Advertisement

ಸರ್ಕಾರಿ ಶಾಲೆ ಜಾಗ; ಕಂದಾಯ ಇಲಾಖೆಯಿಂದಲೇ ಪರಭಾರೆ!

03:49 PM Nov 07, 2021 | Shwetha M |

ಸಾಗರ: ಹಿಂದಿನ ಶತಮಾನದಲ್ಲಿ ಸರ್ಕಾರಿ ಶಾಲೆಯ ನಿರ್ಮಾಣದಲ್ಲಿ ಉದಾರವಾಗಿ ನಿವೇಶನ ಒದಗಿಸಿದವರಿಗೆ ರಾಜಾಡಳಿತ ಬಹುಪರಾಕ್ ಹೇಳಿ, ಕೈಜೋಡಿಸುವ ಕೆಲಸ ಮಾಡಿದರೆ, ಇಂದಿನ ಪ್ರಜಾಪ್ರಭುತ್ವದ ಸರ್ಕಾರದ ಆಡಳಿತ ಅದೇ ಜಾಗವನ್ನು ಖಾಸಗಿಯವರ ಹೆಸರಿಗೆ ವರ್ಗಾಯಿಸಿ ಜನ ಕೈಕೈ ಹಿಸುಕಿಕೊಳ್ಳುವಂತೆ ಮಾಡಿದ ವಿಚಿತ್ರ ವಿದ್ಯಮಾನ ತಾಲೂಕಿನ ತುಮರಿಯಲ್ಲಿ ನಡೆದಿದೆ.

Advertisement

ತಾಲ್ಲೂಕಿನ ತುಮರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈಗ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ಈ ಸಂಭ್ರಮವನ್ನು ಆಚರಿಸಬೇಕಾದವರು ಕಂದಾಯ ಇಲಾಖೆಯ ಎಡವಟ್ಟಿನ ಕಾರಣದಿಂದ ಶಾಲಾ ಕಟ್ಟಡದ ಉಳಿವಿಗೆ ಹೋರಾಟ ಸಂಘಟಿಸಬೇಕಾದ ಸ್ಥಿತಿ ತಲುಪಿದೆ.

1918ರಲ್ಲಿ ಮೈಸೂರು ರಾಜ್ಯದ ದಿವಾನರ ಕಾಲದಲ್ಲಿ ತುಮರಿ ಗ್ರಾಮದ ಸ.ನಂ. 24ರಲ್ಲಿ ಸರ್ಕಾರಿ ಶಾಲೆ ನಿರ್ಮಾಣವಾಗಿತ್ತು. ಆ ಶಾಲೆಯ ಸಂಬಂಧ ತಮ್ಮದಾದ ಜಾಗ ಮುಫತ್ತಾಗಿ ಕೊಡುಗೆ ನೀಡಿದ ಅಲ್ಲಿನ ಜಮೀನ್ದಾರ್ ಕೃಷ್ಣಯ್ಯ ಎಂಬುವವರಿಗೆ 1918ರ ಏಪ್ರಿಲ್ 25ರಂದು ಮೆಚ್ಚುಗೆಯ ಮೈಸೂರು ರಾಜ್ಯದ ದಿವಾನರು ಬರೆದ ಪತ್ರ ಇವತ್ತಿಗೂ ಶಾಲೆಯಲ್ಲಿ ಸುರಕ್ಷಿತವಾಗಿದೆ.

ಆದರೆ 2020ರ ಏಪ್ರಿಲ್ ತಿಂಗಳಲ್ಲಿ ತಾಲೂಕು ತಹಶೀಲ್ದಾರ್ ಮಾಡಿರುವ ಆದೇಶದ ಪ್ರಕಾರ ಸರ್ಕಾರಿ ಶಾಲೆಗೆ ಸೇರಿದ ಪ್ರದೇಶದ ಖಾತೆಯನ್ನು  ಖಾಸಗಿ ವ್ಯಕ್ತಿಯೊಬ್ಬರ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ಸ್ಥಳ ಪರಿಶೀಲನೆ ಮಾಡದೆ ತಹಶೀಲ್ದಾರರು ಮಾಡಿದ ಎಡವಟ್ಟಿನಿಂದ ಶಾಲೆಯ ಅಸ್ತಿತ್ವಕ್ಕಾಗಿ ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಸ್ವಾರಸ್ಯ ಎಂದರೆ ನೂರು ವರ್ಷದ ಇತಿಹಾಸವಿರುವ ಸರ್ಕಾರಿ ಶಾಲೆ ಕಟ್ಟಡ ಮತ್ತು ಆಟದ ಮೈದಾನದ ಜಾಗವನ್ನು ಶಾಲೆಗೆ ಮಂಜೂರು ಮಾಡಿ ಎಂದು ಶಾಲಾಭಿವೃದ್ಧಿ ಸಮಿತಿಯವರು ಒಂದು ದಶಕದಿಂದ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ಅಲೆಯುತ್ತಲೇ ಇದ್ದಾರೆ. ಶಾಲಾ ಕಟ್ಟಡಕ್ಕೆ ಹೊಂದಿಕೊಂಡಂತೆ ಮೂರು ಎಕರೆ ಪ್ರದೇಶದಲ್ಲಿ ಆಟದ ಮೈದಾನವಿದ್ದು, ಪಕ್ಕದ ಪ್ರೌಢಶಾಲೆ ಹಾಗೂ ಕಾಲೇಜಿನ ಕ್ರೀಡಾಕೂಟಗಳು ನಡೆಯುತ್ತವೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಶತಮಾನೋತ್ಸವ ಸಮಿತಿ ನಿರಂತರವಾಗಿ ಬೆವರು ಸುರಿಸಿದರೆ, ಶ್ರಮವೇ ಇಲ್ಲದೆ ಶಾಲೆಯ ಜಾಗದ ಖಾತೆ ಖಾಸಗಿ ವ್ಯಕ್ತಿಯೊಬ್ಬರ ಹೆಸರಿಗೆ ವರ್ಗಾವಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ!

Advertisement

ಇದನ್ನೂ ಓದಿ:ನವೆಂಬರ್ 19ರಿಂದ ಬಿಜೆಪಿಯಿಂದ ಜನಸ್ವರಾಜ್ ಸಮಾವೇಶ: ರವಿ ಕುಮಾರ್

ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಲೋಕಪಾಲ ಜೈನ್ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ, ಖಾತೆ ಬದಲಾವಣೆ ಬೆನ್ನಲ್ಲೇ ಆಟದ ಮೈದಾನದ ಅಭಿವೃದ್ಧಿಗೆ ಉದ್ಯೋಗಖಾತ್ರಿ ಯೋಜನೆಯಡಿ 5 ಲಕ್ಷ ರೂ. ವೆಚ್ಚದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಕಾಮಗಾರಿಗೆ ತಮ್ಮ ಹೆಸರಿಗೆ ಖಾತೆ ಬರೆಯಿಸಿ ಕೊಂಡವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದರಿಂದಾಗಿ ಶತಮಾನೋತ್ಸವ ಆಚರಣೆ ಸಂಭ್ರಮದಲ್ಲಿರುವ ಸರ್ಕಾರಿ ಶಾಲೆ ಇಕ್ಕಟ್ಟಿಗೆ ಸಿಲುಕಿದೆ. ನಾವು ಶಾಲೆಯ ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದ್ದೆವು. ಆದರೆ ಈಗ ಶಾಲೆಯ ಅಸ್ತಿತ್ವಕ್ಕೆ ಅಪಾಯ ಎದುರಾಗಿದೆ. ಶಾಲೆಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಸ್ಥಿತಿ ಬಂದಿರುವುದು ಬೇಸರ ತಂದಿದೆ ಎನ್ನುತ್ತಾರೆ.

ಈ ನಡುವೆ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ತುಮರಿ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಜಾಗದ ಖಾತೆ ಖಾಸಗಿ ವ್ಯಕ್ತಿಯೊಬ್ಬರ ಹೆಸರಿಗೆ ಬದಲಾವಣೆಯಾಗಿರುವ ವಿಷಯ ಗಮನಕ್ಕೆ ಬಂದಿದೆ. ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಶಾಲೆಯ ಕಟ್ಟಡ ಹಾಗೂ ಆಟದ ಮೈದಾನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂಬ ಸಮಜಾಯಿಷಿ ನೀಡಿದ್ದಾರೆ.

ಈಗಾಗಲೇ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ನಕಲಿ ಹಕ್ಕುಪತ್ರಗಳ ಆಧಾರದಲ್ಲಿ ಭೂಮಿ ಪರಭಾರೆ ನಡೆಸಿದಂತಹ ಪ್ರಕರಣ ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದ್ದು, ತನಿಖೆಗೆ ಮಾಹಿತಿ ಹಕ್ಕು ಹೋರಾಟಗಾರರು ಆಗ್ರಹಿಸಿದ್ದಾರೆ. ಅದೇ ರೀತಿ ತುಮರಿ ಪಂಚಾಯತಿ ವ್ಯಾಪ್ತಿಯಲ್ಲಿನ ಕಂದಾಯ ಭೂಮಿಯ ಖಾತೆಯನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಬರೆಸಿಕೊಂಡು ನಂತರ ಅವುಗಳನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದು ಈಗೀಗ ದಂಧೆಯಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಜಿಲ್ಲಾಡಳಿತ ತಾಲೂಕಿನ ಗ್ರಾಮೀಣ ಭಾಗದ ಇಂತಹ ಪ್ರಕರಣಗಳ ಆಮೂಲಾಗ್ರ ತನಿಖೆ ನಡೆಸಬೇಕು.

ಸ್ಥಳ ಪರಿಶೀಲನೆ ಮಾಡದೆ ತಹಸೀಲ್ದಾರ್ ಖಾತೆ ಬದಲಾವಣೆ ಮಾಡಿದ್ದು ನಮಗೆ ಆಘಾತವಾಗಿದೆ. ಸರ್ಕಾರಿ ಶಾಲೆ ಕ್ರೀಡಾಂಗಣ ಉಳಿಸಬೇಕಾದವರೇ ಹೀಗೆ ಮಾಡಿದರೆ ಹೇಗೆ? ಸರ್ಕಾರ ನಮ್ಮ ಶಾಲೆ ಮತ್ತು ಕ್ರೀಡಾಂಗಣವಿರುವ ಜಾಗವನ್ನು ನಮಗೆ ಮಂಜೂರು ಮಾಡಿಕೊಡಬೇಕು. – ಚಂದ್ರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ

ನಮ್ಮ ಬಾಲ್ಯದಿಂದ ನಾವೆಲ್ಲ ಈ ಕ್ರೀಡಾಂಗಣದಲ್ಲಿ ಆಟ ಆಡಿ ಬೆಳೆದಿದ್ದೇವೆ. ಶಾಲೆಗೆ ಕ್ರೀಡಾ ಮೈದಾನ ಇರಬೇಕು ಎಂದೇ ಸರ್ಕಾರದ ವಿವಿಧ ಅನುದಾನ ಬಳಸಿ ಲಕ್ಷಾಂತರ ವೆಚ್ಚದಲ್ಲಿ ಕ್ರೀಡಾಂಗಣ ಸುಸಜ್ಜಿತಗೊಳಿಸಲಾಗಿದೆ. ಈಗ 71 ವರ್ಷಗಳ ನಂತರ ಖಾಸಗಿಯವರಿಗೆ ಬಿಟ್ಟು ಕೊಡಲು ಹೇಗೆ ಸಾಧ್ಯ? – ಕೃಷ್ಣ ಭಂಡಾರಿ ತುಮರಿ, ಕ್ರೀಡಾಂಗಣ ಉಳಿಸಿ ಹೋರಾಟ ವೇದಿಕೆ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next