Advertisement

ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ

09:07 PM Dec 26, 2024 | Team Udayavani |

ನವದೆಹಲಿ: ರಾಷ್ಟ್ರ ಲಾಂಛನ, ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿ ಅವರ ಫೋಟೋಗಳ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅಪರಾಧಿಗಳಿಗೆ 5 ಲಕ್ಷ ರೂ.ವರೆಗೆ ದಂಡ ಹಾಗೂ ಜೈಲು ಶಿಕ್ಷೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿದೆ. ಇದಕ್ಕಾಗಿ ಅಸ್ತಿತ್ವದಲ್ಲಿರುವ ಈ ಕುರಿತಾದ 2 ಕಾನೂನುಗಳನ್ನು ವಿಲೀನಗೊಳಿಸಿ ಒಂದೇ ಇಲಾಖೆಯ ವ್ಯಾಪ್ತಿಗೆ ಬರುವಂತೆ ಮಾಡಲು ಯೋಜಿಸಿದೆ ಎಂದೂ ಮೂಲಗಳು ತಿಳಿಸಿವೆ.

Advertisement

ಪ್ರಸಕ್ತ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿ ರಾಷ್ಟ್ರ ಲಾಂಛನ (ದುರ್ಬಳಕೆ ತಡೆ) ಕಾಯ್ದೆ -2005 ಇದ್ದರೆ, ಲಾಂಛನ ಹಾಗೂ ಹೆಸರುಗಳ (ದುರ್ಬಳಕೆ ತಡೆ) ಕಾಯ್ದೆ -1950 ಅನ್ನು ಗ್ರಾಹಕ ವ್ಯವಹಾರಗಳ ಸಚಿವಾಲಯ ನಿರ್ವಹಿಸುತ್ತಿದೆ. ಈ ಕಾನೂನುಗಳನ್ನು ಉಲ್ಲಂಘಿಸಿದರೆ ಬರೀ 500 ರೂ. ದಂಡ ವಿಧಿಸಲಾಗುತ್ತಿದೆ.

ಇದು ಪರಿಣಾಮಕಾರಿಯಲ್ಲದ ಕಾರಣ ಎರಡೂ ಕಾನೂನುಗಳನ್ನು ವಿಲೀನಗೊಳಿಸುವ ಸಲಹೆಯನ್ನು ಇತ್ತೀಚೆಗೆ ನಡೆದ ಸಚಿವ ಸಂಪುಟದ ಆಂತರಿಕ ಸಭೆಯಲ್ಲಿ ನೀಡಲಾಗಿತ್ತು. ಇದನ್ನು ಸರ್ಕಾರ ಪರಿಗಣಿಸಿದ್ದು, ಶೀಘ್ರವೇ ಈ ಬಗ್ಗೆ ಅಂತಿಮ ನಿರ್ಣಯ ಹೊರಡಿಸಿ, ತಿದ್ದುಪಡಿ ತರಲಿದೆ ಎಂದು ಮೂಲಗಳು ಹೇಳಿವೆ.

ಪ್ರಸಕ್ತ ಕಾನೂನು ಉಲ್ಲಂಘನೆಗೆ 2 ವರ್ಷ ಶಿಕ್ಷೆ, 5000ರೂ.ಗಳವರೆಗೆ ದಂಡ ವಿಧಿಸಬೇಕೆಂಬ ನಿಯಮವನ್ನು ರಾಷ್ಟ್ರ ಲಾಂಛನ (ದುರ್ಬಳಕೆ ತಡೆ) ಕಾಯ್ದೆ -2005 ಒಳಗೊಂಡಿದೆ. ಇನ್ನು, ಗ್ರಾಹಕ ವ್ಯವಹಾರಗಳ ಸಚಿವಾಲಯವು 2019ರಲ್ಲಿ ಲಾಂಛನ ಹಾಗೂ ಹೆಸರುಗಳ (ದುರ್ಬಳಕೆ ತಡೆ) ಕಾಯ್ದೆ -1950ಕ್ಕೆ ತಿದ್ದುಪಡಿ ತಂದು ಅಪರಾಧಿಗಳಿಗೆ 1 ಲಕ್ಷ ರೂ. ದಂಡ, ಅಪರಾಧ ಪುನರಾವರ್ತನೆ ಆದರೆ 5 ಲಕ್ಷ ರೂ ದಂಡ ಹಾಗೂ 6 ತಿಂಗಳ ಜೈಲು ಶಿಕ್ಷೆ ವಿಧಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಿತ್ತು. ಈಗ ಈ ಸಲಹೆಗಳನ್ನು ಆಧರಿಸಿಯೇ ಸೂಕ್ತ ತಿದ್ದುಪಡಿ ತರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಯಾವ ರೀತಿ ದುರ್ಬಳಕೆ?
– ವ್ಯಕ್ತಿಯು ವ್ಯಾಪಾರ, ವಹಿವಾಟು ಅಥವಾ ಸ್ವಂತ ಲಾಭಕ್ಕೆ ಬಳಸುವುದು
– ಯಾವುದೇ ಉತ್ಪನ್ನವು ಸರ್ಕಾರಕ್ಕೆ ಸಂಬಂಧಿಸಿದ್ದೆಂದು ಬಿಂಬಿಸಲು ಪ್ರಯತ್ನಿಸುವುದು
– ಸರ್ಕಾರದ ಅನುಮತಿ ಇಲ್ಲದೆ ಟ್ರೇಡ್‌ಮಾರ್ಕ್‌, ಪೇಟೆಂಟ್‌ಗೆ ಬಳಸುವುದು
– ಲಾಂಛನ ವಿನ್ಯಾಸ ಇರುವ ಸಂಸ್ಥೆಗಳನ್ನು ವೈಯಕ್ತಿವಾಗಿ ನೋಂದಣಿ ಮಾಡುವುದು

Advertisement
Advertisement

Udayavani is now on Telegram. Click here to join our channel and stay updated with the latest news.

Next