Advertisement

ಮುಂಡ್ಲಿ: ಗುಣಾತ್ಮಕ ಶಿಕ್ಷಣದ ಕಡೆಗೆ ಸರಕಾರಿ ಶಾಲೆಯ ಹೆಜ್ಜೆ

10:55 PM Sep 09, 2019 | Sriram |

ಅಜೆಕಾರು: ಶಿರ್ಲಾಲು ಗ್ರಾ.ಪಂ. ವ್ಯಾಪ್ತಿಯ ಜಾರ್ಕಳ ಮುಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುಕುಲ ಮಾದರಿ ಶಿಕ್ಷಣಕ್ಕೆ ಕುಟೀರ ಸಿದ್ದಗೊಳ್ಳುತ್ತಿದ್ದು ಗುಣಾತ್ಮಕ ಶಿಕ್ಷಣ ನೀಡುವ ಕಡೆಗೆ ಸರಕಾರಿ ಶಾಲೆ ದಿಟ್ಟ ಹೆಜ್ಜೆ ಇಟ್ಟಿದೆ.

Advertisement

1957ರಲ್ಲಿ ದಿ| ಲೋಕನಾಥ್‌ ಹೆಗ್ಡೆ ಅವರಿಂದ ಗುರುಕುಲ ಮಾದರಿಯಲ್ಲಿ ಆರಂಭಗೊಂಡ ಈ ಶಾಲೆ ಆಂಗ್ಲ ಮಾಧ್ಯಮ ಶಾಲೆಗಳ ತೀವ್ರ ಸ್ಪರ್ಧೆಯ ನಡುವೆಯೂ ಸಾಕಷ್ಟು ವಿದ್ಯಾರ್ಥಿಗಳನ್ನು ಹೊಂದಿದ್ದು ಪಠ್ಯದ ಜತೆಗೆ ಪಠ್ಯೇತರ ವಿಷಯಗಳಿಗೂ ಹೆಚ್ಚು ಒತ್ತು ನೀಡುತ್ತಾ ಬಂದಿದೆ.

ಕಂಪ್ಯೂಟರ್‌ ಕಲಿಕೆ, ಚಿತ್ರಕಲಾ ತರಬೇತಿ, ಕ್ರಾಫ್ಟ್, ವರ್ಲಿ ಕಲೆಗಳ ತರಬೇತಿಗಳು ಈಗಾಗಲೇ ಶಾಲೆಯಲ್ಲಿ ನಡೆಯುತ್ತಿದೆ. ಮಕ್ಕಳ ಸ್ವರಚಿತ ಕವನ, ಬರಹ, ವಿದ್ಯಾರ್ಥಿಗಳ ಅಭಿವ್ಯಕ್ತಿ ಸಂಗ್ರಹಕ್ಕೆ “ಕನಸು’ ಎಂಬ ಮಾಸ ಹಸ್ತಪತ್ರಿಕೆ, ಬುದ್ದಿಶಕ್ತಿ ಹೆಚ್ಚಿಸುವ ಗ್ರಂಥಾಲಯ, ಆಧುನಿಕ ತಂತ್ರಜ್ಞಾನದ ಸ್ಮಾರ್ಟ್‌ ಕ್ಲಾಸ್‌ ತರಬೇತಿ, ಐಡಿ ಕಾರ್ಡ್‌, ಕ್ರೀಡಾ ಸಮವಸ್ತ್ರ, ಬ್ಯಾಗ್‌, ನೋಟ್‌ ಪುಸ್ತಕ, ಊಟದ ತಟ್ಟೆಗಳನ್ನು ದಾನಿಗಳ ಮೂಲಕ ಸಂಗ್ರಹಿಸಲಾಗಿದೆ.

ಕಾರ್ಕಳ ತಾಲೂಕಿನಲ್ಲಿ ಈಗಾಗಲೇ 31 ಸರಕಾರಿ ಶಾಲೆಗಳಲ್ಲಿ ಗುಬ್ಬಚ್ಚಿ ಇಂಗ್ಲಿಷ್‌ ನ್ಪೋಕನ್‌ ತರಬೇತಿ ಆರಂಭಗೊಂಡಿದ್ದು ಮುಂಡ್ಲಿ ಶಾಲೆ ಈ ತರಗತಿ ನಡೆಸುತ್ತಿದೆ. ತಾಲೂಕಿನಲ್ಲಿ ಪ್ರಥಮವಾಗಿ ಗುರುಕುಲ ಮಾದರಿ ಶಿಕ್ಷಣ ಆರಂಭಿಸಿದ ಸರಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಹಳೆ ವಿದ್ಯಾರ್ಥಿಗಳ ಕೊಡುಗೆ
2016-17ನೇ ಸಾಲಿನಲ್ಲಿ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಕೊಡುಗೆ ಹಳೆ ವಿದ್ಯಾರ್ಥಿ ಸಂಘ ನೀಡಿದೆ. ಸುಮಾರು 1.50 ಲ.ರೂ. ವೆಚ್ಚದಲ್ಲಿ ಗುರುಕುಲ ಮಾದರಿ ಕುಟೀರ ನಿರ್ಮಾಣಗೊಳ್ಳುತ್ತಿದ್ದು ತಾ. ಪಂ. ಮಾಜಿ ಸದಸ್ಯ ಸುಜಿತ್‌ ಶೆಟ್ಟಿ ಅವರು ಮಾಜಿ ಶಾಸಕ ಎಚ್‌. ಗೋಪಾಲ್‌ ಭಂಡಾರಿಯವರ ಸ್ಮರಣಾರ್ಥ ಕೊಡುಗೆ, ಸೌಹಾರ್ದ ಫ್ರೆಂಡ್ಸ್‌ ಕ್ಲಬ್‌ ಜಾರ್ಕಳ ಮುಂಡ್ಲಿ, ಯುವ ಸ್ಪಂದನ ಗೆಳೆಯರ ಬಳಗ ಜಾರ್ಕಳ ಮುಂಡ್ಲಿ, ಗ್ರಾಮಸ್ಥರು ಶಾಲಾಭಿವೃದ್ಧಿಯಲ್ಲಿ ಶ್ರಮಿಸುತ್ತಿದ್ದಾರೆ.

Advertisement

ಗುಣಮಟ್ಟದ ಶಿಕ್ಷಣ
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಮೂಲ ಸೌಕರ್ಯದೊಂದಿಗೆ ಗುಣಮಟªದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದೊಂದಿಗೆ ಮಾಜಿ ಶಾಸಕ ಎಚ್‌. ಗೋಪಾಲ್‌ ಭಂಡಾರಿಯವರ ಸವಿನೆನಪಿಗಾಗಿ ಕುಟೀರ ನಿರ್ಮಿಸಿ ಕೊಡಲಾಗುತ್ತಿದೆ. ಶಾಲೆಯಲ್ಲಿರುವ ಶಿಕ್ಷಕರು ಈಗಾಗಲೇ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಸರಕಾರ ಕೊರತೆಯಿರುವ ಶಿಕ್ಷಕರನ್ನು ನೇಮಿಸಬೇಕಾಗಿದೆ.
-ಸುಜೀತ್‌ ಶೆಟ್ಟಿ,ಮಾಜಿ ಸದಸ್ಯ,ತಾ.ಪಂ.ಕಾರ್ಕಳ

ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ
ಹಿರಿಯರು ಹೋರಾಡಿ ನಿರ್ಮಿಸಿದ ಸರಕಾರಿ ಶಾಲೆ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಹಳೆ ವಿದ್ಯಾರ್ಥಿ, ಗ್ರಾಮಸ್ಥರದ್ದು. ಗ್ರಾಮದ ಏಕೈಕ ಸರಕಾರಿ ಶಾಲೆ ಉಳಿಸಲು ಗ್ರಾಮಸ್ತರು ಸಹಕಾರ ನೀಡುತ್ತಿದ್ದು ಮಕ್ಕಳ ಮೂಲಭೂತ ಅವಶ್ಯಕತೆ ಪೂರೈಸಿ ಗುಣಾತ್ಮಕ ಶಿಕ್ಷಣ ನೀಡುವ ಬಗ್ಗೆ ಆದ್ಯತೆ ನೀಡಲಾಗಿದೆ.
-ಪ್ರಜ್ವಲ್‌ ಕುರ್ಮಾ ಜೈನ್‌,ಹಳೆ ವಿದ್ಯಾರ್ಥಿ

ಜಗದೀಶ್‌ ರಾವ್‌ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next