಿರ್ಮಾಣಕ್ಕೆ ಈಗಾಗಲೇ 1.5 ಕೋ.ರೂ. ಅನುದಾನ ವಿನಿಯೋಗಿಸಿದ್ದೇನೆ. ಅಲ್ಲಿ ಡಾಮರು ರಸ್ತೆ ಮಾಡುವಂತಿಲ್ಲ. ಕಾಂಕ್ರೀಟ್‌ ರಸ್ತೆ ನಿರ್ಮಿಸಬೇಕಾಗಿದೆ. ನಾನು ಎಲ್ಲ ಪತ್ರ ವ್ಯವಹಾರಗಳನ್ನು ಗುಪ್ತ ಶೆಟ್ಟಿ ಹಳ್ಳಿ ಎಂದೇ ನಡೆಸುತ್ತಿದ್ದೇನೆ. ಇದು ಅಧಿಕೃತವಾಗಿ ಘೋಷಣೆಯಾಗಿಲ್ಲ ಎನ್ನುವುದು ತಿಳಿದಿಲ್ಲ. ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುತ್ತೇನೆ.
ಎಂ.ಪಿ. ಕುಮಾರಸ್ವಾಮಿ,
ಮೂಡಿಗೆರೆ ಶಾಸಕ

2006ರಲ್ಲಿ ಹರ್ಷ ಗುಪ್ತ, ಮಧುಕರ ಶೆಟ್ಟಿಯವರು ಬಡವರಿಗೆ ಸಿರಿವಂತರು ಆಕ್ರಮಿಸಿಕೊಂಡಿದ್ದ ಜಾಗವನ್ನು ಹಂಚಿಕೊಟ್ಟಾಗ ಸರಕಾರ ಕೂಡಲೇ ಅವರನ್ನು ಎತ್ತಂಗಡಿ ಮಾಡಿತು. ಅಂದಿನಿಂದಲೂ ರೈತ ಸಂಘದ ನೆರವಿನಿಂದ ಹೋರಾಟವನ್ನು ಮಾಡುತ್ತಲೇ ಇದ್ದೇವೆ. 2008ರಲ್ಲಿ 60 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದೆವು. ಈಗಲೂ ಕುಡಿಯುವ ನೀರು, ವಿದ್ಯುತ್‌ ಇತ್ಯಾದಿ ಮೂಲಸೌಕರ್ಯಗಳ ಕೊರತೆ ಇದೆ. ಇನ್ನೂ ಜಾಗ ಪೋಡಿ ಆಗಿಲ್ಲ. ಹೀಗಾಗಿ ಯಾರ ಜಾಗ ಯಾರದ್ದು ಎಂಬ ಗೊಂದಲವಿದ್ದು ಕೆಲವರು ಬೇರೆ ಕಡೆ ವಾಸವಿದ್ದಾರೆ.
– ಶಂಕರ್‌, ಗ್ರಾಮ ನಿವಾಸಿ, ಕರ್ನಾಟಕ ರೈತ ಸಂಘದ ಚಿಕ್ಕಮಗಳೂರು ತಾಲೂಕು ಅಧ್ಯಕ್ಷ

ಸುಮಾರು ಒಂದು ತಿಂಗಳ ಹಿಂದೆ ಸಾರ್ವಜನಿಕರು ತಾವು “ಗುಪ್ತ ಶೆಟ್ಟಿ ಹಳ್ಳಿ’ ಎಂದು ನಾಮಕರಣ ಮಾಡಿದ್ದೇವೆ. ಇದನ್ನು ಅಧಿಕೃತಗೊಳಿಸಿಕೊಡಿ ಎಂದು ಮನವಿ ಸಲ್ಲಿಸಿದ್ದರು. 32 ಕುಟುಂಬಗಳಲ್ಲಿ ಸುಮಾರು 12 ಕುಟುಂಬಗಳು ಅಲ್ಲಿವೆ. ಹಕ್ಕುಪತ್ರ ಇಲ್ಲದ ಕಾರಣ ಖಾತೆ ಮಾಡಲು ಆಗಲಿಲ್ಲ. ಗ್ರಾಮಕ್ಕೆ ನಾಮಕರಣ ಮಾಡುವ ಅಧಿಕಾರ ನಮಗಿಲ್ಲ. ಗ್ರಾ.ಪಂ.ನಿಂದ ನಿರ್ಣಯ ಮಾಡಿ ತಹಶೀಲ್ದಾರ್‌, ಜಿಲ್ಲಾಧಿಕಾರಿಯವರಿಗೆ ಕಳುಹಿಸಿದ್ದೇವೆ.
– ಪರಶುರಾಮ್‌,
ಸತ್ತಿಹಳ್ಳಿ ಗ್ರಾ.ಪಂ. ಪಿಡಿಒ

Advertisement

Udayavani is now on Telegram. Click here to join our channel and stay updated with the latest news.

Next