ಮಲೆನಾಡಿನ ಕಾಡಿನ ರಸ್ತೆಗಳಲ್ಲಿ ಓಲಾಡುತ್ತಾ ಬರುವ ಈ ಬಸ್ಸೆಂದರೆ ಹಳ್ಳಿ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಶಾಲೆಗೆ ಒಂದು ಗಂಟೆ ಇರುವ ಮುನ್ನವೇ ಮನೆ ಬಾಗಿಲಿಗೇ ಬರುವ ಪುಷ್ಪಕ ವಿಮಾನವಿದು. ಪುಟ್ಟ ಪುಟ್ಟ ಮಕ್ಕಳನ್ನು ಕೈಹಿಡಿದು ಎತ್ತಿಕೊಳ್ಳುವ ಕಂಡಕ್ಟರ್, ಯಾವತ್ತೂ ಟಿಕೆಟ್ ತೆಗೆದುಕೊಳ್ಳೋದಿಲ್ಲ. ಕಾನ್ವೆಂಟ್ ಬಸ್ಸುಗಳಿಗಿಂತಲೂ ಜತನದಿಂದ ಕೂರಿಸಿಕೊಂಡು, ಶಾಲೆಯ ಬುಡಕ್ಕೆ ಮಕ್ಕಳನ್ನು ಬಿಡುವ ಬಸ್‌ನ ಸಿಬ್ಬಂದಿಯ ಶ್ರದ್ಧೆ ಸುತ್ತಲಿನ ಹತ್ತಾರು ಹಳ್ಳಿಗೆ ಅಚ್ಚುಮೆಚ್ಚು.
ಅದು ಶೃಂಗೇರಿ ಸಮೀಪದ ಮೆಣಸೆ. ಹಳೇ ಸರ್ಕಾರಿ ಶಾಲೆ ಈ ಊರಿನ ಸೌಂದರ್ಯಗಳಲ್ಲಿ ಒಂದು. ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ ಈ ಶಾಲೆಗೆ ಈಗ 80ರ ಸಂಭ್ರಮ. ಈಗಲೂ ಸುತ್ತಮುತ್ತಲಿನ ಹಳ್ಳಿಯ ಮಕ್ಕಳು ಮೆಣಸೆ ಶಾಲೆಯತ್ತ ಮುಖಮಾಡಲು ಕಾರಣಗಳು ಹಲವು. ಅವುಗಳಲ್ಲಿ ಈ ಬಸ್ ಕೂಡ ಒಂದು. ಅಂದಹಾಗೆ, ಸರ್ಕಾರಿ ಬಸ್ ಹೊಂದಿರುವ ರಾಜ್ಯದ ಏಕೈಕ ಶಾಲೆ ಇದಾಗಿದೆ.
ಇಲ್ಲಿನ ಹಳ್ಳಿಗಳೆಂದರೆ ಪಕ್ಕಾ ಕಗ್ಗಾಡು. ರಸ್ತೆಗಳು ನೆಟ್ಟಗಿಲ್ಲ. ಟಾರು ಕಾಣದ ರಸ್ತೆಗಳೂ ಹಳ್ಳಿಗಳಿಗೆ ಸಂಪರ್ಕ ಬೆಸೆದಿವೆ. ಒಂದು ಊರಿಗೆ ಒಂದೋ, ಎರಡು ಮನೆ. ಅಲ್ಲಿರುವ ಮಕ್ಕಳನ್ನು ಹೊತ್ತು ತರುವ ಈ “ಬಸ್‌ಭೀಮ’, ಮೆಣಸೆ ಶಾಲೆಗೆ ಅಮೂಲ್ಯ ವರ. ಶಾಸಕರ ಮಾದರಿ ಶಾಲೆಯೂ ಆಗಿರುವ ಈ ಅಕ್ಷರ ದೇಗುಲಕ್ಕೆ 6 ವರ್ಷದ ಹಿಂದೆ ಎನ್‌ಆರ್‌ಐ ಮಾಜಿ ಉಪಾಧ್ಯಕ್ಷೆ ಡಾ. ಆರತಿಕೃಷ್ಣ ಬಸ್ ನೀಡಿದ್ದರು.
ಪ್ರಸಕ್ತ ವರ್ಷ ಸರ್ಕಾರದಿಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್, ಮಕ್ಕಳನ್ನು ಹೊತ್ತು ತರುತ್ತಿದೆ. ಪ್ರತಿದಿನ ಈ ಬಸ್ 50-55 ಕಿ.ಮೀ. ಸಂಚರಿಸುತ್ತದೆ. ಚಾಲಕ ಬಾಬು ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆ ತರುವುದರಲ್ಲಿ ಖುಷಿ ಕಾಣುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಕೊರತೆಯಿಂದ ಪ್ರಾಥಮಿಕ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಇಂಥ ಬಸ್ ಸೇವೆ ಇಲ್ಲಿ ಆಶಾಕಿರಣ ಮೂಡಿಸಿದೆ.
* ರಮೇಶ್ ಕುರುವಾನ್ನೆ, ಶೃಂಗೇರಿ