Advertisement

3 ವರ್ಷಗಳಿಂದ ಪಾವತಿಯಾಗಿಲ್ಲ ಭತ್ತೆ!

02:47 AM Jun 29, 2020 | Sriram |

ಮಂಗಳೂರು: ರಾಜ್ಯಾದ್ಯಂತ ಇರುವ ಸರಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರ ಭತ್ತೆ 3 ವರ್ಷಗಳಿಂದ (2017 ರಿಂದ) ಪಾವತಿಯಾಗದೆ ಬಾಕಿ ಇದ್ದು, ಉಪನ್ಯಾಸಕರು ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.

Advertisement

ತಾಂತ್ರಿಕ ಶಿಕ್ಷಣ ಇಲಾಖೆಯ ಅಂಕಿ- ಅಂಶಗಳ ಪ್ರಕಾರ 3 ವರ್ಷಗಳಲ್ಲಿ ಅರೆಕಾಲಿಕ ಉಪನ್ಯಾಸಕರಿಗೆ ಪಾವತಿಸಲು ಬಾಕಿ ಇರುವ ಮೊತ್ತ 10.33 ಕೋಟಿ ರೂ.! ಭತ್ತೆ ಪಾವತಿಗೆ ಬೇಕಾಗಿರುವ ಒಟ್ಟು 33.20 ಕೋಟಿ ರೂ.ಗಳ ಪೈಕಿ 22.86 ಕೋಟಿ ರೂ. ಬಿಡುಗಡೆ ಆಗಿದ್ದು ಕೆಲವು ಪಾಲಿಟೆಕ್ನಿಕ್‌ಗಳ ಉಪನ್ಯಾಸಕರಿಗೆ ಕೆಲವು ತಿಂಗಳಲ್ಲಿ ಪಾವತಿ ಆಗಿದೆ.

18 ಬಾರಿ ಪ್ರಸ್ತಾವನೆ!
ಬಾಕಿ ಭತ್ತೆ ಪಾವತಿಸಲು ಹೆಚ್ಚುವರಿ ಅನುದಾನ ಒದಗಿಸು ವಂತೆ ಕೋರಿ ತಾಂತ್ರಿಕ ಶಿಕ್ಷಣ ಇಲಾಖೆಯು 2018ರಿಂದ ಇದುವರೆಗೆ (2020 ಮೇ 15 ತನಕ) 18 ಬಾರಿ ಪ್ರಸ್ತಾವನೆಗಳನ್ನು ಸರಕಾರಕ್ಕೆ ಕಳುಹಿಸಿದೆ. ಆದರೂ ಅನುದಾನ ಬಂದಿಲ್ಲ!

ಮಂಗಳೂರಿನಲ್ಲಿ 1 ಕೋ.ರೂ. ಭತ್ತೆ
ಮಂಗಳೂರಿನ ಕೆಪಿಟಿ ಮತ್ತು ಡಬ್ಲ್ಯೂ ಪಿಟಿಗಳಲ್ಲಿ 2 ವರ್ಷಗಳಿಂದ ಅರೆಕಾಲಿಕ ಉಪನ್ಯಾಸಕರಿಗೆ 1 ಕೋಟಿ ರೂ. ಪಾವತಿ ಬಾಕಿ ಇದೆ. ಕೆಪಿಟಿಯ 57 ಉಪನ್ಯಾಸಕರಿಗೆ 2018- 19ರಲ್ಲಿ 23 ಲಕ್ಷ ರೂ. ಹಾಗೂ 2019-20ರಲ್ಲಿ 50 ಲಕ್ಷ ರೂ. ಸಹಿತ ಒಟ್ಟು 73 ಲಕ್ಷ ರೂ. ಬಾಕಿ ಇದೆ. ಡಬ್ಲ್ಯೂ ಪಿಟಿಯಲ್ಲಿ 2018- 19ರಲ್ಲಿ 19 ಉಪನ್ಯಾಸಕರಿಗೆ 3.45 ಲಕ್ಷ ರೂ. ಹಾಗೂ 2019-20ರಲ್ಲಿ 21 ಉಪನ್ಯಾಸಕರಿಗೆ 23.63 ಲಕ್ಷ ರೂ. ಸೇರಿದಂತೆ ಒಟ್ಟು 27.08 ಲಕ್ಷ ರೂ. ಬಾಕಿ ಇದೆ.

ರಾಜ್ಯದಲ್ಲಿ 85 ಸರಕಾರಿ ಪಾಲಿಟೆಕ್ನಿಕ್‌ಗಳಿದ್ದು, 1,038 ಮಂದಿ ಅರೆಕಾಲಿಕ ಉಪನ್ಯಾಸಕರಿದ್ದಾರೆ. ದ.ಕ.ದಲ್ಲಿ 3 ಸರಕಾರಿ ಪಾಲಿಟೆಕ್ನಿಕ್‌ಗಳಿದ್ದು, ಮಂಗಳೂರಿನ ಕೆಪಿಟಿಯಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ (57) ಸಂಖ್ಯೆಯ ಅರೆಕಾಲಿಕ ಉಪನ್ಯಾಸಕರಿದ್ದಾರೆ.

Advertisement

ಅರೆಕಾಲಿಕ ಉಪನ್ಯಾಸಕರಿಗೆ ಮಾಸಿಕ ಭತ್ತೆ 7,500 ರೂ. ಇತ್ತು. 10 ವರ್ಷಗಳ ಹೋರಾಟದ ಬಳಿಕ ಇತ್ತೀಚೆಗೆ 12,500 ರೂ.ಗೇರಿದೆ. ಕೆಲಸ ಕೇವಲ 8 ತಿಂಗಳು ಮಾತ್ರ. ಈ 8 ತಿಂಗಳ ಭತ್ತೆ ಪಾವತಿಗೂ ವಿಳಂಬ ನೀತಿ ಖೇದಕರ. ಸರಕಾರದ ನೀತಿಗೆ ಬೇಸತ್ತು ಚಿಕ್ಕಮಗಳೂರಿನ ಸರಕಾರಿ ಪಾಲಿಟೆಕ್ನಿಕ್‌ನಿಂದ ಈಗಾಗಲೇ ಕೆಲವು ಉಪನ್ಯಾಸಕರು ಕೆಲಸ ತೊರೆದಿದ್ದಾರೆ.

ಮಾನವೀಯ ನಡೆ
ಶೈಕ್ಷಣಿಕ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿದರೂ ಉಪನ್ಯಾಸಕರಿಗೆ ನ್ಯಾಯವಾಗಿ ಸಿಗಬೇಕಾದ ಮೊತ್ತ ಪಾವತಿಸದ ಸರಕಾರದ ನೀತಿ ಅಮಾನವೀಯ. ಕೊರೊನಾದ ಈ ಸಂಕಷ್ಟದ ಕಾಲದಲ್ಲಾದರೂ ಬಾಕಿ ಇರುವ ಗೌರವ ಧನ ಬಿಡುಗಡೆಯಾದರೆ ಕೊಂಚ ನೆಮ್ಮದಿ ಕಾಣಬಹುದು.
– ಎಂ. ಪ್ರಶಾಂತ್‌, ಅಧ್ಯಕ್ಷರು, ಅ.ಕ. ಸರಕಾರಿ ಪಾಲಿಟೆಕ್ನಿಕ್‌ ಅರೆಕಾಲಿಕ ಉಪನ್ಯಾಸಕರ ಸಂಘ

ಪಾವತಿಗೆ ಕ್ರಮ
85 ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿರುವ ಅರೆಕಾಲಿಕ ಉಪನ್ಯಾಸಕರ ಭತ್ತೆ ಪಾವತಿಸಲು 2020- 21ನೇ ಸಾಲಿನಲ್ಲಿ ಸರಕಾರವು ಹೊಸ ಉಪ ಶೀರ್ಷಿಕೆಯನ್ನು ಸೃಜಿಸಿ 12.86 ಕೋ.ರೂ. ಒದಗಿಸಿದ್ದು, ಹಿಂದಿನ ವರ್ಷಗಳಲ್ಲಿ ಬಾಕಿ ಇರುವ ಮೊತ್ತವನ್ನು 2020- 21ನೇ ಸಾಲಿನಲ್ಲಿ ಒದಗಿಸಲಾದ ಅನುದಾನದಲ್ಲಿ ಭರಿಸಲು ಕ್ರಮ ಕೈಗೊಳ್ಳಲಾಗುವುದು.
– ಡಾ| ಅಶ್ವತ್ಥ ನಾರಾಯಣ,
ಉಪ ಮುಖ್ಯಮಂತ್ರಿ ಹಾಗೂ
ತಾಂತ್ರಿಕ ಶಿಕ್ಷಣ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next