Advertisement

ಕೋವಿಡ್ 19 ನಡುವೆಯೂ ಅಕ್ಷರ ಕ್ರಾಂತಿಯ ಕಿಚ್ಚು ಬಡಿದೆಬ್ಬಿಸುವ ಸರಕಾರಿ ಟೀಚರಮ್ಮ

09:06 AM Sep 10, 2020 | sudhir |

ಕಟಪಾಡಿ : ಉಡುಪಿ ಜಿಲ್ಲೆಯ ಕುರ್ಕಾಲು ಗ್ರಾಮದ ಕುಂಜಾರುಗಿರಿ ಶ್ರೀ ದುರ್ಗಾದೇವೀ ದೇವಸ್ಥಾನದ ಏರು ಮೆಟ್ಟಿಲು ತಪ್ಪಲಿನಲ್ಲಿ ಸರಕಾರಿ ಶಾಲೆಯ ಅಧ್ಯಾಪಕಿ ತನ್ನ ವಿದ್ಯಾರ್ಥಿಗಳಿಗೆ ಮನೆ ಪಾಠವನ್ನು ನಡೆಸುವ ಶೈಕ್ಷಣಿಕ ಸೇವೆಯ ಮೂಲಕ ಅಕ್ಷರ ಕ್ರಾಂತಿಯ ಕಿಚ್ಚು ಬಡಿದೆಬ್ಬಿಸುವ ಕಾಯಕದಲ್ಲಿ ನಿರತರಾಗಿದ್ದಾರೆ

Advertisement

ಸುರಕ್ಷತೆ, ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ಚಟುವಟಿಕೆ ಆರಂಭಕ್ಕೂ ಮೊದಲು ಮತ್ತು ಮುಗಿದ ಬಳಿಕ ಸ್ಯಾನಿಟೈಸರ್ ಬಳಸುವಿಕೆಯನ್ನು ಕಡ್ಡಾಯಗೊಳಿಸಿ ಸರಕಾರದ ನಿಬಂಧನೆಗಳನ್ನೂ ಪಾಲಿಸಿಕೊಳ್ಳುತ್ತಿದ್ದಾರೆ.

ಮೂಲತಃ ಮಲ್ಪೆಯ ನಿವಾಸಿ ರಂಜಿತಾ ಸಹಶಿಕ್ಷಕಿಯಾಗಿ ಕುಂಜಾರುಗಿರಿಯ ಬಿಜಂಟ್ಲದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದಿನ ನಿತ್ಯ ಅಷ್ಟು ದೂರ ಸಂಚರಿಸಿ ಆ ಬಳಿಕ ವಿದ್ಯಾರ್ಥಿಗಳ ಮನೆಯ ಪರಿಸರಕ್ಕೆ ತೆರಳಿ ಕಳೆದ ಜುಲೈ ಅಂತ್ಯದಿಂದ ಸರಕಾರದ ವಿದ್ಯಾಗಮ ಯೋಜನೆಯನ್ವಯ ತನ್ನ ವಿದ್ಯಾರ್ಥಿಗಳಿಗೆ ಕಲಿಕಾ ಉಪಕರಣಗಳೊಂದಿಗೆ ಶಿಕ್ಷಣವನ್ನು ಧಾರೆ ಎರೆಯುತ್ತಿದ್ದಾರೆ.

ಬಾಗಿಲು ಮುಚ್ಚಿದ ಶಾಲೆ, ಮನೆ ಪರಿಸರವೇ ಪಾಠ ಶಾಲೆ:
ಕೋವಿಡ್ 19 ಸೋಂಕು ವ್ಯಾಪಿಸಿರುವ ನಡುವೆಯೂ ಬಾಗಿಲು ಮುಚ್ಚಿದ ಶಾಲೆಯಲ್ಲಿ ಕಲಿಕೆ ಲಭ್ಯವಿಲ್ಲವಾದರೂ ಅಧ್ಯಾಪಕಿ ಮನೆ ಪಾಠದ ಮೂಲಕ ಮನೆ ಪರಿಸರವನ್ನು ಪಾಠ ಶಾಲೆಯನ್ನಾಗಿಸಿದ್ದಾರೆ. ಕೋವಿಡ್ ವ್ಯಾಪಿಸಿರುವುದರಿಂದ ಮನೆಗೆ ತೆರಳಿ ಪಾಠ ನಡೆಸಲಾಗುತ್ತಿದೆ. ಶಾಲಾ ಚಟುವಟಿಕೆ ನಡೆಸುತ್ತಿದ್ದೇವೆ. ಸದ್ಯಕ್ಕೆ ಈ ರೀತಿ ಕಲಿಕಾ ಉಪಕರಣ ಬಳಸಿಕೊಂಡು ಜೂನ್, ಜುಲೈ ತಿಂಗಳ ಸೇತುಬಂಧ ಚಟುವಟಿಕೆಯನ್ನೂ ನಡೆಸಲಾಗುತ್ತಿದೆ.

ವಿದ್ಯಾರ್ಥಿಗಳನ್ನು ವಾರಕ್ಕೆ ಎರಡು ಭಾರಿ ಭೇಟಿ ಮಾಡಿ ನೇರ ಮುಖಾಮುಖಿ ಶಿಕ್ಷಣ ನೀಡುವುದು ಮಾತ್ರವಲ್ಲದೇ ವಾಟ್ಸಾಪ್ ಗ್ರೂಪ್ ರಚಿಸಿ ಹೋಂ ವರ್ಕ್‍ಗಳನ್ನು ವರ್ಕ್ ಶೀಟ್ ತರಹ ಮಾಡಿ ಕಳುಹಿಸಿ ಮಕ್ಕಳು ನೋಡಿಕೊಂಡು ಬರೆದು ಅಭ್ಯಾಸ ಮಾಡಿಸಲಾಗುತ್ತಿದೆ ಎನ್ನುತ್ತಾರೆ.

Advertisement

ಮಕ್ಕಳ ಪೋಷಕರ ಉತ್ತಮ ಸ್ಪಂದನೆ :
ಮನೆ ಪಾಠವನ್ನು ಮಕ್ಕಳನ್ನು ತಂಡವಾಗಿ ರಚಿಸಿ ನಿನ್ನಿಪಾದೆ, ಗಿರಿನಗರ, ಬಿಜಂಟ್ಲ ವ್ಯಾಪ್ತಿಯ ಪರಿಸರದಲ್ಲಿ ನಡೆಸಲಾಗುತ್ತಿದೆ. ಮಕ್ಕಳ ಪೋಷಕರು ಉತ್ತಮವಾಗಿ ಸ್ಪಂದಿಸುತ್ತಿದ್ದು, ಪಾಲಕರು ಮಕ್ಕಳ ಹೋಂ ವರ್ಕ್‍ಗೆ ಸಹಕರಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 1ನೇ ತರಗತಿಯ ಮಕ್ಕಳಿಗೂ ಅಕ್ಷರಾಭ್ಯಾಸ ಪ್ರಾರಂಭಿಸಲಾಗಿದೆ ಎಂದು ತಿಳಿಸಿರುತ್ತಾರೆ.

ಮಕ್ಕಳ ಮುಖ ನೋಡದೆ ಬೇಸರ :
ಕೋವಿಡ್ ಲಾಕ್‍ಡೌನ್ ಸಂದರ್ಭದಿಂದ ಮಕ್ಕಳ ಮುಖ ನೋಡದೆ ನಮಗೂ ಬೇಸರವಾಗುತ್ತಿತ್ತು. ಮಕ್ಕಳನ್ನು ತುಂಬಾ ಎಣಿಸ್ತಾ ಇತ್ತು. ಫೋನ್ ಮೂಲಕ ಸಂಪರ್ಕ ಸಾಧಿಸಿ ನೆಮ್ಮದಿ ಪಡೆಯುತ್ತಿದ್ದೆ. ಇದೀಗ ನಮ್ಮ ಶಾಲಾ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸದೇ ಅವರಿಗೂ ಕೂಡಾ ನಾವು ಅಕ್ಷರಾಭ್ಯಾಸ ಮಾಡುತ್ತಿದ್ದೇವೆ. ಸರಕಾರಿ ಶಾಲೆಗೆ ಮಧ್ಯಮ ವರ್ಗದ ಮಕ್ಕಳು ಹೆಚ್ಚಾಗಿ ಬರುತ್ತಿದ್ದು, ಮನೆಮಂದಿ ಬೆಳಗ್ಗೆ ಕೆಲಸಕ್ಕೆ ತೆರಳಿದರೆ ಸಂಜೆ ಮನೆಗೆ ಹಿಂದಿರುಗುತ್ತಾರೆ. ಆದ್ದರಿಂದ ಅಧ್ಯಾಪಕಿಯಾಗಿ ನಾನೇ ಹೆಚ್ಚು ಕಲಿಕೆಯನ್ನು ಕೊಡಬೇಕಿದೆ ಎಂದೆನ್ನುತ್ತಾರೆ ಅಧ್ಯಾಪಕಿ ರಂಜಿತಾ ಕೋವಿಡ್ ಸೋಂಕು, ಲಾಕ್‍ಡೌನ್ ಹಿನ್ನಲೆಯಲ್ಲಿ ಪೋಷಕರಿಗೂ ಆರ್ಥಿಕ ಹೊಡೆತ ಬಿದ್ದಿದೆ. ಆ ನಿಟ್ಟಿನಲ್ಲಿ ಇಂಗ್ಲೀಷ್ ಮೀಡಿಯಂಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಫೀಸ್ ಕಟ್ಟಲು ಅಸಹಾಯಕರಾಗಿ ಇದೀಗ ನಮ್ಮ ಸರಕಾರಿ ಶಾಲೆಯ ಕದ ತಟ್ಟಿದ್ದು ಪ್ರವೇಶಾತಿ ಪಡೆದುಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಟೀಚರಮ್ಮ ಹೇಳಿದ್ದಾರೆ.

– ವಿಜಯ ಆಚಾರ್ಯ,ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next