Advertisement

ಗೋಕಾಕ ತಾಲೂಕಿನ ಸರಕಾರಿ ಶಾಲೆಗಳು ಹೈಟೆಕ್‌

06:12 PM Jun 17, 2024 | Team Udayavani |

ಉದಯವಾಣಿ ಸಮಾಚಾರ
ಗೋಕಾಕ: ತಾಲೂಕಿನ ಸರಕಾರಿ ಶಾಲೆಗಳು ಹೈಟೆಕ್‌ ಸೌಲಭ್ಯ ಹಾಗೂ ಅತಿ ಹೆಚ್ಚು ದಾಖಲಾತಿ ಹೊಂದುವ ಮೂಲಕ ಖಾಸಗಿ ಶಾಲೆಗಳನ್ನು ಮೀರಿಸುವ ಮಟ್ಟಕ್ಕೆ ಅಭಿವೃದ್ಧಿ ಹೊಂದುತ್ತಿವೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರಬೇಕಾದರೆ ಅಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಶಾಲಾ ಕಟ್ಟಡ, ಶೌಚಾಲಯ, ಕುಡಿಯುವ ನೀರು ಮೊದಲಾದ ಸೌಕರ್ಯಗಳ ಜತೆಗೆ ಶೈಕ್ಷಣಿಕ ಸೌಲಭ್ಯಗಳೂ ಅವಶ್ಯ. ಈ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಗೋಕಾಕ ವಲಯ ಮಕ್ಕಳ ಹಾಜರಾತಿಯಲ್ಲೂ ನಂ-1. ಕ್ಷೇತ್ರ ಶಿಕ್ಷಣಾಧಿ ಕಾರಿಗಳ ಪರಿಶ್ರಮದ ಫಲವಾಗಿ ಎಲ್ಲ ಶಾಲೆಗಳಲ್ಲಿ ಪ್ರತಿ ವರ್ಷ ಹೆಚ್ಚೆಚ್ಚು ಮಕ್ಕಳು ದಾಖಲಾಗುತ್ತಿವೆ.

Advertisement

ವಲಯದ ಸರ್ಕಾರಿ ಶಾಲೆಗಳು ಅತ್ಯಾಧುನಿಕ ವ್ಯವಸ್ಥೆಯ ಶಾಲಾ ಕೊಠಡಿಗಳು, ಸುಸಜ್ಜಿತ ಶಾಲಾ ಆವರಣ, ಮೈದಾನ ಹೊಂದಿದ್ದು ಅತ್ಯುತ್ತಮ ಬೋಧನಾ ಸಿಬ್ಬಂದಿಯೊಂದಿಗೆ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಗೋಕಾಕ ಶೈಕ್ಷಣಿಕ ವಲಯದ ಅಭಿವೃದ್ಧಿಗೆ ಪೂರಕವಾಗಿ ಖನಗಾಂವ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ, ಮಮದಾಪೂರದ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ, ಅಂಕಲಗಿಯ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ,

ಧುಪದಾಳ ಮತ್ತು ಸುಲಧಾಳ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ದತ್ತು ಪಡೆದಿದ್ದಾರೆ. ಹೆಣ್ಣು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಶಾಲೆಗಳ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಿದ್ದಾರೆ.

ಶಾಲಾ ಕ್ರೀಡಾಂಗಣ, ಕೈತೋಟ ಅಭಿವೃದ್ಧಿ, ಶಾಲಾ ಕಾಂಪೌಂಡ್‌ ಗೋಡೆ ನಿರ್ಮಾಣ, ಸಮರ್ಪಕ ಪೀಠೊಪಕರಣ, ಕಂಪ್ಯೂಟರ್‌
ಶಿಕ್ಷಣಕ್ಕೆ ಅನುವಾಗುವಂತಹ ಉಪಕರಣ ಮತ್ತು ಬೋಧನೆಗೆ ಸವಲತ್ತು ರೂಪಿಸುವ ಜತೆಗೆ ಗ್ರಂಥಾಲಯ ಮತ್ತು ಲ್ಯಾಬೊರೇಟರಿಗಳ ಅನುಕೂಲ ಕಲ್ಪಿಸಿದ್ದಾರೆ.

ಶಾಲಾ ಆರಂಭದ ಮೊದಲ ದಿನದಲ್ಲೇ 800ಕ್ಕೂ ಹೆಚ್ಚಿನ ಮಕ್ಕಳು ಸರಕಾರಿ ಶಾಲೆಗೆ ಪ್ರವೇಶ ಪಡೆದಿದ್ದಾರೆ. ಅಂಕಲಗಿ 180,
ಮದವಾಲ 189, ಸುಲದಾಳ 114, ತವಗ 160,ಖನಗಾಂವ 157, ಕೊಳವಿ 146, ಮಾಲದಿನ್ನಿ 350, ಮಮದಾಪೂರ 252, ಹಿರೇನಂದಿ 139, ಧುಪದಾಳ 66, ಶಿವಾಪುರ 163, ಕೊಣ್ಣೂರ 83, ಮಕ್ಕಳಗೇರಿ 219, ಗೋಕಾಕ ದಕ್ಷಿಣ 149, ಗೋಕಾಕ ಉತ್ತರ 124 ಸೇರಿ ಈವರೆಗೆ ಒಟ್ಟು 2588 ವಿದ್ಯಾರ್ಥಿಗಳು ಸರಕಾರಿ ಶಾಲೆಗೆ ದಾಖಲಾತಿ ಪಡೆದಿದ್ದಾರೆ. ಇನ್ನೂ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆಯಲಿದ್ದಾರೆ ಎಂಬ ವಿಶ್ವಾಸವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ. ಬಳಗಾರ ವ್ಯಕ್ತಪಡಿಸುತ್ತಾರೆ.

Advertisement

ಒಟ್ಟಾರೆ ಗೋಕಾಕ ಶೈಕ್ಷಣಿಕ ವಲಯದ ಶಾಲೆಗಳು ಶಿಕ್ಷಣ ಇಲಾಖೆಯ ಕಾಳಜಿಯಿಂದ ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯ, ಶಾಲಾ ಆವರಣ, ಮೈದಾನ ಸೇರಿ ಅಭಿವೃದ್ಧಿ ಹೊಂದಿವೆ. ಹೀಗಾಗಿ ಗೋಕಾಕ ವಲಯ ದಾಖಲಾತಿಯಲ್ಲಿ ಮೇಲುಗೈ ಸಾಧಿಸುತ್ತಿದೆ.

ಗೋಕಾಕ ಶೈಕ್ಷಣಿಕ ವಲಯ ವಿಭಿನ್ನ ಪ್ರಯತ್ನಗಳ ಮೂಲಕ ಶಿಕ್ಷಣ ವಲಯದಲ್ಲಿ ತನ್ನದೇ ಛಾಪು ಮೂಡಿಸಿದೆ. ಒಳ್ಳೆಯ ಗುರು ಬಳಗ ಹಾಗೂ ಅಧಿಕಾರಿ ವರ್ಗ ಹೊಂದಿದ್ದು ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲಿಸುವ ಮೂಲಕ ತಮ್ಮ
ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕರಿಸಬೇಕು.
●ರಮೇಶ ಜಾರಕಿಹೊಳಿ,
ಶಾಸಕರು, ಗೋಕಾಕ.

ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಸರಕಾರಿ ಶಾಲೆಗಳಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ಮಕ್ಕಳಿಗೆ ಬೇಕಾದ ಉತ್ತಮ ಶಿಕ್ಷಣ ಜತೆಗೆ ಮೂಲ ಸೌಕರ್ಯ, ಕೈ ತೋಟ ಮತ್ತು ಶಾಲಾ ಮೈದಾನ ಅಭಿವೃದ್ಧಿಪಡಿಸಲಾಗಿದೆ. ಪಾಲಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಶಾಲೆಗಳ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು.
●ಜಿ.ಬಿ. ಬಳಗಾರ,
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗೋಕಾಕ.

Advertisement

Udayavani is now on Telegram. Click here to join our channel and stay updated with the latest news.

Next