Advertisement

ಸರ್ಕಾರಿ ಶಾಲಾ ಮಕ್ಕಳಿಗೂ ಸಿಗಲಿದೆ ಶಾಲಾಡೈರಿ

06:15 AM Sep 29, 2018 | |

ಬೆಂಗಳೂರು : ಖಾಸಗಿ ಶಾಲೆಗಳ ಮಾದರಿಯಲ್ಲೇ ಸರ್ಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಮೇಲ್ವಿಚಾರಣೆ ಹಾಗೂ ಪಾಲಕ- ಪೋಷಕರೊಂದಿಗೆ ಶಿಕ್ಷಕರು ನಿಯಮಿತವಾಗಿ ಮಾಹಿತಿ ವಿನಿಯಮಕ್ಕೆ  ಪೂರಕವಾಗುವ ಡೈರಿ ವ್ಯವಸ್ಥೆ ಜಾರಿಗೆ ತರಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

Advertisement

ಪ್ರಸಕ್ತ ಸಾಲಿನಿಂದಲೇ  ಈ ಯೋಜನೆ ಅನುಷ್ಠಾನಕ್ಕೆ ಬರಲಿದ್ದು, ದಸರಾ ರಜೆ ಮುಗಿದ ನಂತರ ಅಕ್ಟೋಬರ್‌ ಅಂತ್ಯದೊಳಗೆ ಸರ್ಕಾರಿ ಶಾಲೆಗಳ ಒಂದರಿಂದ  ಹತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಡೈರಿ ಸಿಗಲಿದೆ. ಈಗಾಗಲೇ ಡೈರಿ ಮುದ್ರಣಕ್ಕೆ ರಾಜ್ಯ ಸರ್ಕಾರ ಅನುಮತಿ ಸಹ ನೀಡಿದೆ.

2017-18ನೇ ಸಾಲಿನ ಡೈಸ್‌ ವರದಿಯ ಪ್ರಕಾರ ರಾಜ್ಯದಲ್ಲಿ 43,712 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 4,681 ಪ್ರೌಢಶಾಲೆ ಸೇರಿದಂತೆ 48,393 ಶಾಲೆಗಳಿವೆ. ಪ್ರಾಥಮಿಕ ಶಾಲೆಗಳಲ್ಲಿ 18,56,916 ವಿದ್ಯಾರ್ಥಿಗಳು ಹಾಗೂ 20,03,287 ವಿದ್ಯಾರ್ಥಿನಿಯರು , ಪ್ರೌಢಶಾಲೆಯಲ್ಲಿ 2,97,687 ವಿದ್ಯಾರ್ಥಿಗಳು ಹಾಗೂ  2,99,645 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು  44,57,535 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೂ ಡೈರಿ ಸಿಗಲಿದೆ.

ಪ್ರಸ್ತಾವನೆ
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲ ಹಾಗೂ ಪಾಲಕ, ಪೋಷಕರು ಮತ್ತು ಶಿಕ್ಷಕರ ನಡುವಿನ ನಿಯಮತಿ ಸಂವಾಹನಕ್ಕೆ ಪೂರಕವಾಗಿಸಲು ಎಲ್ಲ ವಿದ್ಯಾರ್ಥಿಗಳಿಗೂ ಡೈರಿ ನೀಡುವ ಅವಶ್ಯಕತೆ ಇದೆ ಎಂಬ ಅಂಶವನ್ನು ಉಲ್ಲೇಖೀಸಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ವಿಸ್ತೃತವಾದ ಪ್ರಸ್ತಾವನೆ  ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಸರ್ಕಾರದಿಂದ ಅದರ ಪರಿಶೀಲನೆ ನಡೆಸಿ, ಇತ್ತೀಚೆಗೆ ಒಪ್ಪಿಗೆ ನೀಡಲಾಗಿದೆ.

ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಡೈರಿ ಹೊಸತಲ್ಲ. ಅಲ್ಲಿನ ಶಿಕ್ಷಕರು, ಮಕ್ಕಳ ಮನೆಕೆಲಸ(ಹೋಂವರ್ಕ್‌) ಸಹಿತವಾಗಿ ಎಲ್ಲ ಮಾಹಿತಿ ಡೈರಿಯಲ್ಲೇ ಬರೆದು ಕಳುಹಿಸುತ್ತಾರೆ. ಪಾಲಕ, ಪೋಷಕರು ಡೈರಿ ನೋಡಿಯೇ ಮಕ್ಕಳಿಗೆ ಮನೆಯಲ್ಲಿ ಏನು ಕಲಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಇದೇ ಮಾದರಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಲ್ಲೂ ವ್ಯವಸ್ಥೆ ಇರಬೇಕು ಎಂಬ ಉದ್ದೇಶದಿಂದ ಡೈರಿ ನೀಡಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

Advertisement

ಸರ್ಕಾರಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಡೈರಿ ವಿತರಣೆ ಮಾಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಬೇಕಿರುವ ಎಲ್ಲ ಡೈರಿಗಳ  ಮುದ್ರಣ ಕಾರ್ಯ ಆರಂಭವಾಗಿದೆ. ಮುದ್ರಣ ಪ್ರಕ್ರಿಯೆ ಪೂರ್ಣಗೊಂಡ ನಂತರ, ಜಿಲ್ಲಾ ಉಪನಿರ್ದೇಶಕರ ಮೂಲಕ, ಕ್ಷೇತ್ರಶಿಕ್ಷಣಾಧಿಕಾರಿಗಳ ಸಹಕಾರದೊಂದಿಗೆ ಎಲ್ಲ ಶಾಲೆಗಳಿಗೂ ವಿತರಣೆಯಾಗಲಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಅರ್ಧಭಾಗ ಬಹುತೇಕ ಮುಗಿದಿದೆ. ಅಲ್ಲದೆ, ಅಕ್ಟೋಬರ್‌ ಮೊದಲ ವಾರದಿಂದ ದಸರಾ ರಜೆ ಕೂಡ ಆರಂಭವಾಗಲಿದೆ. ಹೀಗಾಗಿ ದಸರಾ ರಜೆ ಮುಗಿದ, ಶಾಲಾ ಪುರನಾರಂಭದ ಸಂದರ್ಭದಲ್ಲಿ ಡೈರಿ ವಿತರಣೆ ಮಾಡಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಡೈರಿಯಲ್ಲಿ ಏನೇನಿದೆ?
ವಿದ್ಯಾರ್ಥಿಗಳ ನಿತ್ಯದ ಚುಟುವಟಿಕೆ, ರಜಾದಿನಗಳು, ಪ್ರಮುಖ ಹಬ್ಬಗಳು, ಖ್ಯಾತ ವ್ಯಕ್ತಿಗಳ ಜನ್ಮದಿನದ ಮಾಹಿತಿಯ ಜತೆಗೆ ಶೈಕ್ಷಣ ವ್ಯವಸ್ಥೆಯ ಸುಧಾರಣೆಗೆ ಪಾಲಕ, ಪೋಷಕರು ಸಲಹೆಗಳನ್ನು ನೀಡಬಹುದಾದ ವ್ಯವಸ್ಥೆ ಡೈರಿಯಲ್ಲಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಸಂಬಂಧಿಸಿದ ಹೋಂವರ್ಕ್‌ ಮಾಹಿತಿ, ಪ್ರಗತಿ ಪರಿಶೀಲನೆಯ ವಿವರವೂ ಡೈರಿಯಲ್ಲಿ ಇರಲಿದೆ. ವಿದ್ಯಾರ್ಥಿಗಳು ನಿತ್ಯವೂ ಪಠ್ಯಪುಸ್ತಕದ ಜತೆಗೆ ಡೈರಿಯನ್ನು ಶಾಲೆಗೆ ಕೊಂಡೊಯ್ಯಬೇಕು. ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಡೈರಿ ವಿತರಣೆಗೆ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕ ಪಠ್ಯಪುಸ್ತಕ ಸಂಘದಲ್ಲಿ ಮುದ್ರಣ ಕಾರ್ಯ ಆರಂಭವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ಬೇಕಾದ ಅಂಶಗಳು ಡೈರಿಯಲ್ಲಿರಲಿದೆ. ಈ ಶೈಕ್ಷಣಕ ವರ್ಷದಲ್ಲೇ ವಿತರಣೆ ನಡೆಯಲಿದೆ.
– ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ.

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next