ಶಹಾಬಾದ: ಗ್ರಾಮದ ಮತ್ತು ಗ್ರಾಮಸ್ಥರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ ಎಂದು ಗ್ರೇಡ್-2 ತಹಶೀಲ್ದಾರ್ ಗುರುರಾಜ ಸಂಗಾವಿ ಹೇಳಿದರು.
ತಾಲೂಕಿನ ಗೋಳಾ (ಕೆ) ಗ್ರಾಮದಲ್ಲಿ ಆಯೋಜಿಸಲಾಗಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಇವುಗಳ ಬಗ್ಗೆ ಗ್ರಾಮೀಣ ಜನರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇವುಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ವೈಯಕ್ತಿಕ ಹಾಗೂ ಸಮುದಾಯದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಪ್ರಯತ್ನಿಸಲಾಗುವುದು. ಅಗತ್ಯವಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಪ್ರಮುಖವಾಗಿ ರೈತರು, ಅಂಗವಿಕಲರು, ವೃದ್ಧರು, ಮಹಿಳೆಯರು, ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಜಿಲ್ಲೆ, ತಾಲೂಕು ಕೇಂದ್ರಗಳಿಗೆ ಅಲೆದಾಡುವುದನ್ನು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಗ್ರಾಮಸ್ಥರಿಂದ ಸುಮಾರು 24 ಅರ್ಜಿಗಳು ಬಂದಿದ್ದು, ಅಂಗವಿಕಲ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನಕ್ಕೆ ಸಂಬಂಧಿಸಿದಂತೆ 21 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಲಾಯಿತು. ಇನ್ನುಳಿದ ಮೂರು ಅರ್ಜಿಗಳನ್ನು ಎರಡು ದಿನಗಳಲ್ಲಿ ಮಂಜೂರು ಮಾಡಲಾಗುವುದು. ವಿವಿಧ ಇಲಾಖೆಗಳಿಂದ ಆರು ಅರ್ಜಿಗಳು ಬಂದಿದ್ದು, ಆಯಾ ಅಧಿಕಾರಿಗಳಿಗೆ ತಿಳಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದೆಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಸುಷ್ಮಾ ಮರಲಿಂಗ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ, ಸಿಡಿಪಿಒ ಬಿ.ಎಸ್.ಹೊಸಮನಿ, ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಶಕುಂತಲಾ ಸಾಕ್ರೆ, ಮುಖ್ಯಶಿಕ್ಷಕಿ ಹೇಮಾಬಾಯಿ ಠಾಕೂರ, ಲೋಕೋಪಯೋಗಿ ಇಲಾಖೆಯ ಮಹ್ಮದ್ ಉಸ್ಮಾನ ಗನಿ, ಗ್ರಾಪಂ ಸದಸ್ಯರಾದ ಉಮಾದೇವಿ, ಕೃಷಿ ಅಧಿಕಾರಿ ಶಶಿಕಾಂತ, ಶಿರಸ್ತೇದಾರ ಸಯ್ಯದ್ ಹಾಜಿ, ಕಂದಾಯ ಅಧಿಕಾರಿ ಹಣಮಂತರಾಯ ಪಾಟೀಲ, ಭೂಮಾಪಕ ಇಲಾಖೆಯ ನಾಗಾರ್ಜುನ, ವೈದ್ಯಾಧಿಕಾರಿ ಡಾ| ಶಿವುಕುಮಾರ, ಆಹಾರ ನಿರೀಕ್ಷಕ ಶ್ರೀಕಾಂತ, ಕಂದಾಯ ಇಲಾಖೆ ಸಿಬ್ಬಂದಿ ಶಿವಾನಂದ, ಶ್ರೀಮಂತ, ಇಮ್ರಾನ್, ಪಾರ್ವತಿ, ರಂಗನಾಥ, ಶ್ರೀನಿವಾಸ, ಸೈಯದ್ ಮಜರುದ್ದಿನ್ ಖಾದ್ರಿ, ಮರಲಿಂಗ ಗಂಗಭೋ, ಗಂಗಾಧರ ಮತ್ತಿತರರು ಇದ್ದರು.