Advertisement

ಗುಣಮಟ್ಟದ ಹೋಮಿಯೋಪಥಿ ಶಿಕ್ಷಣ ಸರ್ಕಾರದ ಹೊಣೆ

06:12 AM Feb 01, 2019 | |

ಬೆಂಗಳೂರು: ಹೋಮಿಯೋಪಥಿ ಕಲಿಯುವ ವಿದ್ಯಾರ್ಥಿಗಳಿಗೆ ರಾಜ್ಯದಲ್ಲೇ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ರಾಜ್ಯಪಾಲ ವಿ.ಆರ್‌.ವಾಲಾ ಅಭಿಪ್ರಾಯಪಟ್ಟರು.

Advertisement

ನಗರದ ಗಾಂಧಿಭವನದಲ್ಲಿ ಗುರುವಾರ ಕರ್ನಾಟಕ ಹೋಮಿಯೋಪಥಿಕ್‌ ಮೆಡಿಕಲ್‌ ಅಸೋಸಿಯೇಷನ್‌ಗೆ ಚಾಲನೆ ನೀಡಿ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಲೋಪತಿ ಪದ್ಧತಿಗಿಂತಲೂ ಹೋಮಿಯೋಪಥಿ ಪದ್ಧತಿ ಉತ್ತಮವಾಗಿದ್ದು, ಗುಣವಾಗದ ಹಲವು ಕಾಯಿಲೆಗಳು ಹೋಮಿಯೋಪಥಿ ಔಷಧಿಗಳಿಂದ ಗುಣವಾಗಿವೆ ಎಂದು ಹೇಳಿದರು. 

ಹೋಮಿಯೋಪಥಿ ಕಲಿಯಬೇಕೆಂಬ ಆಸಕ್ತಿ ಹೊಂದಿರುವ ಮಕ್ಕಳಿಗೆ ರಾಜ್ಯದಲ್ಲಿಯೇ ಉತ್ತಮ ಸೌಲಭ್ಯಗಳನ್ನು ಒದಗಿಸಿ, ಗುಣಮಟ್ಟದ ಶಿಕ್ಷಣ ನೀಡಬೇಕು. ಈ ವಿಷಯ ಕಲಿಯಲು ರಾಜ್ಯದ ವಿದ್ಯಾರ್ಥಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಾರೆ ಎಂದರೆ ಅದು ರಾಜ್ಯ ಸರ್ಕಾರಕ್ಕೆ ಗುತ್ತಿರುವ ಅಪಮಾನ ಎಂದು ಅಭಿಪ್ರಾಯಪಟ್ಟರು.

“ಕೋಮಾ ಸ್ಥಿತಿ ತಲುಪಿದ್ದ ಸಂಬಂಧಿಕರ ಮಗುವೊಂದು ಅಲೋಪತಿ ಔಷಧಗಳಿಂದ ಗುಣವಾಗಲಿಲ್ಲ. ಕೊನೆಗೆ ಹೋಮಿಯೋಪಥಿ ಔಷಧ ಬಳಸಲು ಆರಂಭಿಸಿದಾಗ ಕ್ರಮೇಣ ದೃಷ್ಟಿ, ಸ್ಪರ್ಶ ಬಂದವು. ಆ ಮಗುವಿಂದು ನಗು ನಗುತ್ತಾ ಓಡಾಗುತ್ತಿದೆ. ಅದೇ ರೀತಿ ನನ್ನ ಪತ್ನಿಯೂ ಒಮ್ಮೆ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು.

ಈ ವೇಳೆ ವೈದ್ಯರು ರಕ್ತ ಹೆಪ್ಪುಗಟ್ಟಿದ್ದು, ಶಸ್ತ್ರಚಿಕಿತ್ಸೆ ಅನಿವಾರ್ಯ ಎಂದಿದ್ದರು. ಆದರೆ, ಹೋಮಿಯೋಪಥಿ ವೈದ್ಯರು ನೀಡಿದ ಮಾತ್ರೆ ಬಳಕೆ ಮಾಡಿದ ಮೂರು ಗಂಟೆಗಳಲ್ಲಿ ಆಕೆ ಹುಷಾರಾಗಿ, ನಾನು ಎಲ್ಲಿದ್ದೇನೆ ಎಂದು ಕೇಳಿದ್ದಳು. ನೀನು ಸ್ಮಶಾನದಲ್ಲಿದ್ದೀಯ, ನಿನ್ನನ್ನು ಸುಡಲು ತಂದಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದೆ,’ ಎಂದು ಸ್ಮರಿಸಿದರು.

Advertisement

ಹದಿನೈದು ದಿನಗಳಲ್ಲಿ ಕೂದಲು ಬೆಳೆದವು: ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯೊಬ್ಬಳು ಅಮೆರಿಕ, ಲಂಡನ್‌ನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಹೋಮಿಯೋಪಥಿ ಚಿಕಿತ್ಸೆ ಪಡೆದ ಕೇವಲ 15 ದಿನಗಳಲ್ಲಿ ಕೂದಲು ಬೆಳೆಯಲಾರಂಭಿಸಿದವು ಎಂದ ರಾಜ್ಯಪಾಲರು, ವೈದ್ಯರು ಸತ್ತ ನಂತರ ಅವರ ಜ್ಞಾನವೂ ಅವರೊಂದಿಗೆ ಮಣ್ಣಾಗುತ್ತದೆ.

ಹೀಗಾಗಿ ವೈದ್ಯರು ತಮ್ಮ ಜ್ಞಾನವನ್ನು ಕಿರಿಯರಿಗೆ ಧಾರೆ ಎರೆಯಬೇಕು ಎಂದು ಸಲಹೆ ನೀಡಿದರು. ಅಸೋಸಿಯೇಷನ್‌ನ ಅಧ್ಯಕ್ಷ ಡಾ.ವೀರಬ್ರಹ್ಮಾಚಾರಿ ಮಾತನಾಡಿ, ಹೋಮಿಯೋಪಥಿ ಅತ್ಯಂತ ಕಡಿಮೆ ವೆಚ್ಚ ಹಾಗೂ ಪ್ರಾಕೃತಿಕವಾಗಿ ತಯಾರಿಸಿದ ಔಷಧಿಗಳನ್ನು ಒದಗಿಸುತ್ತಿದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಈ ಔಷಧಗಳು ಜನರಿಗೆ ತಲುಪಿಸಲು ಹೋಮಿಯೋಪಥಿ ಚಿಕಿತ್ಸಾಲಯಗಳ ಸಂಖ್ಯೆ ಸರ್ಕಾರ ಹೆಚ್ಚಿಸಬೇಕು.

ಜತೆಗೆ ರಾಜ್ಯದಲ್ಲಿರುವ ಏಕೈಕ ಹೋಮಿಯೋಪಥಿ ಕಾಲೇಜು ಅಭಿವೃದ್ಧಿಪಡಿಸುವ ಜತೆಗೆ, ಉತ್ತರ ಕರ್ನಾಟಕದಲ್ಲಿ ಒಂದು ಕಾಲೇಜು ನಿರ್ಮಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಕೇಂದ್ರ ಹೋಮಿಯೋಪಥಿ ಆಯೋಗದ ಮಾಜಿ ಅಧ್ಯಕ್ಷ  ಡಾ.ಎಸ್‌.ಪಿ.ಬಕ್ಷಿ ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ಔಷಧಗಳ ಬಳಕೆ 20 ಪಟ್ಟು ಹೆಚ್ಚಾಗಿದ್ದು, ವಂಶವಾಯಿ ಕಾಯಿಲೆಗಳು ಸೇರಿದಂತೆ ಗುಣವಾಗದ ಹಲವು ಕಾಯಿಲೆಗಳಿಗೆ ಹೋಮಿಯೋಪಥಿ, ಔಷಧಗಳನ್ನು ಒದಗಿಸಿದೆ.

ಜತೆಗೆ ಅಸ್ತಮಾ ಹೋಮಿಯೋಪಥಿಯಿಂದ ಮಾತ್ರ ಗುಣವಾಗಲು ಸಾಧ್ಯ ಎಂಬುದು ಶ್ಲಾಘನೀಯವಾಗಿದ್ದು, ಸರ್ಕಾರಗಳು ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ.ನಿರಂಜನ ಕುರ್ಕಿಮಠ, ಕಾರ್ಯಾಧ್ಯಕ್ಷ ಡಾ.ಎ.ರಾಜೇಶ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next