Advertisement

ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಬೇಕಿದೆ ಕಾಯಕಲ್ಪ

02:28 PM Jul 14, 2019 | Suhan S |

ತುಮಕೂರು: ಜಿಲ್ಲೆಯನ್ನು ಶೈಕ್ಷಣಿಕವಾಗಿ ತುಮಕೂರು ದಕ್ಷಿಣ ಮತ್ತು ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯೆಂದು ವಿಂಗಡಿಸಿದ್ದು, ಎರಡೂ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 4,549 ಸ‌ರ್ಕಾರಿ ಶಾಲೆಗಳಿದ್ದು, ಲಕ್ಷಾಂತರ ಮಕ್ಕಳು ಓದುತ್ತಿದ್ದರೂ ಸಮಸ್ಯೆಗಳ ಸಂಖ್ಯೆ ಏರುತ್ತಲೇ ಇದೆ. ಕೆಲವು ಶಾಲಾ ಕಟ್ಟಡಗಳು ಬೀಳುವ ಸ್ಥಿತಿಯಲ್ಲಿವೆ. ಕಾಂಪೌಂಡ್‌, ಆಟದ ಮೈದಾನವಿಲ್ಲದ ನೂರಾರು ಶಾಲೆಗಳು ಇಂದಿಗೂ ಇದೆ. ಇದರ ನಡುವೆ ಶಿಕ್ಷಕರ ಕೊರತೆಯೂ ಇದೆ.

Advertisement

ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಗೆ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುಮಕೂರು ಹಾಗೂ ತುರುವೇಕೆರೆ ತಾಲೂಕುಗಳು ಬರಲಿದ್ದು, ಈ ತಾಲೂಕುಗಳಲ್ಲಿ ಒಟ್ಟು 2031 ಸರ್ಕಾರಿ ಶಾಲೆಗಳಿದ್ದು, 133 ಪ್ರೌಢಶಾಲೆಗಳೂ ಸೇರಿವೆ. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶಿಥಿಲಗೊಂಡ ಕಟ್ಟಡ, ಬಿಸಿಯೂಟದ ಅಡುಗೆ ಕೋಣೆ, ಮೈದಾನ, ಕೊಠಡಿಗಳ ಕೊರತೆ, ಪೀಠೊಪಕರಣಗಳು, ಅಧ್ಯಾಪಕರ ಕೊರತೆ ಇದೆ.

577 ಶಿಕ್ಷಕರ ಕೊರತೆ: ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 577 ಶಿಕ್ಷಕರ ಕೊರತೆ ಇದೆ. ಅದರಲ್ಲಿ ಕಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 6031 ಶಿಕ್ಷಕರ ಹುದ್ದೆಗಳಿದ್ದು, ಅದರಲ್ಲಿ 5471 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನೂ 577 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಅದೇ ರೀತಿಯಲ್ಲಿ ಪ್ರೌಢಶಾಲೆಯಲ್ಲಿ ಒಟ್ಟು ಮಂಜೂರಾದ ಶಿಕ್ಷಕರ ಸಂಖ್ಯೆ 1086, ಕಾರ್ಯ ನಿರ್ವ ಹಿಸುತ್ತಿರುವ ಶಿಕ್ಷಕರ ಸಂಖ್ಯೆ 1069, ಹಾಗೂ 17 ಶಿಕ್ಷಕರ ಹುದ್ದೆ ಖಾಲಿ ಇವೆ.

28 ಶಾಲೆಗಳಲ್ಲಿ ಕಟ್ಟಡವೇ ಇಲ್ಲ: ಈ ಶೈಕ್ಷಣಿಕ ಜಿಲ್ಲೆಯಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇನ್ನು ಕಟ್ಟಡವೇ ಇಲ್ಲ. ಒಟ್ಟು ಜಿಲ್ಲೆಯಲ್ಲಿ 2031 ಶಾಲೆಗಳಿದ್ದು ಅದರಲ್ಲಿ 2004 ಶಾಲೆಗಳಿಗೆ ಕಟ್ಟಡವಿದ್ದು, ಇನ್ನು ಉಳಿದ 27 ಶಾಲೆಗಳಲ್ಲಿ ಖಾಸಗಿ ಕಟ್ಟಡ 8, ಬಾಡಿಗೆ ಕಟ್ಟಡ 11, ಉಚಿತ ಕಟ್ಟಡದಲ್ಲಿ 6 ಶಾಲೆಗಳು ನಡೆಯುತ್ತಿವೆ.

Advertisement

133 ಪ್ರೌಢಶಾಲೆಗಳಲ್ಲಿ 1 ಪ್ರೌಢಶಾಲೆಗೆ ಕಟ್ಟಡ ಇಲ್ಲ. ಉಳಿದ 132 ಶಾಲೆಗಳಿಗೆ ಕಟ್ಟಡವಿದೆ. 1254 ಶಾಲೆಗಳಲ್ಲಿ ಆಟದ ಮೈದಾನವೇ ಇಲ್ಲ. ಜಿಲ್ಲೆಯ 1254 ಶಾಲೆಗಳಲ್ಲಿ ಇಂದಿಗೂ ಆಟದ ಮೈದಾನವೇ ಇಲ್ಲ. 777 ಶಾಲೆಗಳಲ್ಲಿ ಮಾತ್ರ ಆಟದ ಮೈದಾನವಿದ್ದು, 2005 ಶಾಲೆಗಳಲ್ಲಿ ವಿದ್ಯುತ್‌ ಸೌಲಭ್ಯ ಇದೆ. 26 ಶಾಲೆಗಳಲ್ಲಿ ಕೊರತೆಯಿದೆ.

ವಿಶೇಷಚೇತನ ಮಕ್ಕಳು ಶಾಲೆಗೆ ಬರಲು ಅನು ಕೂಲವಾಗುವಂತೆ ರ್‍ಯಾಂಪ್‌ ನಿರ್ಮಿಸಬೇಕು. ಜಿಲ್ಲೆಯಲ್ಲಿ 813 ಶಾಲೆಗ‌ಳಲ್ಲಿದ್ದು ರ್‍ಯಾಂಪ್‌ ಇದ್ದು, ಇನ್ನು 1218 ಶಾಲೆಯಲ್ಲಿ ಇಲ್ಲ. 1617 ಶಾಲೆಗಳಿಗೆ ಕಾಂಪೌಂಡ್‌ ಇದ್ದು, ಇನ್ನೂ 414 ಶಾಲೆಗಳಿಗೆ ಕಾಂಪೌಂಡ್‌ ನಿರ್ಮಿಸಬೇಕಿದೆ. ಅದೇ ರೀತಿ ಪ್ರೌಢ ಶಾಲೆಗಳು ಒಟ್ಟು 133 ಇದ್ದು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ನಿಲಯರ ಶೌಚಗೃಹ 132 ಇದ್ದು, 1 ಶಾಲೆಯಲ್ಲಿ ಕೊರತೆಯಿದೆ.

ವಿದ್ಯುತ್‌ ಸೌಲಭ್ಯ 132 ಶಾಲೆಗಳಲ್ಲಿದ್ದು, 1 ಶಾಲೆಯಲ್ಲಿ ಕೊರತೆಯಿದೆ. ಇನ್ನು ಆಟದ ಮೈದಾನ 118 ಶಾಲೆಗಳಲ್ಲಿದ್ದು, 15 ಶಾಲೆಗಳಿಗಿಲ್ಲ. ರ್‍ಯಾಂಪ್ಸ್‌ 47 ಶಾಲೆಗಳಲ್ಲಿದ್ದು, 86 ಶಾಲೆಗಳಲ್ಲಿ ಇಲ್ಲ. ಕಾಂಪೌಂಡ್‌ 111 ಶಾಲೆಗಳಿಗೆ ಇದ್ದು, ಇನ್ನೂ 22 ಶಾಲೆಗಳಿಗೆ ಸೌಲಭ್ಯ ಬೇಕಿದೆ.

ಹಲವು ಶಾಲೆಗಳಲ್ಲಿ ಡೆಸ್ಕ್ಗಳು, ಅಧ್ಯಾಪಕ ಕುರ್ಚಿ-ಟೇಬಲ್ಗಳೂ ಮುರಿದಿದ್ದು, ಸರ್ವಶಿಕ್ಷ ಅಭಿಯಾನದಡಿ ವರ್ಷ ವರ್ಷಕ್ಕೆ ಅನುದಾನದ ಕೊರತೆ ಎದುರಾಗಿದೆ. ಮೂಲಸೌಲಭ್ಯಗಳ ಕೊರತೆ ನೀಗದಿರುವುದು ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗಲು ಕಾರಣವಾಗಿದೆ.

ಸ್ವಾತಂತ್ರ್ಯ ಬಂದ ಸಂದರ್ಭ ಸ್ಥಾಪಿತವಾದ ಶಾಲೆಗಳು, ಶತಮಾನೋತ್ಸವ ಪೂರೈಸಿದ ಶಾಲೆಗಳೂ ಜಿಲ್ಲೆಯಲ್ಲಿದ್ದು, ದುರಸ್ತಿಗಾಗಿ ಕಾದಿವೆ. ಈಗ ಸರ್ಕಾರ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು ಇಂಗ್ಲಿಷ್‌ ಶಾಲೆ ಆರಂಭಿಸಿದೆ. ಜೊತೆಗೆ ಸಮಸ್ಯೆ ನಿವಾರಣೆಗೂ ಮುಂದಾಗಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

 

● ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next