ಬಂಕಾಪುರ: ಪಟ್ಟಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಆರಂಭವಾಗಿವೆ. ಆದರೆ, ಖನೋಜಗಲ್ಲಿಯ ಪುರಾತನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತೆರಳಲು ರಸ್ತೆಯೇ ಮಾಯವಾಗಿದ್ದು, ಶಾಲೆಗೆ ತೆರಳಲು ಮಕ್ಕಳು ರಸ್ತೆ ಹುಡುಕುವಂತಾಗಿದೆ. ಅಲ್ಲದೇ, ಸರ್ಕಸ್ ಮಾಡುತ್ತ ಶಾಲೆಯತ್ತ ಹೆಜ್ಜೆ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಪಾಲಕರು ಹಾಗೂ ನಾಗರಿಕರು ಆರೋಪಿಸುತ್ತಿದ್ದಾರೆ.
ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 40 ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಇಲ್ಲಿ ಇಬ್ಬರು ಶಿಕ್ಷಕಿಯರನ್ನು ನಿಯೋಜನೆ ಮಾಡಲಾಗಿದೆ.
ಈ ಶಾಲೆಗೆ ಹೋಗುವ ರಸ್ತೆ ಸತತ ಸುರಿಯುತ್ತಿರುವ ಮಳೆಗೆ ಜಲಾವೃತಗೊಂಡಿದ್ದು, ಮಕ್ಕಳು ಶಾಲೆಗೆ ರಸ್ತೆ ಹುಡುಕಿಕೊಂಡು ಹೋಗುವಂತಾಗಿದೆ. ಈ ಶಾಲೆಯಲ್ಲಿ ಯಾವುದೇ ನೀರು, ಶೌಚಾಲಯದ ಸೌಲಭ್ಯ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಬಯಲು ಶೌಚವನ್ನೇ ಅನಿವಾರ್ಯವಾಗಿ ಅವಲಂಬಿಸಬೇಕಾಗಿದೆ.
ಈ ಶಾಲೆಗೆ ಯಾವುದೇ ಕಾಂಪೌಂಡ್ ಇಲ್ಲದ ಕಾರಣ ಹಾಗು ಹೊರವಲಯಕ್ಕೆ ಹೊಂದಿಕೊಂಡಿರುವುದರಿಂದ ಕುಡುಕರ ತಾಣವಾಗಿದೆ. ಪುಂಡಪೋಕರಿಗಳ ಜೂಜಾಡುವ ಅಡ್ಡೆಯಾಗಿ ಪರಿಣಮಿಸಿದೆ. ಈ ಶಾಲಾ ರಸ್ತೆಯಲ್ಲಿ ಜಿ+1 ಮನೆಗಳ ನಿರ್ಮಾಣ ಕಾರ್ಯ ಮುಂದುವರೆದಿದ್ದು, ಭಾರೀ ಗಾತ್ರದ ವಾಹನಗಳು ಸಂಚರಿಸುವುದರಿಂದ ಶಾಲೆಗೆ ಹೋಗುವ ರಸ್ತೆ ಮತ್ತಷ್ಟು ಹದಗೆಟ್ಟು ಕೆಸರು ಗದ್ದೆಯಾದಂತಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಶಾಲೆಗೆ ಹೋಗುವ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಪರಿವರ್ತಿಸಿ, ಪಕ್ಕಾ ಗಟಾರ ನಿರ್ಮಿಸಿ, ಶಾಲಾ ಆವರಣವನ್ನು ಸುಂದರಗೊಳಿಸಿ, ಕಾಂಪೌಂಡ್ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳ ಸುಗಮ ಸಂಚಾರ, ಉತ್ತಮ ವ್ಯಾಸಂಗಕ್ಕೆ ಅನಕೂಲ ಕಲ್ಪಿಸಿಕೊಡಬೇಕು. ವೃಥಾ ಕಾರಣ ಹೇಳಿದರೆ, ಜಿ+1 ಮನೆ ನಿರ್ಮಾಣ ಕಾರ್ಯಕ್ಕೆ ಸಂಚರಿಸುವ ಎಲ್ಲ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಪುರಸಭೆ ಸದಸ್ಯ ಸತೀಶ ಆಲದಕಟ್ಟಿ, ನಾರಾಯಣ ಸಿಂಗ್ ಕಲಗಟಗಿ, ಸತೀಶ ಟೋಪಣ್ಣವರ, ಶಿಶುಪಾಲ ಟೋಪಣ್ಣವರ, ಭರತ್ ಚವ್ಹಿ, ಮಾಲತೇಶ ಕಲಘಟಗಿ, ಗಣೇಶ ಬಾರಿಗಿಡದ, ಈರಣ್ಣ ಪಾಟೀಲ, ವಿನಾಯಕ ಪಾಂಡೆ, ಹರೀಶ ಭವಾನಿ, ಹನುಮಂತ ಪಾಂಡೆ, ರಾಘವೇಂದ್ರ ಚವ್ಹಿ, ವಿನಾಯಕ ಕೂಲಿ, ಅರ್ಜುನ ಶಿದ್ದಪ್ಪನವರ, ಗುಲಾಬ ಕಲಘಟಗಿ, ರಮೇಶ ಚವ್ಹಿ, ವೆಂಕಟ ಪಾಂಡೆ ಸೇರಿದಂತೆ ಇತರರು ರಸ್ತೆ ಅವಾಂತರದ ಕುರಿತು ಮಾಹಿತಿ ನೀಡಿದರು.
ಶಾಲಾ ಆವರಣ ಅವ್ಯವಸ್ಥೆಯ ಆಗರವಾಗಿದ್ದು, ವಿದ್ಯಾರ್ಥಿಗಳು ಭಯದಲ್ಲಿ ಶಾಲೆಗೆ ಬರುವಂತಾಗಿದೆ. ಶಾಲಾ ಆವರಣ ವಿಶಾಲವಾಗಿದ್ದು, ಕಾಂಪೌಂಡ್ ನಿರ್ಮಿಸಿ, ಹೂದೋಟ ಮಾಡಿ ಮಕ್ಕಳ ಕಲಿಕೆಗೆ ಪುರಕ ವಾತಾವರಣ ಸೃಷ್ಟಿಸಬೇಕು. ಇಲ್ಲದೇ ಹೋದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.
∙ಕೆ.ಎಸ್.ಜೋಶಿ, ವಕೀಲರು ಹಾಗೂ ಸಮಾಜ ಸೇವಕರು
ಶಾಲಾ ರಸ್ತೆ ನಿರ್ಮಾಣಕ್ಕೆ ಪುರಸಭೆ ಮುಖ್ಯಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಶಾಲಾ ಅಭಿವೃದ್ಧಿ,ಕಾಂಪೌಂಡ್, ಶೌಚಾಲಯ ನಿರ್ಮಾಣಕ್ಕಾಗಿ ಈಗಾಗಲೇ 12.5 ಲಕ್ಷ ರೂ. ಮಂಜುರಾಗಿದ್ದು, ಅನುಮೋದನೆಗಾಗಿ ರಾಜ್ಯ ಎಂಜಿನಿಯರ್ ಕಚೇರಿಗೆ ಕಳುಹಿಸಿಕೊಡಲಾಗಿದೆ. ಅನುಮೋದನೆಯಾಗಿ ಬಂದ ತಕ್ಷಣ ಕೆಲಸ ಆರಂಭಿಸಲಾಗುವುದು. ∙
ಪ್ರಭಯ್ಯ ಚಿಕ್ಕಮಠ, ಬಿಇಒ –ಸದಾಶಿವ ಹಿರೇಮಠ