ಶಿರಸಿ: ಹತ್ತು ವರ್ಷಗಳ ಹಿಂದೆ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆರಂಭಿಸಲಾಗಿದ್ದ ಹಾರ್ಟಿ ಕ್ಲೀನಿಕ್‌ಗೆ ರಾಜ್ಯ ಸರಕಾರ ಗೇಟ್ ಪಾಸ್ ನೀಡಲು ಮುಂದಾಗಿದೆ. ಸಂಕಷ್ಟದಲ್ಲಿದ್ದ ರೈತರಿಗೆ ತೋಟಗಾರಿಕಾ ಬೆಳೆಗಾರರಿಗೆ ಮಾರ್ಗದರ್ಶನ ಮಾಡುತ್ತಿದ್ದ ಹಾರ್ಟಿ ಕ್ಲೀನಿಕ್ ಈಗ ಕೋವಿಡ್ 19 ಕಾರಣದಿಂದ ರೈತರಿಂದ ದೂರವಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳ ತೋಟಗಾರಿಕಾ ಇಲಾಖೆ ಪ್ರಧಾನ ಕಚೇರಿ ಆವರಣದಲ್ಲೇ 2010-11ದಲ್ಲಿ ಹಾರ್ಟಿ ಕ್ಲೀನಿಕ್ ಆರಂಭಿಸಲಾಗಿತ್ತು. ಆಯಾ ಜಿಲ್ಲೆಯಲ್ಲಿ ಕೃಷಿ ಪದವಿ ಓದಿದ ವಿಷಯ ತಜ್ಞರನ್ನು ಸರಕಾರ ಮಾಸಿಕ 20 ಸಾವಿರ ರೂ. ಕೊಟ್ಟು ನೇಮಕ ಮಾಡಿಕೊಳ್ಳುತ್ತಿತ್ತು. ಯಾವುದಾದರೂ ಕೃಷಿ ಸಂಸ್ಥೆ ಅಡಿಯಲ್ಲಿ ವಿಷಯ ತಜ್ಞರ ನೇಮಕ ಮಾಡಿಕೊಂಡಿತ್ತು.
ಯಾಕೆ ಬೇಕಿತ್ತು?: ಅಡಿಕೆ, ಕಾಳು ಮೆಣಸು, ಅನಾನಸ್, ಮಾವು, ತೆಂಗು, ಬಾಳೆ, ಮಲ್ಲಿಗೆ, ಎಲೆ, ಪಪ್ಪಾಯಿ ದ್ರಾಕ್ಷಿ ಸೇರಿದಂತೆ ಅನೇಕ ತರಾವರಿ ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಯಾವ ಕಾಲಕ್ಕೆ ಯಾವ ಗೊಬ್ಬರ ಹಾಕಬೇಕು? ಯಾವ ರೋಗಕ್ಕೆ ಯಾವ ಔಷಧ ಹಾಕಬೇಕು? ವರ್ಷದಲ್ಲಿ ನೂರಾರು ತರಬೇತಿ ಶಿಬಿರವನ್ನೂ ನಡೆಸುತ್ತಿದ್ದರು. ರೈತರ ತೋಟಕ್ಕೆ ತೆರಳಿ ಮಾಹಿತಿ ನೀಡುತ್ತಿದ್ದರು. ಯಾವ ಭೂಮಿಗೆ ಯಾವ ಬೆಳೆ ಸೂಕ್ತ ಎಲ್ಲ ಮಾಹಿತಿಗಳನ್ನೂ ಸ್ಥಳಕ್ಕೆ ತೆರಳಿ ನೀಡುತ್ತಿದ್ದರು. ರೈತರಿಗೆ ಮಾಹಿತಿ ಕರಪತ್ರವನ್ನೂ ನೀಡುತ್ತಿದ್ದರು. ರೈತರ ಆಪತ್ ಬಾಂಧವ ಆಗಿತ್ತು ಹಾರ್ಟಿ ಕ್ಲೀನಿಕ್. ಸಂಶೋಧನೆ ಹಾಗೂ ರೈತ, ಇಲಾಖೆ ಹಾಗೂ ರೈತರ ನಡುವೆ ಕೊಂಡಿಯಾಗಿತ್ತು.
ನಿಯಮ ಉಲ್ಲಂಘನೆ? ಕೋವಿಡ್ 19ರ ಕಾರಣದಿಂದ ಯಾವ ಖಾಸಗಿ, ಅರೆ ಖಾಸಗಿ ಸಂಸ್ಥೆಗಳು ಯಾರನ್ನೂ ಸೇವೆಯಿಂದ ಕಡಿತಗೊಳಿಸಬಾರದು ಎಂದು ಕಾರ್ಮಿಕ ಇಲಾಖೆ ಆದೇಶ ಮಾಡಿತ್ತು. ಆದರೆ, ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದ ಸರಕಾರವೇ ಹಾರ್ಟಿ ಕ್ಲೀನಿಕ್ ವಿಷಯ ತಜ್ಞರನ್ನು ನೇಮಕ ಮಾಡಿಕೊಳ್ಳದಂತೆ ಆದೇಶ ಮಾಡಿದೆ. ಸರಕಾರದ ಈ ಆದೇಶವನ್ನು ಸ್ವತಃ ಇಲಾಖೆ ಉಲ್ಲಂಘಿಸಿದೆ. ಈ ಬಾರಿ ಕೂಡ ಅತಿ ಮಳೆ, ಅಡಕೆ, ಕಾಳು ಮೆಣಸು, ಕೊಕ್ಕೋ ಕೊಳೆ ರೋಗದ ಕಾಟದ ಆತಂಕದ ಮಧ್ಯೆ ಕೊರೊನಾ ವೈರಸ್ ಆತಂಕ ರೈತರನ್ನು ಧೃತಿಗೆಡಿಸಿದೆ. ಈ ಮಧ್ಯೆ ಭರವಸೆ ನೀಡುತ್ತಿದ್ದ ತೋಟಗಾರಿಕಾ ವಿಷಯ ತಜ್ಞರೂ ಸೇವೆಗೆ “ಬರ’ದಂತೆ ನೋಡಿಕೊಂಡಿದೆ. 28 ಜಿಲ್ಲೆ ಹಾಗೂ ಬೆಂಗಳೂರು ಲಾಲ್ ಭಾಗ್ ಸೇರಿ ಒಟ್ಟೂ 29 ವಿಷಯ ತಜ್ಞರಿಗೆ ಸರಕಾರ
ಆರ್ಥಿಕ ನೆಪವೊಡ್ಡಿ ರೈತರ ಮಾರ್ಗದರ್ಶಿಗಳಿಗೆ ಗೇಟ್ ಪಾಸ್ ನೀಡಿದೆ.
ವಿಷಯ ತಜ್ಞರ ನಿಯೋಜನೆ ಅನುಮೋದನೆ ಆಗದೇ ಇರುವ ಕುರಿತು ಸರಕಾರ ಗಮನಕ್ಕೆ ತರುತ್ತೇನೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
ಹಸಿರು ಶಾಲು, ರೈತ ಹೋರಾಟದ ಮೂಲಕವೇ ಸಿಎಂ ಆದವರ ಸರಕಾರದಲ್ಲಿ ತೋಟಗಾರಿಕಾ ಸಮಗ್ರ ಮಾಹಿತಿ ನೀಡುವ ತಜ್ಞರ ನೇಮಕವನ್ನು ರದ್ದುಗೊಳಿಸಿದ್ದು ಸರಿಯಲ್ಲ.
ದೀಪಕ್ ದೊಡ್ಡೂರು, ಪ್ರಗತಿಪರ ರೈತ
ರಾಘವೇಂದ್ರ ಬೆಟ್ಟಕೊಪ್ಪ