Advertisement

5 ವರ್ಷಗಳ ಬಳಿಕ ಪಿಲಿಕುಳದಲ್ಲಿ ಸರಕಾರಿ ಕಂಬಳ

11:19 PM Oct 17, 2019 | Team Udayavani |

ಮಂಗಳೂರು: ಐದು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಪಿಲಿಕುಳ ಕಂಬಳವನ್ನು ಮರಳಿ ಆರಂಭಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಒಲವು ತೋರಿದ್ದು, ಜನವರಿ / ಫೆಬ್ರವರಿಯಲ್ಲಿ ಆಯೋಜಿಸಲು ತೀರ್ಮಾನಿಸಿದೆ. ಸರಕಾರದ ವತಿಯಿಂದ ನಡೆಯುವ ಕಂಬಳ ಇದೊಂದೇ.

Advertisement

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸರಕಾರಿ ಕಂಬಳ ಆಯೋಜನೆಗೆ ಉತ್ಸುಕತೆ ವ್ಯಕ್ತವಾಯಿತು. ಶಾಸಕರಾದ ಯು.ಟಿ. ಖಾದರ್‌, ರಾಜೇಶ್‌ ನಾೖಕ್‌ ಮತ್ತು
ಉಮಾನಾಥ ಕೋಟ್ಯಾನ್‌ ಅವರು ಸರಕಾರಿ ಕಂಬಳವನ್ನು ಯಶಸ್ವಿಯಾಗಿ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಂಬಳ ಆಯೋಜನೆಗೆ ಇರುವ ಕಾನೂ ನಾತ್ಮಕ ತೊಡಕುಗಳ ಬಗ್ಗೆ ಸರಕಾರದಿಂದ ಸೂಕ್ತ ಮಾಹಿತಿ ಪಡೆದುಕೊಳ್ಳುವುದು ಅವಶ್ಯ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಸಚಿವರ ಗಮನಕ್ಕೆ ತಂದರು. ಸರಕಾರಕ್ಕೆ ಪತ್ರ ಬರೆದು ಮಾಹಿತಿ ಪಡೆದುಕೊಳ್ಳುವಂತೆಯೂ ಅನುದಾನದ ಬಗ್ಗೆ ಸೂಕ್ತ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸುವಂತೆಯೂ ತಿಳಿಸಿದರು.

ಪಿಲಿಕುಳ ಕಂಬಳ ನಡೆಯುವುದಾದರೆ ದ.ಕ, ಉಡುಪಿ, ಕಾಸರಗೋಡು ಭಾಗದಿಂದ ಸುಮಾರು 100ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸಲಿವೆ. ಗದ್ದೆ ಸಮತಟ್ಟು ಮಾಡುವುದು, ಕಂಬಳ ಪ್ರಶಸ್ತಿ ಮತ್ತು ಎಲ್ಲ ರೀತಿಯ ಖರ್ಚನ್ನು ಜಿಲ್ಲಾಡಳಿತವೇ ನಿರ್ವಹಿಸಬೇಕಾಗಿದೆ.

2014ರಲ್ಲಿ ಕೊನೆಯ ಕಂಬಳ
ಪಿಲಿಕುಳದಲ್ಲಿ 2014ರಲ್ಲಿ ಕೊನೆಯದಾಗಿ “ನೇತ್ರಾವತಿ-ಫಲ್ಗುಣಿ ಜೋಡುಕರೆ ಕಂಬಳ’ ನಡೆದಿತ್ತು. ಬಳಿಕ ಕಂಬಳದ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡಿದ್ದರಿಂದ ಕಂಬಳ ಆಯೋಜನೆಯಿಂದ ಜಿಲ್ಲಾಡಳಿತ ಹಿಂದೆ ಸರಿದಿತ್ತು. ಕಳೆದ ವರ್ಷ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಕಂಬಳ ಆಯೋಜನೆಗೆ ಒಲವು ತೋರಿದ್ದರು. ಜಿಲ್ಲಾಡಳಿತ, ಜಿಲ್ಲಾ ಕಂಬಳ ಸಮಿತಿ ಮತ್ತು ಪಿಲಿಕುಳದ ನೇತೃತ್ವದಲ್ಲಿ ಸರ್ವೇ ನಡೆಸಿದ್ದರು.

Advertisement

ಕಂಬಳ ಗದ್ದೆ ಸುಸ್ಥಿತಿಗೆ 2 ತಿಂಗಳು ಅಗತ್ಯ!
ಐದು ವರ್ಷಗಳಿಂದ ಕಂಬಳ ನಡೆಯದ್ದರಿಂದ ಪಿಲಿಕುಳದ ಗದ್ದೆ ಸಂಪೂರ್ಣ ಬರಡಾಗಿದೆ. ಕಲ್ಲು- ಮುಳ್ಳು ತುಂಬಿ ಕೋಣಗಳು ಕಾಲಿಡಲೂ ಆಗದಂತಹ ಪರಿಸ್ಥಿತಿ ಇದೆ. ಗದ್ದೆ ಮತ್ತು ಸುತ್ತಮುತ್ತಲ ಪ್ರದೇಶ ಸಮತಟ್ಟು ಮಾಡಿ ಕಂಬಳ ಆಯೋಜಿಸಲು ಕನಿಷ್ಠ 2 ತಿಂಗಳು ಅಗತ್ಯ. ಜಿಲ್ಲಾಡಳಿತದ ಎಲ್ಲ ಕ್ರಮಕ್ಕೆ ಕಂಬಳ ಸಮಿತಿ ಸಹಕಾರ ನೀಡಲಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್‌. ಶೆಟ್ಟಿ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next