Advertisement

ಎಸ್.ಡಿ.ಎಂ.ಸಿ.ಗಳು ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸುವಂತಿಲ್ಲ: ಕಟ್ಟುನಿಟ್ಟಿನ ಸೂಚನೆ

09:46 PM Aug 17, 2020 | Hari Prasad |

ಬೆಂಗಳೂರು: ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ.

Advertisement

ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಆನ್ ಲೈನ್ ಶಿಕ್ಷಣವನ್ನು ನಡೆಸಲು ರಾಜ್ಯ ಸರಕಾರ ಷರತ್ತುಬದ್ಧ ಅನುಮತಿಯನ್ನೂ ನೀಡಿದೆ.

ಮಾತ್ರವಲ್ಲದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಪೋಷಕರಿಂದ ಶುಲ್ಕವನ್ನು ಬಲವಂತವಾಗಿ ಪಡೆದುಕೊಳ್ಳುವಂತಿಲ್ಲ ಎಂದೂ ಸರಕಾರ ಈಗಾಗಲೇ ಸೂಚಿಸಿದೆ.

ಇವೆಲ್ಲದರ ನಡುವೆ, ರಾಜ್ಯದಲ್ಲಿರುವ ಹಲವು ಶಾಲೆಗಳಲ್ಲಿ ಎಸ್.ಡಿ.ಎಂ.ಸಿ. ಸಮಿತಿಯು ವಿದ್ಯಾರ್ಥಿಗಳಿಂದ ದೇಣಿಗೆಯನ್ನು ಸಂಗ್ರಹಿಸುವುದಕ್ಕೆ ನಿರ್ಬಂಧ ವಿಧಿಸಿ ರಾಜ್ಯ ಸರಕಾರ ಇಂದು ಸುತ್ತೋಲೆಯನ್ನು ಹೊರಡಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ, ರಾಜ್ಯದ ಹಲವು ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಸಮಿತಿ ಸದಸ್ಯರು ಶಾಲಾ ವಿದ್ಯಾರ್ಥಿಗಳಿಂದ ದೇಣಿಗೆಯನ್ನು ಸಂಗ್ರಹಿಸುತ್ತಿರುವುದು ಕಂಡುಬಂದಿತ್ತು.

Advertisement

ಆದರೆ ಇಂತಹ ಚಟುವಟಿಕೆಗಳು ಎಸ್.ಡಿ.ಎಂ.ಸಿ. ಸಮಿತಿ ಅಧಿಕಾರಗಳ ವ್ಯಾಪ್ತಿಯಲ್ಲಿ ಬರದೇ ಇರುವುದರಿಂದ ಈ ರೀತಿ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸುವುದು ಸರಿಯಲ್ಲ ಎಂಬುದನ್ನು ಮನಗಂಡಿರುವ ರಾಜ್ಯಸರಕಾರವು ಇಂತಹ ಪ್ರಕರತಣಗಳನ್ನು ಕೂಡಲೇ ನಿಲ್ಲಿಸುವಂತೆ ಎಲ್ಲಾ ಶಾಲೆಗಳಿಗೆ ಸೂಚನೆ ನೀಡುವಂತೆ ಚರ್ಚೆಯಾಗಿತ್ತು.

ಈ ಪ್ರಕಾರವಾಗಿ ಉಲ್ಲೇಖಿತ ಸರಕಾರದ ಅಧಿಸೂಚನೆಯ ಉಪವಿಧಿ ಸಂಖ್ಯೆ 10 ‘ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧಿಕಾರಗಳು ಹಾಗೂ ಪ್ರಕಾರ್ಯಗಳು’ ಇದರ ಕ್ರಮ ಸಂಖ್ಯೆ ಆರ್ ಪ್ರಕಾರ ‘ಈ ಉಪವಿಧಿಗಳ 10ನೇ ಕ್ಲಾಸ್ ನಲ್ಲಿ ನಮೂದಿಸಲಾಗಿರುವಂತೆ ಎಸ್.ಡಿ.ಎಂ.ಸಿ. ಸಮಿತಿಗಳು ತನ್ನ ಚಟುವಟಿಕೆಗಳ ಮುಂದುವರಿಕೆಗಾಗಿ ಹಣ ಮತ್ತು ನಿಧಿಗಳನ್ನು ಪಡೆಯಲು ಮನವಿ ಮತ್ತು ಅರ್ಜಿಗಳನ್ನು ನೀಡುವುದು ಹಾಗೂ ನಗದು ರೂಪದಲ್ಲಿ ಯಾವುದೇ ದಾನಗಳು ಅಥವಾ ದೇಣಿಗೆಗಳು, ಭದ್ರತೆಗಳು ಅಥವಾ ಚರ ಮತ್ತು ಸ್ಥಿರ ಆಸ್ತಿಗಳ ರೂಪದಲ್ಲಿ ಯಾವುದೇ ಸ್ವತ್ತನ್ನು ಸ್ವೀಕರಿಸುವುದು, ಸಂಗ್ರಹಿಸುವುದು ಹಾಗೂ ಅಂಗೀಕರಿಸುವುದು ಮತ್ತು ಅವುಗಳನ್ನು ತನ್ನ ಕಾರ್ಯ ಚಟುವಟಿಕೆಗಳಿಗೆ ಖರ್ಚು ಮಾಡುವುದಕ್ಕಿರುವ ಅವಕಾಶವನ್ನು ಶಾಲಾ ಮಕ್ಕಳ ಪೋಷಕರಿಂದ ಸಂಗ್ರಹಿಸುವುದು ಎನ್ನುವ ಅರ್ಥದ್ದಲ್ಲ’ ಎಂದು ತಿಳಿಸಲಾಗಿದೆ.

ಈ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ದೇಣಿಗೆಯನ್ನು ಸಂಗ್ರಹಿಸುವುದು ಅಥವಾ ಯಾವುದೇ ಚಟುವಟಿಕೆಗಳಿಗೆ ಮಕ್ಕಳಿಂದ ಅನುದಾನ ಕೋರುವುದಕ್ಕೆ ಎಸ್.ಡಿ.ಎಂ.ಸಿ. ನಿಯಮಗಳಲ್ಲಿ ಅವಕಾಶ ಇರುವುದಿಲ್ಲ.

ಮತ್ತು ಈ ರೀತಿಯಾಗಿ ಮಕ್ಕಳಿಂದ ದೇಣಿಗೆ ಸಂಗ್ರಹಿಸುವ ಕ್ರಮ ಮಕ್ಕಳ ಭಾವನಾತ್ಮಕ ಮನಸ್ಸಿನ ಮೇಲೆ ನೋವನ್ನುಂಟುಮಾಡುವ ಸಾಧ್ಯತೆಗಳಿರುತ್ತವೆ ಹಾಗೂ ತಪ್ಪು ಸಂದೇಶ ಹರಡುವಿಕೆಗೂ ಕಾರಣವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿನ ಯಾವುದೇ ಶಾಲೆಗಳಲ್ಲಿ ಇಂತಹ ಪ್ರಕರಣಗಳಿಗೆ ಅವಕಾಶ ನೀಡಬಾರದು ಎಂದು ರಾಜ್ಯ ಸರಕಾರ ತನ್ನ ಸೂಚನೆಯಲ್ಲಿ ಕಟ್ಟುನಿಟ್ಟಾಗಿ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next